ಶನಿವಾರ, ಅಕ್ಟೋಬರ್ 1, 2022
20 °C

ಅಮೆರಿಕದ ಸಿನ್ಸಿನಾಟಿ ಎಫ್‌ಬಿಐ ಕಚೇರಿಗೆ ನುಗ್ಗಲು ಯತ್ನ: ಬಂದೂಕುಧಾರಿಯ ಹತ್ಯೆ

ಪಿಟಿಐ Updated:

ಅಕ್ಷರ ಗಾತ್ರ : | |

ವಿಲ್ಮಿಂಗ್ಟನ್: ಎಫ್‌ಬಿಐನ ಸಿನ್ಸಿನಾಟಿ ಕಚೇರಿಗೆ ಪ್ರವೇಶಿಸಲು ಯತ್ನಿಸಿದ ಶಸ್ತ್ರಸಜ್ಜಿತ ವ್ಯಕ್ತಿಯನ್ನು ಅಮೆರಿಕ ಪೊಲೀಸರು ಗುಂಡು ಹಾರಿಸಿ ಕೊಂದಿದ್ಧಾರೆ.

ದೇಹದ ರಕ್ಷಾಕವಚವನ್ನು ಧರಿಸಿದ್ದ ವ್ಯಕ್ತಿ ಪೊಲೀಸರಿಂದ ತಪ್ಪಿಸಿಕೊಳ್ಳಲೂ ಯತ್ನಿಸಿದ್ದ. ಒಹಿಯೊ ರಾಜ್ಯದ ಗ್ರಾಮೀಣ ಭಾಗದಲ್ಲಿ ಗಂಟೆಗಳ ಕಾಲ ಗುಂಡಿನ ಚಕಮಕಿ ಸಹ ನಡೆಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಫ್ಲಾರಿಡಾದ ಮಾರ್-ಎ-ಲಾಗೊ ಎಸ್ಟೇಟ್‌ನ ಮನೆಯಲ್ಲಿ ಎಫ್‌ಬಿಐ ಶೋಧ ಕಾರ್ಯಾಚರಣೆ ನಡೆಸಿದ ಬಳಿಕ ಎಫ್‌ಬಿಐ ಏಜೆಂಟರ್‌ಗಳಿಗೆ ಬೆದರಿಕೆ ಹೆಚ್ಚಾಗುವ ಬಗ್ಗೆ ಈ ಮೊದಲೇ ಅಧಿಕಾರಿಗಳು ಎಚ್ಚರಿಕೆ ನೀಡಿದ್ದರು. ಅದರ ಬೆನ್ನಲ್ಲೇ, ಈ ದಾಳಿ ಯತ್ನ ನಡೆದಿದೆ.

ಹತ್ಯೆಯಾದ ವ್ಯಕ್ತಿ ಜನವರಿ 6, 2021ರ ಕ್ಯಾಪಿಟಲ್ ಭವನದ ಮೇಲಿನ ದಾಳಿಯ ಹಿಂದಿನ ದಿನಗಳಲ್ಲಿ ವಾಷಿಂಗ್ಟನ್‌ನಲ್ಲಿದ್ದನು ಎಂದು ಹೇಳಲಾಗಿದೆ. ದಾಳಿಯ ದಿನದಂದು ಕ್ಯಾಪಿಟಲ್‌ ಭವನದಲ್ಲಿ ಇದ್ದಿರಬಹುದು ಎಂದು ಕಾನೂನು ಜಾರಿ ಅಧಿಕಾರಿಯೊಬ್ಬರು ವಿವರಿಸಿದ್ದಾರೆ.

ಕಾನೂನು ಜಾರಿ ಅಧಿಕಾರಿಯ ಪ್ರಕಾರ, ಮೃತನನ್ನು ರಿಕಿ ಶಿಫರ್ (42) ಎಂದು ಗುರುತಿಸಲಾಗಿದೆ. ಜನವರಿ 6ರ ದಾಳಿಗೆ ಸಂಬಂಧಿಸಿದಂತೆ ಆತನ ಮೇಲೆ ಯಾವುದೇ ಅಪರಾಧದ ಆರೋಪ ಹೊರಿಸಲಾಗಿಲ್ಲ ಎಂದೂ ಅವರು ಹೇಳಿದ್ದಾರೆ. ಈತನಿಗೆ ಬಲಪಂಥೀಯ ಗುಂಪುಗಳೊಂದಿಗೆ ಸಂಬಂಧವಿತ್ತೇ ಎಂಬುದನ್ನು ಫೆಡರಲ್ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಸಿನಿಮೀಯ ಮಾದರಿ ಕಾರ್ಯಾಚರಣೆ
ಫೆಡರಲ್ ಅಧಿಕಾರಿಗಳ ಪ್ರಕಾರ, ಶಿಫರ್ ಬೆಳಿಗ್ಗೆ 9:15 ರ ಸುಮಾರಿಗೆ ಎಫ್‌ಬಿಐ ಕಚೇರಿಯಲ್ಲಿ ಸಂದರ್ಶಕರ ಸ್ಕ್ರೀನಿಂಗ್ ಪ್ರದೇಶವನ್ನು ಮೀರಿ ಒಳಗೆ ನುಗ್ಗಲು ಯತ್ನಿಸಿದ್ದಾನೆ. ಎಫ್‌ಬಿಐ ಏಜೆಂಟ್‌ಗಳು ಆತನನ್ನು ತಡೆದಾಗ ಸ್ಥಳದಿಂದ ಓಡಿಹೋಗಿದ್ದಾನೆ. ಆತನನ್ನು ಬೆನ್ನಟ್ಟಿದ್ದ ಪೊಲೀಸರು ಅಂತರರಾರಜ್ಯ ಹೆದ್ದಾರಿ 71 ರ ಬಳಿ ಪತ್ತೆ ಮಾಡಿ ಗಂಟೆಗಳ ಕಾರ್ಯಾಚರಣೆ ಬಳಿಕ ಗುಂಡು ಹಾರಿಸಿ ಕೊಂದಿದ್ದಾರೆ’ ಎಂದು ಒಹಿಯೊ ರಾಜ್ಯ ಹೆದ್ದಾರಿ ಪೊಲೀಸ್ ಪಡೆಯ ವಕ್ತಾರ ನಥನ್ ಡೆನ್ನಿಸ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು

ಸಿನ್ಸಿನಾಟಿಯ ಗ್ರಾಮೀಣ ಹೆದ್ದಾರಿಯಲ್ಲಿ ಕಾರನ್ನು ಬಿಟ್ಟು ಬಂದಿದ್ದ ಶಿಫರ್, ಹಿಂಬಾಲಿಸಿದ ಪೊಲೀಸರ ಮೇಲೆ ಗುಂಡು ಹಾರಿಸಿದ್ದ. ಶರಣಾಗುವಂತೆ ಪೊಲೀಸರು ಕೊಟ್ಟ ಎಚ್ಚರಿಕೆಯನ್ನು ಉಲ್ಲಂಘಿಸಿ ಗುಂಡಿನ ಕಾಳಗ ನಡೆಸಿದ್ದ, ಹಾಗಾಗಿ, ಗುರುವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಪೊಲೀಸರು ಪ್ರತಿ ದಾಳಿ ನಡೆಸಿ ಆತನನ್ನು ಕೊಂದಿದ್ದಾರೆ.

ಈ ಪ್ರದೇಶದಲ್ಲಿ ಪೊಲೀಸರ ಹೆಲಿಕಾಪ್ಟರ್ ಹಾರುತ್ತಿದ್ದಂತೆ ರಾಜ್ಯ ಹೆದ್ದಾರಿ ಕೆಲಸಗಾರರು ಘಟನಾ ಸ್ಥಳಕ್ಕೆ ಸಂಪರ್ಕಿಸುತ್ತಿದ್ದ ರಸ್ತೆಗಳನ್ನು ನಿರ್ಬಂಧಿಸಿದರು. ಅಂತರರಾಜ್ಯ ಗಡಿ ಬಳಿಯ ಒಂದು ಮೈಲಿ ಪ್ರದೇಶವನ್ನು ಅಧಿಕಾರಿಗಳು ಬಂದ್ ಮಾಡಿದರು. ಅಂಗಡಿಗಳನ್ನು ಮುಚ್ಚಿಸಿ, ನಿವಾಸಿಗಳನ್ನು ಒಳಗೆ ಇರುವಂತೆ ಸೂಚಿಸಲಾಗಿತ್ತು. ಒಟ್ಟಾರೆ ಸಿನಿಮೀಯ ಮಾದರಿಯಲ್ಲಿ ಕಾರ್ಯಾಚರಣೆ ನಡೆಯಿತು.

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು