ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇರಾನ್: ಮಹ್ಸಾ ಅಮಿನಿ ಸಾವು ಖಂಡಿಸಿ ಪ್ರತಿಭಟನೆ– 50 ಜನರ ಸಾವು

Last Updated 24 ಸೆಪ್ಟೆಂಬರ್ 2022, 4:30 IST
ಅಕ್ಷರ ಗಾತ್ರ

ಪ್ಯಾರಿಸ್: ನೈತಿಕ ಪೊಲೀಸರ(morality police) ಕಸ್ಟಡಿಯಲ್ಲಿದ್ದ 22 ವರ್ಷದ ಯುವತಿ ಮಹ್ಸಾ ಅಮಿನಿ ಸಾವು ಖಂಡಿಸಿ ಇರಾನ್‌ನಲ್ಲಿ ಪ್ರತಿಭಟನೆ ತೀವ್ರಗೊಂಡಿದೆ.

ಪ್ರತಿಭಟನಾಕಾರರ ಮೇಲೆ ಇರಾನ್ ಭದ್ರತಾ ಪಡೆಗಳು ನಡೆಸಿದ ಗುಂಡಿನ ದಾಳಿಯಲ್ಲಿ ಕನಿಷ್ಠ 50 ಜನರು ಸಾವಿಗೀಡಾಗಿದ್ದಾರೆ ಎಂದು ಎನ್‌ಜಿಒವೊಂದು ಶುಕ್ರವಾರ ತಿಳಿಸಿದೆ.

ಉತ್ತರ ಗಿಲಾನ್ ಪ್ರಾಂತ್ಯದ ರೆಜ್ವಾನ್‌ಶಹರ್ ಪಟ್ಟಣದಲ್ಲಿ ಗುರುವಾರ ರಾತ್ರಿ ಭದ್ರತಾ ಪಡೆಗಳು ನಡೆಸಿದ ಗುಂಡಿನ ದಾಳಿಯಲ್ಲಿ ಮತ್ತೆ ಆರು ಜನರು ಸಾವಿಗೀಡಾದ ನಂತರ ಮೃತರ ಸಂಖ್ಯೆ 50ಕ್ಕೆ ಮುಟ್ಟಿದೆ ಎಂದು ಓಸ್ಲೋ ಮೂಲದ ಇರಾನ್ ಮಾನವ ಹಕ್ಕುಗಳ(ಐಎಚ್‌ಆರ್) ಸರ್ಕಾರೇತರ ಸಂಸ್ಥೆ ಹೇಳಿದೆ. ಉತ್ತರ ಇರಾನ್‌ನ ಬಾಬೋಲ್ ಮತ್ತು ಅಮೋಲ್‌ನಲ್ಲಿ ಇತರ ಸಾವುಗಳು ವರದಿಯಾಗಿವೆ.

ಒಂದು ವಾರದಿಂದ ಪ್ರತಿಭಟನೆಗಳು ಆರಂಭವಾಗಿದ್ದು, ಸುಮಾರು 80 ನಗರಗಳು ಮತ್ತು ಇತರ ನಗರ ಕೇಂದ್ರಗಳಿಗೆ ವ್ಯಾಪಿಸಿದೆ ಎಂದು ಅದು ಹೇಳಿದೆ.

ಉತ್ತರ ಕುರ್ದಿಸ್ತಾನ್ ಪ್ರದೇಶದಲ್ಲಿಯೂ ಸಾವು ಸಂಭವಿಸಿವೆ ಎಂದು ಮಾನವ ಹಕ್ಕುಗಳ ಸಂಘಟನೆ ಹೇಳಿದೆ.

‘ಈವರೆಗೆ ಕನಿಷ್ಠ 50 ಜನರು ಸಾವಿಗೀಡಾಗಿದ್ದಾರೆ. ಜನರು ತಮ್ಮ ಮೂಲಭೂತ ಹಕ್ಕುಗಳು ಮತ್ತು ಘನತೆಗಾಗಿ ಪ್ರತಿಭಟನೆಯನ್ನು ಮುಂದುವರೆಸಿದ್ದಾರೆ’ಎಂದು ಐಎಚ್‌ಆರ್ ನಿರ್ದೇಶಕ ಮಹಮೂದ್ ಅಮಿರಿ-ಮೊಗದ್ದಮ್ ತಿಳಿಸಿದರು.

‘ಈ ದಮನಕಾರಿ ಆಡಳಿತದ ವಿರುದ್ಧ ಅಂತರರಾಷ್ಟ್ರೀಯ ಸಮುದಾಯವು ಇರಾನ್ ಜನರ ಪರವಾಗಿ ನಿಲ್ಲಬೇಕು’ಎಂದು ಅವರು ಹೇಳಿದರು.

ಇರಾನ್ ಅಧಿಕಾರಿಗಳು ಬಿಡುಗಡೆ ಮಾಡಿರುವ ಅಧಿಕೃತ ಮಾಹಿತಿ ಪ್ರಕಾರ, ಘರ್ಷಣೆಯಲ್ಲಿ ಐದು ಭದ್ರತಾ ಸಿಬ್ಬಂದಿ ಸೇರಿ ಕನಿಷ್ಠ 17 ಮಂದಿ ಮೃತಪಟ್ಟಿದ್ದಾರೆ.

ಸರಿಯಾಗಿ ಹಿಜಾಬ್ ಧರಿಸಿರಲಿಲ್ಲ ಎಂದು ಆರೋಪಿಸಿ ಮಹ್ಸಾ ಅಮಿನಿ ಅವರನ್ನು ಬಂಧಿಸಲಾಗಿತ್ತು. ಪೊಲೀಸ್ ಕಸ್ಟಡಿಯಲ್ಲೇ ಅವರು ಮೃತಪಟ್ಟಿದ್ದರು. ಮಹ್ಸಾ ಅವರನ್ನು ಪೊಲೀಸರು ತೀವ್ರ ಹಲ್ಲೆ ಮಾಡಿ ಕೊಂದಿದ್ದಾರೆ ಎಂಬುದು ಪ್ರತಿಭಟನಾಕಾರರ ಆರೋಪವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT