ಭೂಕಂಪದಿಂದ ತತ್ತರಿಸಿರುವ ಟರ್ಕಿಗೆ ತುರ್ತು ನೆರವು ಘೋಷಿಸಿದ ಚೀನಾ

ಬೀಜಿಂಗ್ (ಚೀನಾ): ಪ್ರಬಲ ಭೂಕಂಪದಿಂದ ತತ್ತರಿಸಿರುವ ಟರ್ಕಿಗೆ ಚೀನಾ 6 ಮಿಲಿಯನ್ ಡಾಲರ್ (ಅಂದಾಜು ₹ 50 ಕೋಟಿ) ತುರ್ತು ನೆರವು ಘೋಷಿಸಿದೆ ಎಂದು ಸರ್ಕಾರದ ವಾಹಿನಿ ಸಿಸಿಟಿವಿ ವರದಿ ಮಾಡಿದೆ.
ಟರ್ಕಿಗೆ ನೀಡುವ ತುರ್ತು ನೆರವಿನ ಮೊದಲ ಕಂತಿನಲ್ಲಿ ಚೀನಾ 40 ಮಿಲಿಯನ್ ಯುವಾನ್ (5.9 ಮಿಲಿಯನ್ ಡಾಲರ್) ಒದಗಿಸಲಿದೆ ಎಂದು ವರದಿ ತಿಳಿಸಿದೆ.
ಟರ್ಕಿಯ ಪ್ರಮುಖ ನಗರ ಮತ್ತು ಪ್ರಾಂತೀಯ ರಾಜಧಾನಿಯಾದ ಗಾಜಿಯಾಂಟೆಪ್ ಸಮೀಪ 17.9 ಕಿ.ಮೀ. ಆಳದಲ್ಲಿ ಸೋಮವಾರ ಮುಂಜಾನೆ 4.17ರ ಹೊತ್ತಿಗೆ 7.8 ತೀವ್ರತೆಯ ಭೂಕಂಪ ಸಂಭವಿಸಿತ್ತು. ಇದರಿಂದಾಗಿ ಹಲವು ನಗರಗಳಲ್ಲಿ ಕಟ್ಟಡಗಳು ಕುಸಿದಿವೆ. ನೆರೆಯ ದೇಶ ಸಿರಿಯಾದಲ್ಲೂ ತೀವ್ರ ಹಾನಿಯುಂಟಾಗಿದೆ. ಮಧ್ಯಪ್ರಾಚ್ಯ ದೇಶಗಳಾದ ಲೆಬನಾನ್, ಸೈಪ್ರಸ್ ಹಾಗೂ ಈಜಿಪ್ಟ್‌ನಲ್ಲಿಯೂ ಭೂಮಿ ಕಂಪಿಸಿತ್ತು.
ಈ ವರೆಗೆ 120ಕ್ಕೂ ಹೆಚ್ಚು ಸಲ ಭೂಮಿ ಕಂಪಿಸಿರುವುದು ವರದಿಯಾಗಿದೆ.
LIVE: Rescue operations in Turkey after deadly quake https://t.co/2DEc8pNxUR
— Reuters (@Reuters) February 7, 2023
ದುರಂತದಲ್ಲಿ ಇದುವರೆಗೆ 4,300ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ಟರ್ಕಿಯಲ್ಲಿ ಈವರೆಗೆ 2,921 ಮಂದಿ ಹಾಗೂ ಸಿರಿಯಾದಲ್ಲಿ 1,451 ಜನರು ಮೃತಪಟ್ಟಿದ್ದಾರೆ ಎಂದು ಬಿಬಿಸಿ ವರದಿ ಮಾಡಿದೆ.
ಚೀನಾ, ಟರ್ಕಿ ಹಾಗೂ ಸಿರಿಯಾದಲ್ಲಿ ವರದಿಯಾಗಿರುವ ಜೀವ ಹಾನಿ ಹಾಗೂ ಅಪಾರ ನಷ್ಟದ ಬಗ್ಗೆ ಸಂತಾಪ ಸೂಚಿಸಿ, ಕಳವಳ ವ್ಯಕ್ತಪಡಿಸಿದೆ. ಎರಡೂ ದೇಶಗಳೊಂದಿಗೆ ಸಂವಹನ ನಡೆಸುತ್ತಿದೆ ಎಂದು ಚೀನಾದ ಅಂತರರಾಷ್ಟ್ರೀಯ ಸಹಕಾರ ಅಭಿವೃದ್ಧಿ ಮಂಡಳಿಯ ವಕ್ತಾರರು ತಿಳಿಸಿದ್ದಾರೆ.
ಇದನ್ನೂ ಓದಿ: ಮತ್ತೆ 5.6 ತೀವ್ರತೆಯ ಭೂಕಂಪ: ಟರ್ಕಿ, ಸಿರಿಯಾದಲ್ಲಿ 4,300ಕ್ಕೂ ಅಧಿಕ ಮಂದಿ ಸಾವು
ಚೀನಾದ ರೆಡ್ ಕ್ರಾಸ್ ಸಂಘಟನೆ ಭೂಕಂಪ ಪೀಡಿತ ಎರಡೂ ದೇಶಗಳಿಗೆ ತಲಾ 2 ಲಕ್ಷ ಡಾಲರ್ (₹ 1.65 ಕೋಟಿ) ನೀಡಲಿದೆ ಎಂದೂ ಸಿಸಿಟಿವಿ ಉಲ್ಲೇಖಿಸಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.