ಮಂಗಳವಾರ, ಡಿಸೆಂಬರ್ 1, 2020
19 °C
ಅಮೆರಿಕದಲ್ಲಿ ಮತ್ತೆ ಲೌಕ್‌ಡೌನ್ ಬೇಕೇಬೇಡವೇ?–ಚರ್ಚೆ ಆರಂಭ

ಕೊರೊನಾ ಸೋಂಕು ವ್ಯಾಪಕ: ಬೈಡನ್ ಮುಂದಿದೆ ಸವಾಲುಗಳ ಮಹಾಪೂರ

ಎಪಿ/ಪಿಟಿಐ Updated:

ಅಕ್ಷರ ಗಾತ್ರ : | |

ಜೋ ಬೈಡನ್

ವಾಷಿಂಗ್ಟನ್: ಅಮೆರಿಕದಲ್ಲಿ ಕೋವಿಡ್ ವ್ಯಾಪಕವಾಗಿ ಹೆಚ್ಚುತ್ತಿದ್ದು, ಸೋಂಕು ನಿಯಂತ್ರಿಸಲು ಅಮೆರಿಕವನ್ನು ಲಾಕ್‌ಡೌನ್ ಮಾಡಬೇಕೇ ಬೇಡವೇ ಎನ್ನುವ ಸವಾಲು ನಿಯೋಜಿತ ಅಧ್ಯಕ್ಷ ಜೋ ಬೈಡೆನ್ ಅವರಿಗೆ ಎದುರಾಗಿದೆ.

ಸೋಂಕು ನಿಯಂತ್ರಣಕ್ಕೆ ಮಾಸ್ಕ್ ಬಳಸುವಂತೆ ಈಗಾಗಲೇ ಬೈಡನ್ ಜನರಲ್ಲಿ ಮನವಿ ಮಾಡಿದ್ದಾರೆ.

‘ಅಮೆರಿಕದ ಸಾರ್ವಜನಿಕ ಆರೋಗ್ಯದ ವಿಚಾರದಲ್ಲಿ ಟ್ರಂಪ್‌ಗಿಂತ ನಾನು ಹೆಚ್ಚು ಜವಾಬ್ದಾರಿಯುತವಾಗಿ ನಡೆದುಕೊಳ್ಳುವೆ’ ಎಂದು ಜೋ ಬೈಡನ್ ತಮ್ಮ ಚುನಾವಣಾ ಪ್ರಚಾರದುದ್ದಕ್ಕೂ ಹೇಳಿಕೊಂಡಿದ್ದರು. ಕೋವಿಡ್ ಉಚಿತ ಪರೀಕ್ಷೆ, ಸಾವಿರಾರು ಆರೋಗ್ಯ ಕಾರ್ಯಕರ್ತರ ನೇಮಕ ಮಾಡುವುದು ಸೇರಿದಂತೆ ಅನೇಕ ಭರವಸೆ ನೀಡಿದ್ದರು.

ಚುನಾವಣೆಯಲ್ಲಿ ಗೆದ್ದ ಬಳಿಕ ಬೈಡನ್ ಅವರಿಗೆ ಸೋಂಕು ನಿಯಂತ್ರಣದ ಸವಾಲು ಎದುರಾಗಿದೆ. ಲಾಕ್‌ಡೌನ್ ಮಾಡಬೇಕೇ ಅಥವಾ ಬೇಡವೇ ಎನ್ನುವ ಗೊಂದಲವೂ ಎದುರಾಗಿದೆ.

ತುರ್ತುಕ್ರಮ: ‘ನಾನು ಅಧ್ಯಕ್ಷನಾಗಿ ಆಯ್ಕೆ ಆಗಿರಬಹುದು. ಆದರೆ, ಮುಂದಿನ ವರ್ಷದವರೆಗೆ ಅಧಿಕಾರ ವಹಿಸಿಕೊಳ್ಳಲು ಸಾಧ್ಯವಿಲ್ಲ. ಕೋವಿಡ್‌ ಸಾಂಕ್ರಾಮಿಕವು ದಿನಾಂಕಗಳನ್ನು ನೋಡುವುದಿಲ್ಲ. ಈಗ ಸೋಂಕು ತೀವ್ರವಾಗಿ ಹೆಚ್ಚುತ್ತಿದೆ. ಇದರ ನಿಯಂತ್ರಣಕ್ಕೆ ಪ್ರಸ್ತುತ ಆಡಳಿತದಿಂದ ತುರ್ತು ಕ್ರಮದ ಅಗತ್ಯವಿದೆ' ಎಂದು ಜೋ ಬೈಡನ್‌ ಹೇಳಿದ್ದಾರೆ

ಅಮೆರಿಕದ ಕೊರೊನಾ ವೈರಸ್ ನಿಯಂತ್ರಣ ಸಲಹಾ ಮಂಡಳಿ ಸದಸ್ಯರಲ್ಲೊಬ್ಬರಾದ ಡಾ.ಮೈಕೇಲ್ ಓಸ್ಲರ್ ಹೋಂ ಕಳೆದ ವಾರ, ‘ಅಮೆರಿಕದ ಜನರ ಜೀವನೋಪಾಯಕ್ಕೆ ಧಕ್ಕೆಯಾಗದಂತೆ ಆರ್ಥಿಕ ನೆರವು ನೀಡಿ, ನಾಲ್ಕರಿಂದ ಆರು ವಾರಗಳ ಕಾಲ ಅಮೆರಿಕವನ್ನು ಲಾಕ್‌ಡೌನ್ ಮಾಡಬೇಕು’ ಎಂದು ಸಲಹೆ ನೀಡಿದ್ದರು. ಇದಕ್ಕೆ ಟೀಕೆಗಳು ವ್ಯಕ್ತವಾದ ಬೆನ್ನಲ್ಲೇ ಡಾ.ಮೈಕೇಲ್ ತಮ್ಮ ಸಲಹೆಯನ್ನು ಹಿಂತೆಗೆದುಕೊಂಡಿದ್ದರು.

ಬೈಡನ್ ಅವರು ನೇಮಿಸಿರುವ ಕೋವಿಡ್ ಕಾರ್ಯಪಡೆಯ ಹಲವು ಸದಸ್ಯರು ಕೂಡಾ ಲಾಕ್‌ಡೌನ್ ಘೋಷಣೆಗೆ ಟೀಕೆಗಳನ್ನು ವ್ಯಕ್ತಪಡಿಸಿದ್ದರು.

ಈ ನಡುವೆ ಅಮೆರಿಕದಲ್ಲಿ ಶನಿವಾರ ಒಂದೇ ದಿನ 1.70ಲಕ್ಷದಷ್ಟು ಕೊರೊನಾ ಸೋಂಕು ಪ್ರಕರಣಗಳು ವರದಿಯಾಗಿವೆ.

ಅಮೆರಿಕದ ಕೋವಿಡ್ ಸಲಹಾ ಪಡೆಯ ಅಧ್ಯಕ್ಷರಲ್ಲೊಬ್ಬರಾದ ಡಾ.ವಿವೇಕ್ ಮೂರ್ತಿ, ‘ವೈರಸ್‌ನ ತೀವ್ರತೆಯ ಆಧಾರದ ಮೇಲೆ ನಿರ್ಬಂಧಗಳನ್ನು ಪರಿಶೀಲಿಸಲಾಗುತ್ತಿದೆ. ಇಡೀ ದೇಶವನ್ನು ಲಾಕ್‌ಡೌನ್ ಮಾಡಿ ಎಂದು ಘೋಷಿಸುವ ಸ್ಥಿತಿಯಲ್ಲಿ ನಾವಿಲ್ಲ.ಆದರೆ, ನಾವು ಲಾಕ್‌ಡೌನ್ ಮಾಡದಿದ್ದರೂ ಜನರು ಮತ್ತಷ್ಟು ಸೋಂಕಿಗೆ ಗುರಿಯಾಗುತ್ತಾರೆ. ಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಮಕ್ಕಳಿಗೆ ಶಾಲೆ ಇರುವುದಿಲ್ಲ. ಆರ್ಥಿಕ ಸ್ಥಿತಿಯೂ ಕಠಿಣವಾಗಲಿದೆ. ಆದ್ದರಿಂದ ಇದನ್ನು ನಾವು ವೈಜ್ಞಾನಿಕವಾಗಿಯೇ ಎದುರಿಸಬೇಕಿದೆ’ ಎಂದು ಎಬಿಸಿಯ ‘ಗುಡ್‌ಮಾರ್ನಿಂಗ್ ಅಮೆರಿಕ’ಕ್ಕೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ.

ಜಾರ್ಜಿಯಾ: ಬೈಡನ್‌ಗೆ ಐತಿಹಾಸಿಕ ಗೆಲುವು

ಜಾರ್ಜಿಯಾದಲ್ಲಿ ನಡೆದ ಮರು ಮತ ಎಣಿಕೆಯಲ್ಲಿ ಜೋ ಬೈಡನ್, ಟ್ರಂಪ್ ಅವರ ವಿರುದ್ಧ ಐತಿಹಾಸಿಕ ಗೆಲುವು ಸಾಧಿಸಿದ್ದಾರೆ. ಆದರೆ, ಉತ್ತರ ಕೆರೊಲಿನಾದಲ್ಲಿ ಟ್ರಂಪ್ ಹೆಚ್ಚು ಮತಗಳಿಸಿದ್ದಾರೆ.

ಜಾರ್ಜಿಯಾ ಮತ್ತು ಉತ್ತರ ಕೆರೊಲಿನಾ ಅಮೆರಿಕದ ಅಧ್ಯಕ್ಷೀಯ ಚುನಾವಣಾ ಸ್ಪರ್ಧೆಯ ಕೊನೆಯ ರಾಜ್ಯಗಳಾಗಿವೆ. ಜಾರ್ಜಿಯಾದಲ್ಲಿ ಬೈಡನ್ 16 ಎಲೆಕ್ಟೊರಲ್ ಮತಗಳನ್ನು ಪಡೆದಿದ್ದು, ಅವರ ಒಟ್ಟು ಮತಗಳ ಸಂಖ್ಯೆ 306ಕ್ಕೆ ಏರಿದೆ.

* ಬೈಡನ್ ಲೌಕ್‌ಡೌನ್ ಘೋಷಿಸಿದಲ್ಲಿ ನಾನದನ್ನು ಬೆಂಬಲಿಸುವುದಿಲ್ಲ. ಇದು ಅಮೆರಿಕದ ಆರ್ಥಿಕತೆಯ ಮೇಲೆ ಕೆಟ್ಟ ಪರಿಣಾಮ ಬೀರುವ ಸಾಧ್ಯತೆ ಇದೆ

- ಡೊನಾಲ್ಡ್ ಟ್ರಂಪ್, ಅಮೆರಿಕದ ಅಧ್ಯಕ್ಷ 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು