ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌: ಚೀನಾದ ಪ್ರಯಾಣಿಕರಿಗೆ ತಪಾಸಣೆ ಹೆಚ್ಚಿಸಿದ ಅಮೆರಿಕ

Last Updated 6 ಜನವರಿ 2023, 13:54 IST
ಅಕ್ಷರ ಗಾತ್ರ

ನೆವಾರ್ಕ್, ಅಮೆರಿಕ: ಚೀನಾದಲ್ಲಿ ಕೋವಿಡ್ ಸೋಂಕು ಪ್ರಕರಣಗಳು ಗಣನೀಯವಾಗಿ ಏರಿಕೆ ಕಾಣುತ್ತಿರುವ ಹಿಂದೆಯೇ, ಅಮೆರಿಕವು ವಾಯುಮಾರ್ಗದಲ್ಲಿ ಬರುವ ಪ್ರಯಾಣಿಕರನ್ನು ತಪಾಸಣೆಗೆ ಒಳಪಡಿಸುವ ಕ್ರಮವನ್ನು ಹೆಚ್ಚಿಸಿದೆ. ಅಮೆರಿಕದ ಕ್ರಮಕ್ಕೆ ನಾಗರಿಕರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.

ಕೋವಿಡ್‌ನ ರೂಪಾಂತರ ತಳಿಪತ್ತೆ ಕ್ರಮವಾಗಿ ಸರ್ಕಾರ ವಿಮಾನನಿಲ್ದಾಣದಲ್ಲಿ ಪ್ರಯಾಣಿಕರ ತಪಾಸಣೆಗೆ ಒತ್ತು ನೀಡಿದೆ. ಲಾಸ್‌ ಏಂಜಲೀಸ್‌ನ ವಿಮಾನ ನಿಲ್ದಾಣ ಸೇರಿದಂತೆ ಏಳು ಪ್ರಮುಖ ನಿಲ್ದಾಣಗಳಲ್ಲಿ ತಪಾಸಣೆ ಮಾಡಲಾಗುತ್ತಿದೆ.

ವಿವಿಧ ದೇಶಗಳಿಂದ ಸುಮಾರು 500 ವಿಮಾನಗಳಲ್ಲಿ ಬಂದ ಪ್ರಯಾಣಿಕರ ತಪಾಸಣೆ ನಡೆಸಿದ್ದು, ಈ ಪೈಕಿ ಹೆಚ್ಚಿನ ವಿಮಾನಗಳು ಚೀನಾ ಮತ್ತು ಆಸುಪಾಸಿನ ನಗರಗಳಿಂದ ಬರುವ ವಿಮಾನಗಳಾಗಿವೆ ಎಂಬುದು ಗಮನಾರ್ಹ.

ಸದ್ಯ ಚೀನಾ, ಹಾಂಗ್‌ಕಾಂಗ್‌ನಿಂದ ಬರುವ ಪ್ರಯಾಣಿಕರು, ಪ್ರಯಾಣಕ್ಕೆ ಎರಡು ದಿನ ಮೊದಲು ಕೋವಿಡ್‌ ಪರೀಕ್ಷೆಗೆ ಒಳಪಟ್ಟು, ನೆಗೆಟಿವ್ ವರದಿ ನೀಡುವುದು ಕಡ್ಡಾಯ. ಜೊತೆಗೆ, ವಿಮಾನದ ಶೌಚದಿಂದ ತ್ಯಾಜ್ಯ ನೀರು ತೆರವು ಕಾರ್ಯದಲ್ಲೂ ಎಚ್ಚರಿಕೆ ವಹಿಸಬೇಕು ಎಂದು ವಿಜ್ಞಾನಿಗಳು ಸಲಹೆ ಮಾಡಿದ್ದಾರೆ.

‘ಕಟ್ಟುನಿಟ್ಟಿನ ತಪಾಸಣೆ ನಡೆಸದೇ ಏನಾಗುತ್ತಿದೆ ಎಂದು ತಿಳಿಯುವುದು ಕಷ್ಟವಾಗಲಿದೆ’ ಎಂದು ಜಾನ್‌ ಹಾಕಿನ್ಸ್‌ ಯೂನಿವರ್ಸಿಟಿಯ ಸಾಂಕ್ರಾಮಿಕ ಸೋಂಕು ಪರಿಣತ ಡಾ.ಸ್ಟುವರ್ಟ್ ಕ್ಯಾಂಬೆಲ್ ರೇ ಅಭಿಪ್ರಾಯಪಡುತ್ತಾರೆ. ‘ಹೆಚ್ಚು ಮಾದರಿ ಲಭ್ಯವಾದಂತೆ, ಪ್ರಸರಣವಾಗುವ ಸೋಂಕಿನ ಮಾಹಿತಿಯೂ ಲಭ್ಯವಾಗಲಿದೆ’ ಎಂದಿದ್ದಾರೆ.

ವಿಮಾನಪ್ರಯಾಣಿಕರು ಜಗತ್ತಿನ ವಿವಿಧೆಡೆ ಕಡಿಮೆ ಅವಧಿಯಲ್ಲಿ ತೆರಳುತ್ತಾರೆ. ಇವರಿಗೆ ಸೋಂಕು ಬೇಗನೇ ತಗುಲುವ ಸಾಧ್ಯತೆಗಳಿರುತ್ತವೆ ಎಂದು ಸಿಡಿಸಿ ಪ್ರಯಾಣಿಕರ ಆರೋಗ್ಯ ಶಾಖೆಯ ಮುಖ್ಯಸ್ಥ ಡಾ.ಸಿಂಡಿ ಫ್ರೈಡ್‌ಮನ್‌ ಅಭಿಪ್ರಾಯಪಡುತ್ತಾರೆ.

ಪ್ರಸ್ತುತ ಚೀನಾದಲ್ಲಿ ಸೋಂಕು ಪ್ರಮಾಣ ಹೆಚ್ಚಲು ಬಿಎಫ್‌.7 ರೂಪಾಂತರ ತಳಿ ಕಾರಣ. ಸಿಡಿಸಿ ವರದಿ ಪ್ರಕಾರ, ಈ ಸೋಂಕು ಈಗಾಗಲೇ ಅಮೆರಿಕದಲ್ಲಿಯೂ ಕಂಡುಬಂದಿದ್ದು, ಒಟ್ಟು ಪ್ರಕರಣದಲ್ಲಿ ಶೇ 2ರಷ್ಟಿದೆ.

ಎಚ್ಚರವಾಗಿರಿ: ಜನತೆಗೆ ಚೀನಾ ಸಲಹೆ
ಬೀಜಿಂಗ್‌
: ಚೀನಾದಲ್ಲಿ ಇದೇ ತಿಂಗಳು ಹೊಸ ವರ್ಷಾಚರಣೆ ನಿಮಿತ್ತ ಜನದಟ್ಟಣೆ ಹೆಚ್ಚಲಿರುವ ಕಾರಣ, ಸೋಂಕು ತಡೆ ಮುಂಜಾಗ್ರತೆಯಾಗಿ ಎಚ್ಚರಿಕೆ ವಹಿಸುವಂತೆ ಚೀನಾ ಸರ್ಕಾರ ಜನತೆಗೆ ಸಲಹೆ ನೀಡಿದೆ.

ಪ್ರವಾಸಕ್ಕೆ ತೆರಳುವುದು, ಗುಂಪುಗಳಲ್ಲಿ ಸೇರುವುದು, ಮುಖ್ಯವಾಗಿ ವಯಸ್ಕರು, ಗರ್ಭಿಣಿಯರು, ಮಕ್ಕಳು ಮತ್ತು ಅನಾರೋಗ್ಯ ಸಮಸ್ಯೆ ಉಳ್ಳವರನ್ನು ಜನದಟ್ಟಣೆಯಿಂದ ದೂರ ಇರುವಂತೆ ಎಚ್ಚರವಹಿಸಬೇಕು ಎಂದು ಹೇಳಿದೆ.

ಸಾರ್ವಜನಿಕ ವಾಹನ ಬಳಸುವವರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು, ಆರೋಗ್ಯ ಸ್ಥಿತಿ, ವೈಯಕ್ತಿಕ ಶುಚಿತ್ವ ಕುರಿತು ಹೆಚ್ಚಿನ ಆದ್ಯತೆ ನೀಡಬೇಕು ಎಂದು ಸಚಿವ ಕ್ಸುಚೆಂಗ್ ಗುವಾಂಗ್‌ ಅವರು ಹೇಳಿದರು.

ಈಗಾಗಲೇ ಕೋವಿಡ್‌ ನಿರ್ಬಂಧಗಳನ್ನು ಸಡಿಲಗೊಳಿಸಿರುವ ಚೀನಾ, ಭಾನುವಾರದಿಂದ ಜಾರಿಗೆ ಬರುವಂತೆ ವಿದೇಶಗಳಿಂದ ಬರುವವರು ಕ್ವಾರಂಟೈನ್‌ನಲ್ಲಿ ಇರುವುದು ಕಡ್ಡಾಯ ಎಂಬ ನಿಬಂಧನೆಯನ್ನು ಕೈಬಿಟ್ಟಿದೆ.

21ಕ್ಕೂ ಹೆಚ್ಚು ದೇಶಗಳಲ್ಲಿ ಕಡ್ಡಾಯ ತಪಾಸಣೆ
ವಾಷಿಂಗ್ಟನ್‌ (ರಾಯಿಟರ್ಸ್):
ಭಾರತ ಸೇರಿದಂತೆ 21 ರಾಷ್ಟ್ರಗಳು ಮತ್ತು ಫ್ರಾನ್ಸ್‌ ಒಳಗೊಂಡು ಐರೋಪ್ಯ ಒಕ್ಕೂಟದ ಸದಸ್ಯ ರಾಷ್ಟ್ರಗಳು ಕೋವಿಡ್‌ ಸೋಂಕು ತಡೆ ಕ್ರಮವಾಗಿ ಚೀನಾದಿಂದ ಬರುವ ಪ್ರಯಾಣಿಕರಿಗೆ ತಪಾಸಣೆಯನ್ನು ಕಡ್ಡಾಯಗೊಳಿಸಿವೆ.

ಒಂದೆಡೆ ಕೋವಿಡ್‌ ಸೋಂಕು ತಡೆ ಮುಂಜಾಗ್ರತೆ ಕ್ರಮಗಳನ್ನು ಚೀನಾ ಸಡಿಲಗೊಳಿಸಿದ್ದರೆ, ಆ ದೇಶದ ಪ್ರಯಾಣಿಕರಿಗೆ ವಿದೇಶಗಳಲ್ಲಿ ನಿರ್ಬಂಧ ಕ್ರಮಗಳು ಹೆಚ್ಚುತ್ತಿವೆ.

ಭಾರತದಲ್ಲಿ ಚೀನಾ, ಹಾಂಗ್‌ಕಾಂಗ್‌, ಜಪಾನ್, ದಕ್ಷಿಣ ಕೊರಿಯಾ, ಸಿಂಗಪುರ, ಥೈಲ್ಯಾಂಡ್‌ನಿಂದ ಬರುವ ಪ್ರಯಾಣಿಕರಿಗೆ ಕೋವಿಡ್‌ ನೆಗೆಟಿವ್ ವರದಿ ಹಾಜರಿಯನ್ನು ಕಡ್ಡಾಯಗೊಳಿಸಲಾಗಿದೆ. ಈ ದೇಶಗಳಿಂದ ಬರುವ ಪ್ರಯಾಣಿಕರಿಗೆ ಸೋಂಕು ದೃಢಪಟ್ಟರೆ, ಕ್ಯಾರಂಟೈನ್‌ನಲ್ಲಿ ಇರಿಸಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT