ಶನಿವಾರ, ಮೇ 21, 2022
26 °C
BSF demands FIR against Pakistani pigeon

ಪಾಕ್‌ ಪಾರಿವಾಳದ ವಿರುದ್ಧ ಎಫ್‌ಐಆರ್ ದಾಖಲಿಸಲು ಬಿಎಸ್‌ಎಫ್ ಕೋರಿಕೆ

ಪಿಟಿಐ‌ Updated:

ಅಕ್ಷರ ಗಾತ್ರ : | |

Prajavani

ಅಮೃತಸರ: ಪಾಕಿಸ್ತಾನದಿಂದ ಅಕ್ರಮವಾಗಿ ಭಾರತದ ಗಡಿಯೊಳಗೆ ನುಗ್ಗಿರುವ ಪಾರಿವಾಳದ ವಿರುದ್ಧ ಎಫ್ಐಆರ್ ದಾಖಲಿಸಲು ಗಡಿ ಭದ್ರತಾ ಪಡೆಯು (ಬಿಎಸ್‌ಎಫ್‌) ಅನುಮತಿ ಕೋರಿದೆ.

ಈ ಸಂಬಂಧ ಪಂಜಾಬ್ ಪೊಲೀಸರು ಕಾನೂನು ಅಭಿಪ್ರಾಯ ಕೋರಿದ್ದಾರೆ.‌

ಕಳೆದ ಶನಿವಾರ ಇಲ್ಲಿನ ರೊರಾವಾಲಾ ಪೋಸ್ಟ್‌ನಲ್ಲಿರುವ ಗಡಿಭದ್ರತಾ ಪಡೆಯ ಸೈನಿಕನ ಭುಜದ ಮೇಲೆ ಪಾರಿವಾಳವೊಂದು ಕೂತಿತ್ತು. ಗಡಿಯುದ್ದಕ್ಕೂ ಹಾರಾಟದ ನಡೆಸಿದ್ದ ಈ ಪಾರಿವಾಳದ ಕಾಲಿಗೆ ಸಂಪರ್ಕ ಸಂಖ್ಯೆ ಹೊಂದಿದ್ದ ಸಣ್ಣದೊಂದು ಕಾಗದದ ತುಂಡನ್ನೂ ಸುತ್ತಲಾಗಿತ್ತು ಎಂದು ಬಿಎಸ್‌ಎಫ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪಾರಿವಾಳವನ್ನು ಪೊಲೀಸರಿಗೆ ಒಪ್ಪಿಸಿರುವ ಬಿಎಸ್‌ಎಫ್ ಸಿಬ್ಬಂದಿ ಅದರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಲಿಖಿತವಾಗಿ ಕೋರಿದ್ದಾರೆ.

‘ಬಿಎಸ್‌ಎಫ್ ಸಿಬ್ಬಂದಿಯು ಪಾರಿವಾಳದ ವಿರುದ್ಧ ಎಫ್‌ಐಆರ್ ದಾಖಲಿಸಬೇಕೆಂದು ಕೋರಿದ್ದಾರೆ. ಆದರೆ, ಪಾರಿವಾಳ ಪಕ್ಷಿ ಆಗಿರುವುದರಿಂದ ಅದರ ವಿರುದ್ಧ ಎಫ್‌ಐಆರ್ ದಾಖಲಿಸಲು ಸಾಧ್ಯವಿಲ್ಲ ಎಂದು ನನಗೆ ಅನಿಸುತ್ತದೆ. ಆದರೆ, ಈ ಬಗ್ಗೆ ಕಾನೂನು ಅಭಿಪ್ರಾಯವನ್ನು ಕೋರಲಾಗಿದೆ. ಪಾರಿವಾಳದ ಕಾಲಿಗೆ ಕಟ್ಟಲಾಗಿದ್ದ ಕಾಗದ ತುಂಡಿನ ಕುರಿತು ಪರಿಶೀಲಿಸಲಾಗುತ್ತಿದೆ’ ಎಂದು ಹಿರಿಯ ಪೊಲೀಸ್ ಅಧಿಕಾರಿ ಧ್ರುವ ದಹಿಯಾ ತಿಳಿಸಿದ್ದಾರೆ.

ಗಡಿಪ್ರದೇಶಗಳಲ್ಲಿ ಗೂಢಚರ್ಯೆ ಕಾರ್ಯಗಳಿಗಾಗಿ ಪಾರಿವಾಳವನ್ನು ಬಳಸಲಾಗುತ್ತದೆ. ಕೊರಿಯರ್ ಮಾದರಿಯಲ್ಲಿ ಪಾರಿವಾಳಗಳನ್ನು ಬಳಸಿ ಅವುಗಳ ಮೂಲಕ ಗುಪ್ತಸಂದೇಶಗಳನ್ನೂ ಕಳುಹಿಸಲಾಗುತ್ತದೆ. ಕೆಲವೊಮ್ಮೆ ಪಾರಿವಾಳಗಳ ಗುರುತಿಗಾಗಿಯೂ ಸಾಕುವವರು ಅವುಗಳ ಕಾಲಿಗೆ ಟ್ಯಾಗ್ ಅನ್ನು ಕಟ್ಟಿರಬಹುದು ಎನ್ನುವ ಅಭಿಪ್ರಾಯಗಳೂ ವ್ಯಕ್ತವಾಗಿವೆ.

ಸದ್ಯಕ್ಕೆ ಪಾರಿವಾಳವು ಖಾಂಗಾರದ ಪೊಲೀಸ್ ಠಾಣೆಯಲ್ಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು