ಭಾನುವಾರ, ಅಕ್ಟೋಬರ್ 25, 2020
28 °C
ವಿದೇಶಾಂಗ ಕಾರ್ಯದರ್ಶಿ ಮೈಕ್‌ ಪಾಂಪಿಯೊ ಕಿಡಿ

ಭಾರತದ ಗಡಿಯಲ್ಲಿ ಚೀನಾದಿಂದ 60 ಸಾವಿರ ಸೈನಿಕರ ನಿಯೋಜನೆ: ಅಮೆರಿಕ

ಪಿಟಿಐ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್‌: ‘ಭಾರತದ ಉತ್ತರ ಗಡಿಯಲ್ಲಿ ಚೀನಾ 60 ಸಾವಿರ ಯೋಧರನ್ನು ನಿಯೋಜಿಸಿದೆ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್‌ ಪಾಂಪಿಯೊ ತಿಳಿಸಿದ್ದಾರೆ.

‘ಚೀನಾ ನಡವಳಿಕೆ ಕೆಟ್ಟದಾಗಿದೆ. ಅಮೆರಿಕ, ಜಪಾನ್‌, ಭಾರತ ಮತ್ತು ಆಸ್ಟ್ರೇಲಿಯಾಗೆ ಚೀನಾ ಬೆದರಿಕೆವೊಡ್ಡುತ್ತಿದೆ’ ಎಂದು ದೂರಿದ್ದಾರೆ.

ಟೋಕಿಯೊದಲ್ಲಿ ಜಪಾನ್‌, ಭಾರತ ಮತ್ತು ಆಸ್ಟ್ರೇಲಿಯಾದ ವಿದೇಶಾಂಗ ಸಚಿವರ ಜತೆ ಕಳೆದ ಮಂಗಳವಾರ ನಡೆದ ಸಭೆಯಲ್ಲಿ ಮೈಕ್‌ ಪಾಂಪಿಯೊ ಪಾಲ್ಗೊಂಡಿದ್ದರು. ಪೂರ್ವ ಲಡಾಖ್‌ನಲ್ಲಿನ ವಾಸ್ತವ ನಿಯಂತ್ರಣ ರೇಖೆ (ಎಲ್‌ಎಸಿ) ಮತ್ತು ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾ ಸೇನೆ ಆಕ್ರಮಣಕಾರಿಯಾಗಿ ವರ್ತಿಸಿದ ಬಳಿಕ  ಈ ಸಭೆ ನಡೆದಿದ್ದರಿಂದ ಮಹತ್ವ ಪಡೆದಿತ್ತು. ವಾಷಿಂಗ್ಟನ್‌ಗೆ ಹಿಂತಿರುಗಿದ ಬಳಿಕ ಶುಕ್ರವಾರ ಪಾಂಪಿಯೊ ಈ ಹೇಳಿಕೆ ನೀಡಿದ್ದಾರೆ.

‘ನಾಲ್ಕು ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರಗಳು, ನಾಲ್ಕು ಅತಿ ದೊಡ್ಡ ಆರ್ಥಿಕತೆ ಹೊಂದಿರುವ ರಾಷ್ಟ್ರಗಳಿಗೆ ಚೀನಾದ ಕಮ್ಯೂನಿಸ್ಟ್‌ ಪಕ್ಷ ಬೆದರಿಕೆವೊಡ್ಡಲು ಪ್ರಯತ್ನಿಸುತ್ತಿದೆ’ ಎಂದು ಪಾಂಪಿಯೊ ಹೇಳಿದ್ದಾರೆ.

’ಚೀನಾ ವಿಷಯದಲ್ಲಿ ಬಹುದೀರ್ಘ ಕಾಲ ನಾವು ನಿರ್ಲಕ್ಷ್ಯ ಮಾಡಿದ್ದು ತಪ್ಪಾಗಿದೆ.  ಪಾಶ್ಚಿಮಾತ್ಯ ರಾಷ್ಟ್ರಗಳ ಮೇಲೆ ಸವಾರಿ ಮಾಡಲು ದಶಕಗಳ ಕಾಲ ಚೀನಾದ ಕಮ್ಯುನಿಸ್ಟ್‌ ಪಕ್ಷ ಅವಕಾಶ ನೀಡಿದ್ದೇವೆ. ಈ ಹಿಂದಿನ ಆಡಳಿತ ಚೀನಾದ ಮುಂದೆ ಮಂಡಿಯೂರಿತು. ನಮ್ಮ ಬೌದ್ಧಿಕ ಆಸ್ತಿಯನ್ನು ಕದಿಯಲು ಚೀನಾಗೆ ಅವಕಾಶ ನೀಡಲಾಯಿತು’ ಎಂದು ಕಿಡಿಕಾರಿದ್ದಾರೆ.

‘ಚೀನಾ ವಿರುದ್ಧದ ಹೋರಾಟದಲ್ಲಿ ಅಮೆರಿಕದ ಸ್ನೇಹವನ್ನು ಈ ಎಲ್ಲ ರಾಷ್ಟ್ರಗಳು ಬಯಸಿವೆ. ಚೀನಾದಿಂದ ಎದುರಾಗಿರುವ ಬೆದರಿಕೆಗೆ ತಕ್ಕ ಪ್ರತ್ಯುತ್ತರ ನೀಡುವ ನಿಟ್ಟಿನಲ್ಲಿ ಜಂಟಿಯಾಗಿ ನೀತಿ ರೂಪಿಸುವ ಬಗ್ಗೆ ಚರ್ಚಿಸಲಾಗಿದೆ’ ಎಂದು  ತಿಳಿಸಿದ್ದಾರೆ.

‘ಚೀನಾದಿಂದ ಉಂಟಾಗಿರುವ ಅಪಾಯವನ್ನು ಎದುರಿಸಲು ಸಜ್ಜಾಗಿದ್ದೇವೆ. ಯಾವುದೇ ಬೆದರಿಕೆಗೆ ಮಣಿಯದೆ ಅಮೆರಿಕದ ಜನರನ್ನು ರಕ್ಷಿಸುತ್ತೇವೆ’ ಎಂದು ಹೇಳಿದ್ದಾರೆ.

‘ವುಹಾನ್‌ ವೈರಸ್‌ ಕುರಿತು ತನಿಖೆ ನಡೆಸುವಂತೆ ಆಸ್ಟ್ರೇಲಿಯಾ ಒತ್ತಾಯಿಸಿದರೆ ಚೀನಾ ಬೆದರಿಕೆವೊಡ್ಡಿತು. ಈಗ ಜಗತ್ತು ಎಚ್ಚೆತ್ತುಕೊಂಡಿದೆ. ಯಾವುದೇ ರೀತಿಯ ಸರ್ವಾಧಿಕಾರ ಆಡಳಿತಕ್ಕೆ ಅವಕಾಶ ನೀಡುವುದಿಲ್ಲ’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು