ಕಾಬುಲ್: ಅಫ್ಗಾನಿಸ್ತಾನದ ವಿದೇಶಾಂಗ ಸಚಿವಾಲಯದ ಕಚೇರಿ ಬಳಿ ಸೋಮವಾರ ಆತ್ಮಹತ್ಯಾ ದಾಳಿ ನಡೆದಿದ್ದು, 6 ಮಂದಿ ಮೃತಪಟ್ಟು, ಹಲವರು ಗಾಯಗೊಂಡಿದ್ದಾರೆ ಎಂದು ಆಂತರಿಕ ಸಚಿವಾಲಯ ಹೇಳಿದೆ.
ಬ್ಯುಸಿನೆಸ್ ಸೆಂಟರ್ ಮುಂಭಾಗ ಸ್ಪೊಟಿಸಿಕೊಂಡ ದಾಳಿಕೋರನನ್ನು ಅಫ್ಗಾನ್ ಪಡೆ ಗುರುತಿಸಿತ್ತು ಎಂದು ಆಂತರಿಕ ಸಚಿವಾಲಯದ ವಕ್ತಾರ ಅಬ್ದುಲ್ ನಫಿ ಟಕೊರ್ ತಿಳಿಸಿದ್ದಾರೆ.
ಗಾಯಗೊಂಡ ಕೆಲವರನ್ನು ಚಿಕಿತ್ಸೆಗೆ ದಾಖಲಿಸಲಾಗಿದೆ ಎಂದು ಕಾಬುಲ್‌ನಲ್ಲಿ ಇಟಲಿ ಮೂಲದ ಸರ್ಕಾರೇತರ ಸಂಸ್ಥೆಯೊಂದು(ಎನ್‌ಜಿಒ) ನಡೆಸುತ್ತಿರುವ ಆಸ್ಪತ್ರೆ ಹೇಳಿದೆ.
ಕಾಬುಲ್‌ನಲ್ಲಿ ಯುದ್ಧದ ಗಾಯಾಳುಗಳಿಗೆ ಚಿಕಿತ್ಸೆ ನೀಡಲೆಂದೇ ಪರಿಣಿತ ಸರ್ಜಿಕಲ್ ಸೆಂಟರ್ ಅನ್ನು ಎನ್‌ಜಿಒ ನಡೆಸುತ್ತಿದೆ. ಗಾಯಾಳುಗಳಲ್ಲಿ ಒಂದು ಮಗು ಸಹ ಇದೆ ಎಂದೂ ಸೋಜಾ ಹೇಳಿದ್ದಾರೆ.
ದಾಳಿಯ ಹೊಣೆಯನ್ನು ಯಾವುದೇ ಭಯೋತ್ಪಾದಕ ಸಂಘಟನೆ ಹೊತ್ತುಕೊಂಡಿಲ್ಲ.
ಹಲವು ಸರ್ಕಾರಿ ಕಚೇರಿಗಳು, ವಿದೇಶಿ ರಾಯಭಾರ ಕಚೇರಿಗಳಿರುವ ಜನನಿಬಿಡ ಪ್ರದೇಶದಲ್ಲಿ ಪ್ರಬಲ ಸ್ಫೋಟದ ಸದ್ದು ಕೇಳಿಸಿತು ಎಂದು ಇಬ್ಬರು ಸ್ಥಳೀಯರು ಸುದ್ದಿ ಸಂಸ್ಥೆ ರಾಯಿಟರ್ಸ್‌ಗೆ ತಿಳಿಸಿದ್ದಾರೆ.
ಮೂರು ತಿಂಗಳಿಗೂ ಕಡಿಮೆ ಅವಧಿಯಲ್ಲಿ ವಿದೇಶಾಂಗ ಸಚಿವಾಲಯದ ಬಳಿ ನಡೆದ 2ನೇ ದಾಳಿ ಇದಾಗಿದೆ. ಅಲ್ಲದೆ, ರಂಜಾನ್ ತಿಂಗಳ ಆರಂಭದಲ್ಲೇ ದಾಳಿ ನಡೆದಿದೆ.
ಜನವರಿಯಲ್ಲಿ ನಡೆದಿದ್ದ ಆತ್ಮಹತ್ಯಾ ದಾಳಿಯಲ್ಲಿ 10 ಮಂದಿ ಸಾವಿಗೀಡಾಗಿದ್ದರು. 53ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.