ಸೋಮವಾರ, ಆಗಸ್ಟ್ 15, 2022
26 °C
ಸುಪ್ರೀಂ ಕೋರ್ಟ್‌ನ ಶೋಕಾಸ್ ನೋಟಿಸ್‌ಗೆ ಲಿಖಿತ ಉತ್ತರ

ಪ್ರಧಾನಿಯನ್ನು ನ್ಯಾಯಾಂಗ ನೇಮಕ ಮಾಡಲು ಅಸಾಧ್ಯ: ನೇಪಾಳ ಪಿಎಂ ಒಲಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಕಠ್ಮಂಡು: ಜನಪ್ರತಿನಿಧಿಗಳ ಸಭೆಯನ್ನು ವಿಸರ್ಜಿಸಿರುವ ಸರ್ಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡಿರುವ ನೇಪಾಳ ಪ್ರಧಾನಿ ಕೆ.ಪಿ. ಶರ್ಮಾ ಒಲಿ, ಪ್ರಧಾನಿಯನ್ನು ನೇಮಿಸುವ ಅಧಿಕಾರ ಸುಪ್ರಿಂಕೋರ್ಟ್ ವ್ಯಾಪ್ತಿಗೆ ಬರುವುದಿಲ್ಲ ಎಂದು ಹೇಳಿದ್ದಾರೆ.

ಸದನ ವಿಸರ್ಜಿಸಿರುವುದನ್ನು ಪ್ರಶ್ನಿಸಿ ಪ್ರತಿಪಕ್ಷಗಳ ಮೈತ್ರಿ ಕೂಟದವರು ಸೇರಿದಂತೆ ಸುಪ್ರೀಂ ಕೋರ್ಟ್‌ನಲ್ಲಿ 30 ರಿಟ್ ಅರ್ಜಿಗಳನ್ನು ದಾಖಲಿಸಲಾಗಿದ್ದು, ಇದು ‘ಅಸಾಂವಿಧಾನಿಕ‘ ಎಂದು ಹೇಳಿದ್ದಾರೆ.

ಜೂನ್ 9ರಂದು ಪ್ರಧಾನ ಮಂತ್ರಿ ಕಚೇರಿ ಮತ್ತು ರಾಷ್ಟ್ರಪತಿಗಳ ಕಚೇರಿಗೆ ಶೋಕಾಸ್‌ ನೋಟಿಸ್‌ ನೀಡಿರುವ ಸುಪ್ರೀಂ ಕೋರ್ಟ್‌, ನೋಟಿಸ್‌ಗೆ 15 ದಿನಗಳೊಳಗೆ ಲಿಖಿತ ಪ್ರತಿಕ್ರಿಯೆ ನೀಡುವಂತೆ ಸೂಚಿಸಿತ್ತು.

ಈ ನೋಟಿಸ್‌ಗೆ ಲಿಖಿತ ಪ್ರತಿಕ್ರಿಯೆ ನೀಡಿದ ಪ್ರಧಾನಿ ಒಲಿ, ‘ಶಾಸಕಾಂಗ ಮತ್ತು ಕಾರ್ಯಾಂಗದ ಕೆಲಸಗಳನ್ನು ಕೈಗೊಳ್ಳಲು ಸಾಧ್ಯವಿಲ್ಲದ ಕಾರಣ ಪ್ರಧಾನಿ ನೇಮಕ ನ್ಯಾಯಾಂಗದ ವ್ಯಾಪ್ತಿಗೆ ಬರುವುದಿಲ್ಲ‘ ಎಂದು ಹೇಳಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. 

‘ನ್ಯಾಯಾಲಯ, ಸಂವಿಧಾನ ಮತ್ತು ಅಸ್ತಿತ್ವದಲ್ಲಿರುವ ಕಾನೂನುಗಳ ವಿಚಾರದಲ್ಲಿ ಮಧ್ಯಪ್ರವೇಶಿಸಿ, ವ್ಯಾಖ್ಯಾನಿಸಬಹುದು. ಆದರೆ, ಶಾಸಕಾಂಗ ಅಥವಾ ಕಾರ್ಯಾಂಗದ ಪಾತ್ರವನ್ನು ನಿರ್ವಹಿಸಲು ಸಾಧ್ಯವಿಲ್ಲ‘ ಎಂದು ಒಲಿ ಹೇಳಿದ್ದಾರೆ.

ಈ ಪ್ರಕರಣದಲ್ಲಿ ರಾಷ್ಟ್ರಪತಿಯವರ ಪಾಲ್ಗೊಳ್ಳುವಿಕೆಯನ್ನು ಸಮರ್ಥಿಸಿಕೊಂಡಿರುವ ಪ್ರಧಾನಿ ಒಲಿಯವರು  ಸಂವಿಧಾನದ 76ನೇ ವಿಧಿಯು ರಾಷ್ಟ್ರಪತಿಗೆ ಪ್ರಧಾನಿಯನ್ನು ನೇಮಿಸುವ ಹಕ್ಕನ್ನು ನೀಡುತ್ತದೆ‘ ಎಂದು ತಿಳಿಸಿದ್ದಾರೆ.

ಪ್ರಕರಣದ ಹಿನ್ನೆಲೆ: ಪ್ರಧಾನಿ ಒಲಿ ಅವರು ಸದನದಲ್ಲಿ ಬಹುಮತ ಸಾಬೀತುಪಡಿಸಲು ವಿಫಲರಾದ ಕಾರಣ ರಾಜೀನಾಮೆ ನೀಡಿದರು. ಇದಾದ ಮೇಲೆ ಸದನದಲ್ಲಿ ಬಹುಮತಗಳಿಸುವಷ್ಟು ಸ್ಥಾನಗಳನ್ನು ಪಡೆಯಲು ವಿರೋಧ ಪಕ್ಷಗಳು ವಿಫಲವಾದವು. ಹೀಗಾಗಿ ಕೆಲ ದಿನಗಳ ಬಳಿಕ ಅಧ್ಯಕ್ಷೆ ವಿದ್ಯಾದೇವಿ ಭಂಡಾರಿ ಅವರು ಒಲಿ ಅವರನ್ನು ಪ್ರಧಾನಿಯನ್ನಾಗಿ ಮರು ನೇಮಕ ಮಾಡಿದ್ದರು. 

ಆದರೆ, ಒಲಿಗೆ ಆಗಲೂ ಬಹುಮತ ಸಿಗಲಿಲ್ಲ. ಹೀಗಾಗಿ ಒಲಿ ಅವರ ಶಿಫಾರಸಿನ ಮೇರೆಗೆ ರಾಷ್ಟ್ರಪತಿ ವಿದ್ಯಾದೇವಿ ಭಂಡಾರಿ ಅವರು ಮೇ 22ರಂದು ಜನಪ್ರತಿನಿಧಿಗಳ ಸಭೆಯನ್ನು ವಿಸರ್ಜಿಸಿ, ನವೆಂಬರ್ 12 ಮತ್ತು 19ರಂದು ಎರಡು ಹಂತದಲ್ಲಿ ಚುನಾವಣೆ ನಡೆಸಲು ದಿನಾಂಕವನ್ನು ಪ್ರಕಟಿಸಿದ್ದರು.  ಈ ಪ್ರಕರಣ ಕುರಿತು ಸುಪ್ರೀಂ ಕೋರ್ಟ್ ವಿಚಾರಣೆ ಆರಂಭಿಸಿದ್ದು ಜೂನ್ 23ರಿಂದ ನಿತ್ಯ ವಿಚಾರಣೆ ನಡೆಯಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು