ಕೋವಿಡ್ ಲಸಿಕೆ ಹಾಕಿಸಿಕೊಳ್ಳದ ಅಧಿಕಾರಿಗಳಿಗೆ ವೇತನ ರಹಿತ ರಜೆ: ಸಿಂಗಪುರ ಸರ್ಕಾರ

ಸಿಂಗಪುರ: ಪ್ರತಿ ನಿತ್ಯ ಕೋವಿಡ್ ಸೋಂಕು ಮತ್ತು ಸಾವಿನ ಪ್ರಕರಣಗಳು ಹೆಚ್ಚುತ್ತಿರುವ ಕುರಿತು ಕಳವಳ ವ್ಯಕ್ತಪ ಡಿಸಿರುವ ಸಿಂಗಪುರ ಸರ್ಕಾರ, ಲಸಿಕೆ ಪಡೆಯಲು ವೈದ್ಯಕೀಯವಾಗಿ ಅರ್ಹರಾಗಿದ್ದರೂ, ಲಸಿಕೆ ಹಾಕಿಸಿಕೊಳ್ಳದ ಸರ್ಕಾರಿ ಅಧಿಕಾರಿಗಳಿಗೆ ವೇತನ ರಹಿತ ರಜೆ ಮೇಲೆ ಕಳುಹಿಸುವುದಾಗಿ ಎಚ್ಚರಿಕೆ ನೀಡಿದೆ.
ನಗರ ಮತ್ತು ದೇಶದಾದ್ಯಂತ ಬುಧವಾರ 3653 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿವೆ. ಇದರಲ್ಲಿ ವಲಸೆ ಕಾರ್ಮಿಕರ ಸಾಮೂಹಿಕ ವಸತಿ ಪ್ರದೇಶಗಳಲ್ಲಿ 409 ಪ್ರಕರಣಗಳು ಪತ್ತೆಯಾಗಿವೆ. ಸೋಂಕಿನಿಂದ 12 ಮಂದಿ ಸಾವನ್ನಪ್ಪಿದ್ದಾರೆ.
ಸಂಪೂರ್ಣ ಲಸಿಕೆ ಪಡೆದ ಉದ್ಯೋಗಿಗಳಿಗೆ ಅಥವಾ ಕೋವಿಡ್ ಸೋಂಕಿನಿಂದ ಚೇತರಿಸಿಕೊಂಡು 270 ದಿನಗಳು ಕಳೆದಿರುವವರಿಗೆ ಮಾತ್ರ ಜನವರಿ 1, 2022 ರಿಂದ ಕೆಲಸದ ಸ್ಥಳಗಳಿಗೆ ತೆರಳಲು ಅನುಮತಿ ನೀಡುವುದಾಗಿ ಆರೋಗ್ಯ ಸಚಿವಾಲಯವು ಅಕ್ಟೋಬರ್ 23 ರಂದು ಘೋಷಿಸಿತ್ತು.
ಸಚಿವಾಲಯದ ಈ ಪ್ರಕಟಣೆಗೆ ಪ್ರತಿಕ್ರಿಯಿಸಿರುವ ಸಾರ್ವಜನಿಕ ಸೇವಾ ವಲಯ(ಪಿಎಸ್‌ಡಿ)ದ ವಕ್ತಾರ, ‘‘ಜನವರಿ 1 ರಿಂದ ಕೆಲಸಕ್ಕೆ ಮರಳಲು ಅನುಮತಿಸಿದರೆ, ಲಸಿಕೆ ಹಾಕಿಸಿಕೊಳ್ಳದ ಅಧಿಕಾರಿಗಳಿಗೆ ಮನೆಯಿಂದಲೇ ಕೆಲಸ ಮಾಡಲು ಅವಕಾಶ ನೀಡುತ್ತೇವೆ‘ ಎಂದು ಹೇಳಿದರು.
ಆದರೆ, ವೈದ್ಯಕೀಯವಾಗಿ ಅರ್ಹರಾಗಿದ್ದರೂ ಕೋವಿಡ್ ಲಸಿಕೆ ಪಡೆಯಲು ಮುಂದಾಗದಿದ್ದರೆ, ಅಂಥ ಅಧಿಕಾರಿಗಳಿಗೆ ವೇತನ ರಹಿತ ರಜೆಯ ಮೇಲೆ ಕಳಿಸಲಾಗುತ್ತದೆ ಎಂಬ ಪಿಎಸ್‌ಡಿಯ ಹೇಳಿಕೆ ಉಲ್ಲೇಖಿಸಿ ‘ನ್ಯೂಸ್ ಏಷ್ಯಾ‘ ವಾಹಿನಿ ಗುರುವಾರ ವರದಿ ಪ್ರಸಾರ ಮಾಡಿದೆ.
‘ಲಸಿಕೆ ಪಡೆಯಲು ವೈದ್ಯಕೀಯವಾಗಿ ಅರ್ಹರಾಗಿದ್ದು, ಲಸಿಕೆ ಪಡೆಯಲು ಒಪ್ಪದಿದ್ದರೆ, ಅಂಥವರಿಗೆ ವೇತನ ರಹಿತ ರಜೆ ಅಥವಾ ಗುತ್ತಿಗೆ ಆಧಾರದ ನೌಕರರಿಗೆ ಗುತ್ತಿಗೆ ನವೀಕರಣವಿಲ್ಲದೇ ಒಪ್ಪಂದ ರದ್ದುಗೊಳಿಸಬಹುದು ಎಂದು ಸುದ್ದಿ ವಾಹಿನಿ ವರದಿ ಹೇಳಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.