ಶನಿವಾರ, ಜೂನ್ 12, 2021
24 °C

ಕೋವಿಡ್: ಭಾರತಕ್ಕೆ ತುರ್ತು ಆರ್ಥಿಕ ನೆರವಿಗೆ ಪ್ರಮಿಳಾ ಜಯಪಾಲ್ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್: ಕೋವಿಡ್-19 ಭೀಕರ ಪರಿಸ್ಥಿತಿ ಎದುರಿಸುತ್ತಿರುವ ಭಾರತಕ್ಕೆ ತುರ್ತಾಗಿ ಹೆಚ್ಚುವರಿ ನಿಧಿ ಬಿಡುಗಡೆಗೆ ಅಮೆರಿಕದ ಕಾಂಗ್ರೆಸ್‌ನ ಭಾರತ-ಅಮೆರಿಕನ್ ಮಹಿಳಾ ಸದಸ್ಯೆ ಪ್ರಮೀಳಾ ಜಯಪಾಲ್ ಅಲ್ಲಿನ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ.

‘ಭಾರತಕ್ಕೆ ನಮ್ಮ ನೆರವಿನ ಅಗತ್ಯವಿದೆ. ಕೋವಿಡ್ ಸವಾಲನ್ನು ಎದುರಿಸುವುದು ನಮ್ಮ ನೈತಿಕ ಜವಾಬ್ದಾರಿಯಾಗಿದೆ. ಇದು ಜಾಗತಿಕ ಸಾಂಕ್ರಾಮಿಕ ಮತ್ತು ನಾವು ಎಲ್ಲೆಡೆ ವೈರಸ್ ಅನ್ನು ತಡೆಗಟ್ಟುವವರೆಗೂ ನಾವು ಸಂಪೂರ್ಣವಾಗಿ ಚೇತರಿಸಿಕೊಳ್ಳಲು ಸಾಧ್ಯವಿಲ್ಲ’ ಎಂದು ಜಯಪಾಲ್ ಹೇಳಿದ್ದಾರೆ.

ಕೋವಿಡ್ ಉಲ್ಬಣಕ್ಕೂ ಮೊದಲು ತಮ್ಮ ಕುಟುಂಬ ಭೇಟಿಗಾಗಿ ಇತ್ತೀಚೆಗೆ ಭಾರತಕ್ಕೆ ಭೇಟಿ ನೀಡಿದ್ದ ಜಯಪಾಲ್, ಸಂಗ್ರಹಿಸಿದ ಎಲ್ಲ ಹಣವು ಮೂರು ಪ್ರಮುಖ ಉಪಕ್ರಮಗಳಿಗೆ ಬಳಕೆಯಾಗಲಿದೆ ಎಂದು ಹೇಳಿದ್ದರು.

ಮೊದಲನೆಯದು ವಿಷ್ ಫೌಂಡೇಶನ್. ಇದು ಕೋವಿಡ್ ಆರೈಕೆ ಕೇಂದ್ರಗಳನ್ನು ಸ್ಥಾಪಿಸಲು 24 ಗಂಟೆ ಕೆಲಸ ಮಾಡುತ್ತಿದೆ. ಎರಡನೆಯದು ಗಿವ್ಇಂಡಿಯಾ, ಇದು ಪ್ರೀತಿಪಾತ್ರರನ್ನು ಕಳೆದುಕೊಂಡು ಬಡತನದಲ್ಲಿ ವಾಸಿಸುತ್ತಿರುವ ಕುಟುಂಬಗಳನ್ನು ಬೆಂಬಲಿಸುತ್ತದೆ. ಮನೆ ಆಧಾರ ಕಳೆದುಕೊಂಡವರಿಗೆ ನೇರ ನಗದು ₹ 30,000 ಪಾವತಿ ಮಾಡುತ್ತದೆ.

ಮೂರನೆಯದು ಎಡೆಲ್‌ಗೈವ್ ಫೌಂಡೇಶನ್, ಇದು ಗೂಂಜ್ ಮತ್ತು ಜನ್ ಸಾಹಸ್ ಸಂಸ್ಥೆಗಳ ಸಹಯೋಗದೊಂದಿಗೆ ವಲಸಿಗರು ಮತ್ತು ದುರ್ಬಲ ಜನರಿಗೆ ಆರ್ಥಿಕ ಬೆಂಬಲ, ಆಹಾರ ಮತ್ತು ಆರೋಗ್ಯ ಸರಬರಾಜುಗಳನ್ನು ಒದಗಿಸಲು ಕೆಲಸ ಮಾಡುತ್ತದೆ ಎಂದು ಭಾರತೀಯ-ಅಮೇರಿಕನ್ ಕಾಂಗ್ರೆಸ್ ಮಹಿಳೆ ಪ್ರಮಿಳಾ ಜಯಪಾಲ್ ಹೇಳಿದ್ದರು.

ತಮ್ಮ ಇತ್ತೀಚಿನ ಭಾರತದ ಭೇಟಿ ಬಗ್ಗೆ ಮಾತನಾಡುತ್ತಾ, ‘ಅಲ್ಲಿ ಕೋವಿಡ್ ಪ್ರಕರಣಗಳು ತೀವ್ರಗತಿಯಲ್ಲಿ ಹೆಚ್ಚಾಗತೊಡಗಿದ್ದವು. 80 ಮತ್ತು 90 ವರ್ಷ ವಯಸ್ಸಿನ ನನ್ನ ಹೆತ್ತವರಿಗೆ ಲಸಿಕೆಯ ಮೊದಲ ಡೋಸ್ ಪಡೆದ ಕೆಲವೇ ವಾರಗಳಲ್ಲಿ ಕೋವಿಡ್ ಪಾಸಿಟಿವ್ ಬಂದಿತ್ತು’ ಎಂದು ಹೇಳಿದರು.
 
‘ಅವರಿಬ್ಬರೂ ಆಸ್ಪತ್ರೆಗೆ ದಾಖಲಾಗಿ ಚೇತರಿಸಿಕೊಂಡಿದ್ದಾರೆ. ಆದರೆ, ಅವರಿಗೆ ಲಸಿಕೆ ನೀಡದೇ ಇದ್ದಿದ್ದರೆ ಏನಾಗುತ್ತಿತ್ತೋ ಏನೋ ಎಂಬುದನ್ನು ಊಹಿಸಿಕೊಂಡರೆ ಎದೆ ನಡುಗತ್ತದೆ’ಎಂದು ಅವರು ಹೇಳಿದ್ದಾರೆ. .

ಭಾರತದ ಪರಿಸ್ಥಿತಿ ಭೀಕರವಾಗಿದೆ ಎಂದು ವಿವರಿಸಿದ ಜಯಪಾಲ್, ಪ್ರತಿದಿನ ಅಲ್ಲಿ ನೂರಾರು ಸಾವಿರ ಹೊಸ ಕೋವಿಡ್ ಪಾಸಿಟಿವ್  ಪ್ರಕರಣಗಳು ದೃಢಪಡುತ್ತಿವೆ ಎಂದು ತಿಳಿಸಿದ್ದಾರೆ.

‘ಆಸ್ಪತ್ರೆಗಳಲ್ಲಿ ಹಾಸಿಗೆಗಳಿಲ್ಲ. ಆಮ್ಲಜನಕ ಪೂರೈಕೆ ಸರಿಯಾಗಿ ಆಗುತ್ತಿಲ್ಲ. ವೈದ್ಯರ ಭೇಟಿಗೆ ಮೊದಲೇ ಸಾಯುತ್ತಿದ್ದಾರೆ’ ಜಯಪಾಲ್ ಕಳವಳ ವ್ಯಕ್ತಪಡಿಸಿದ್ದಾರೆ.
 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.