ಭಾನುವಾರ, ನವೆಂಬರ್ 29, 2020
22 °C
ಕೋವಿಡ್‌–19 ಪ್ರಕರಣಗಳ ಏರಿಕೆ

ಭಾರತದಿಂದ ವಿಶೇಷ ವಿಮಾನಗಳ ಪ್ರವೇಶಕ್ಕೆ ಚೀನಾ ನಿರ್ಬಂಧ

ಏಜೆನ್ಸೀಸ್‌ Updated:

ಅಕ್ಷರ ಗಾತ್ರ : | |

ಏರ್‌ ಇಂಡಿಯಾ ವಿಶೇಷ ವಿಮಾನ

ಬೀಜಿಂಗ್‌: ವಂದೇ ಭಾರತ್‌ ಮಿಷನ್‌ ಅಡಿಯಲ್ಲಿ ಭಾರತದಿಂದ ವಿಶೇಷ ವಿಮಾನಗಳ ಮೂಲಕ ಚೀನಾ ಪ್ರವೇಶಿಸುವುದಕ್ಕೆ ಅಡ್ಡಿ ಎದುರಾಗಿದೆ. ಚೀನೀಯರನ್ನು ಹೊರತು ಪಡಿಸಿ ಭಾರತದಿಂದ ಇನ್ನಾರಿಗೂ ಚೀನಾ ಪ್ರವೇಶಿಸಲು ಅನುಮತಿ ನಿರಾಕರಿಸಲಾಗಿದೆ.

ಕಳೆದ ವಾರ ವಂದೇ ಭಾರತ್‌ ಮಿಷನ್‌ ಅಡಿಯಲ್ಲಿ ಚೀನಾ ಪ್ರವೇಶಿಸಿರುವವರ ಪೈಕಿ ಹಲವು ಜನರಿಗೆ ಕೋವಿಡ್‌–19 ದೃಢಪಟ್ಟಿದ್ದು, ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿರುವ ಕಾರಣ ಅನಿರ್ದಿಷ್ಟಾವಧಿ ವರೆಗೂ ಚೀನಾ ನಿರ್ಬಂಧ ಹೇರಿದೆ. ಭಾರತ ಮತ್ತು ಚೀನಾ ನಡುವೆ ಖಾಸಗಿ ವಿಮಾನಗಳ ಹಾರಾಟ ಪುನರಾರಂಭವಾಗಿಲ್ಲ. ಆದರೆ, ಚೀನಾದ ವಿವಿಧ ನಗರಗಳಿಗೆ ವಂದೇ ಭಾರತ್‌ ಮಿಷನ್‌ ಅಡಿಯಲ್ಲಿ 'ಏರ್‌ ಇಂಡಿಯಾ' ವಿಶೇಷ ವಿಮಾನಗಳ ಹಾರಾಟ ನಡೆಸುತ್ತಿದೆ.

ವಾಸದ ಕುರಿತು ಸೂಕ್ತ ಅನುಮತಿ ದಾಖಲೆಗಳನ್ನು ಹೊಂದಿರುವ ಎಲ್ಲ ವಿದೇಶಿಯರಿಗೆ ಚೀನಾ ಪ್ರವೇಶಿಸಲು ಬೀಜಿಂಗ್‌ ಆಡಳಿತವು ಸೆಪ್ಟೆಂಬರ್‌ 28ರಂದು ಅವಕಾಶ ನೀಡಿತ್ತು. ಜಗತ್ತಿನಾದ್ಯಂತ ಕೊರೊನಾ ಸಾಂಕ್ರಾಮಿಕ ವ್ಯಾಪಿಸುತ್ತಿದ್ದಂತೆ ಮಾರ್ಚ್‌ನಿಂದ ವಿದೇಶಿಯರ ಪ್ರವೇಶವನ್ನು ಚೀನಾ ರದ್ದು ಪಡಿಸಿತ್ತು.

ಬೀಜಿಂಗ್‌ನಲ್ಲಿರುವ ಅಧಿಕಾರಿಗಳ ಪ್ರಕಾರ, 1,500ಕ್ಕೂ ಹೆಚ್ಚು ಭಾರತೀಯರು ಚೀನಾಗೆ ಮರಳಲು ನೋಂದಾಯಿಸಿಕೊಂಡಿದ್ದರು. ಆದರೆ, ಚೀನಾದ ಹೊಸ ಪ್ರಕಟಣೆಯಿಂದಾಗಿ ಅವರ ಪ್ರಯಾಣಕ್ಕೆ ಅನಿಶ್ಚಿತತೆ ಎದುರಾಗಿದೆ. 'ಸಾಂಕ್ರಾಮಿಕ ನಿಯಂತ್ರಿಸುವ ನಿಟ್ಟಿನಲ್ಲಿ ಇದೊಂದು ಸೂಕ್ತ ನಿರ್ಧಾರವಾಗಿದೆ' ಎಂದು ಚೀನಾದ ವಿದೇಶಾಂಗ ಸಚಿವಾಲಯವು ನಿರ್ಧಾರವನ್ನು ಸಮರ್ಥಿಸಿಕೊಂಡಿದೆ.

ನವೆಂಬರ್‌ 13ರಿಂದ ಪ್ರತಿ ವಾರ ಚೀನಾಗೆ ಪ್ರಯಾಣಿಸಲು ನಿಗದಿಯಾಗಿದ್ದ ವಂದೇ ಭಾರತ್‌ ಮಿಷನ್‌ನ ನಾಲ್ಕು ವಿಮಾನಗಳ ವೇಳಾ ಪಟ್ಟಿ ಇದೀಗ ಮರುನಿಗದಿ ಪಡಿಸಬೇಕಾಗುತ್ತದೆ.

'ಚೀನಾದ ರಾಜತಾಂತ್ರಿಕ, ಸೇವೆಗಳು, ಸರ್ಕಾರದಿಂದ ನೀಡಲಾಗಿರುವ ವೀಸಾ ಹಾಗೂ ಸಿ ವೀಸಾಗಳನ್ನು ಹೊಂದಿರುವ ವಿದೇಶಿಯರ ಪ್ರಯಾಣಕ್ಕೆ ಯಾವುದೇ ಅಡಚಣೆಯಾಗುವುದಿಲ್ಲ' ಎಂದು ಚೀನಾ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದೆ. ತುರ್ತು ಕಾರಣಗಳಿಂದಾಗಿ ಚೀನಾ ಪ್ರವೇಶಿಸಲು ಬಯಸುವ ವಿದೇಶಿಯರು ಭಾರತದಲ್ಲಿನ ಚೀನಾ ರಾಯಭಾರ ಕಚೇರಿ ಅಥವಾ ಕಾನ್ಸುಲೇಟ್‌ಗಳಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಪ್ರಕಟಿಸಿರುವುದಾಗಿ ಹಿಂದುಸ್ತಾನ್‌ ಟೈಮ್ಸ್‌ ವರದಿ ಮಾಡಿದೆ.

ಕಳೆದ ಶುಕ್ರವಾರ ನವದೆಹಲಿಯಿಂದ ಚೀನಾದ ವುಹಾನ್‌ನಲ್ಲಿ ಇಳಿದ ವಿಶೇಷ ವಿಮಾನದಲ್ಲಿದ್ದವರ ಪೈಕಿ 23 ಮಂದಿಗೆ ಕೋವಿಡ್‌–19 ದೃಢಪಟ್ಟಿದೆ. ಅವರಲ್ಲಿ 19 ಮಂದಿಗೆ ರೋಗ ಲಕ್ಷಣಗಳು ಕಾಣಿಸಿಕೊಂಡಿಲ್ಲ ಎಂದು ವರದಿಯಾಗಿದೆ.

ಬ್ರಿಟನ್‌, ಬೆಲ್ಜಿಯಂ ಹಾಗೂ ಫಿಲಿಪ್ಪೀನ್ಸ್‌ನ ವಿದೇಶಿಯರ ಪ್ರವೇಶಕ್ಕೂ ಚೀನಾ ನಿರ್ಬಂಧ ವಿಧಿಸಿದೆ. ಅಮೆರಿಕ, ಫ್ರಾನ್ಸ್‌ ಹಾಗೂ ಜರ್ಮನಿಯಿಂದ ಪ್ರಯಾಣಿಸುವವರು ಹೆಚ್ಚುವರಿ ಆರೋಗ್ಯ ತಪಾಸಣೆ ವರದಿಗಳನ್ನು ಸಲ್ಲಿಸುವಂತೆ ಸೂಚಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು