ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡೊನಾಲ್ಡ್ ಟ್ರಂಪ್– ಜೊ ಬೈಡನ್‌ ವಾಗ್ದಾಳಿ

ಕೋವಿಡ್ ಲಸಿಕೆ, ಭ್ರಷ್ಟಾಚಾರ ಕುರಿತು ಆರೋಪ– ಪ್ರತ್ಯಾರೋಪ
Last Updated 23 ಅಕ್ಟೋಬರ್ 2020, 20:10 IST
ಅಕ್ಷರ ಗಾತ್ರ

ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಿರುವ ಹಾಲಿ ಅಧ್ಯಕ್ಷ ಮತ್ತು ರಿಪಬ್ಲಿಕ್‌ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಮತ್ತು ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೊ ಬೈಡನ್ ಪರಸ್ಪರ ವಾಗ್ದಾಳಿ ನಡೆಸಿದ್ದಾರೆ.

ನ್ಯಾಶ್‌ವಿಲ್ಲೆಯಲ್ಲಿ ನಡೆದ 90 ನಿಮಿಷಗಳ ಕೊನೆಯ ಮುಖಾಮುಖಿ ಚರ್ಚೆಯಲ್ಲಿ ಇಬ್ಬರೂ ಕೋವಿಡ್ ಲಸಿಕೆ, ಹವಾಮಾನ ವೈಪರೀತ್ಯ, ಜನಾಂಗೀಯ ತಾರತಮ್ಯ ಮತ್ತು ಚೀನಾದೊಂದಿಗೆ ವ್ಯವಹಾರ ಕುರಿತಂತೆ
ಆರೋಪ–ಪ್ರತ್ಯಾರೋಪಗಳ ಸುರಿಮಳೆಗೈದಿದ್ದಾರೆ.

ಕೋವಿಡ್‌ ನಡುವೆಯೂ ಮುನ್ನಡೆಸಿದ್ದೇವೆ: ‘ಕೋವಿಡ್–19 ಲಸಿಕೆಯನ್ನು ಅಭಿವೃದ್ಧಿಪಡಿಸುವ ಕಾರ್ಯ ಅಂತಿಮ ಹಂತದಲ್ಲಿದೆ. ಬಹುತೇಕ ಸಿದ್ಧವಾಗಿದೆ. ಶೀಘ್ರದಲ್ಲೇ ಜನರಿಗೆ ತಲುಪಿಸುವ ಪ್ರಯತ್ನ ಮಾಡಲಾಗುವುದು. ಈ ಸಾಂಕ್ರಾಮಿಕ ರೋಗವು ಬರೀ ಅಮೆರಿಕಕ್ಕೆ ಮಾತ್ರವಲ್ಲ ಇಡೀ ವಿಶ್ವಕ್ಕೆ ಸಂಬಂಧಪಟ್ಟ ಸಮಸ್ಯೆ. ಅಮೆರಿಕ ಕೈಗೊಂಡಿರುವ ಕ್ರಮವನ್ನು ಇತರ ದೇಶಗಳೂ ಶ್ಲಾಘಿಸಿವೆ. ಕೋವಿಡ್ ನಡುವೆಯೂ ಅಮೆರಿಕವನ್ನು ಮುನ್ನಡೆಸಿದ್ದೇನೆ’ ಎಂದು ಟ್ರಂಪ್‌ ಪ್ರತಿಪಾದಿಸಿದರು.

‘ಬೈಡನ್ ರೀತಿ ನಾವು ನೆಲಮಾಳಿಗೆಯಲ್ಲಿ ಅಡಗಿ ಕುಳಿತುಕೊಳ್ಳಲು ಸಾಧ್ಯವಿಲ್ಲ. ಅವರು ಸಾಕಷ್ಟು ಹಣ ಗಳಿಸಿದ್ದು, ಆ ರೀತಿ ಅಡಗಿಕೊಳ್ಳಬಹುದೇನೋ? ಆದರೆ, ನಾವು ಆ ರೀತಿ ಇರಲು ಸಾಧ್ಯವಿಲ್ಲ. ಜನರು ಕೊರೊನಾ ಜತೆಯೇ ಬದುಕಬೇಕಿದೆ’ ಎಂದರು.

ಅಮೆರಿಕಕ್ಕೆ ಕರಾಳ ಚಳಿಗಾಲ: ‘ಕೋವಿಡ್‌–19 ಕುರಿತು ಟ್ರಂಪ್ ಅಧ್ಯಕ್ಷತೆಯ ಆಡಳಿತ ತೆಗೆದುಕೊಂಡಿರುವ ತಪ್ಪು ನಿರ್ಧಾರದಿಂದ ಅಮೆರಿಕವು ಕರಾಳ ಚಳಿಗಾಲವನ್ನು ಎದುರಿಸುವ ಸ್ಥಿತಿಗೆ ತಲುಪಿದೆ. ಮುಂದಿನ ವರ್ಷದ ಮಧ್ಯದ ತನಕವೂ ಲಸಿಕೆ ಲಭ್ಯವಾಗುವ ಬಗ್ಗೆ ಜನರಿಗೆ ಖಾತರಿ ಇಲ್ಲ’ ಎಂದು ಬೈಡನ್‌ ವಾಗ್ದಾಳಿ ನಡೆಸಿದರು.

‘ಟ್ರಂಪ್ ಕೊರೊನಾದೊಂದಿಗೆ ಬದುಕಲು ಹೇಳುತ್ತಿದ್ದಾರೆ. ಆದರೆ, ಜನರು ಕೊರೊನಾದಿಂದ ಸಾವಿಗೀಡಾಗುತ್ತಿದ್ದಾರೆ’ ಎಂದು ಕಿಡಿಕಾರಿದರು.

ಭಾರತ, ಅಲ್ಲಿನ ಗಾಳಿ ಕೊಳಕು: ಟ್ರಂಪ್

ನವದೆಹಲಿ: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ‘ಭಾರತ ಕೊಳಕು’ ಎಂದು ಕರೆದಿದ್ದಾರೆ. ಟ್ರಂಪ್ ಅವರ ಈ ಹೇಳಿಕೆ ಬಗ್ಗೆ ದೇಶದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳು ಪರಸ್ಪರ ಆರೋಪ-ಪ್ರತ್ಯಾರೋಪ ಮಾಡಿವೆ.

ಅಮೆರಿಕದ ಅದ್ಯಕ್ಷೀಯ ಚುನಾವಣೆಯಲ್ಲಿ ತಮ್ಮ ಎದುರಾಳಿ ಜೊ ಬೈಡನ್‌ ಜತೆಗಿನ ಅಂತಿಮ ಚರ್ಚೆಯ ವೇಳೆ ಟ್ರಂಪ್ ಅವರು ಈ ಮಾತು ಹೇಳಿದ್ದರು. ಅಮೆರಿಕದಲ್ಲಿ ಗಾಳಿಯ ಗುಣಮಟ್ಟದ ಬಗ್ಗೆ ಮಾತನಾಡುತ್ತಾ ಟ್ರಂಪ್ ಅವರು, 'ಭಾರತವನ್ನು ನೋಡಿ. ಅದು ಕೊಳಕು. ಅಲ್ಲಿನ ಗಾಳಿ ಕೊಳಕು' ಎಂದು ಹೇಳಿದ್ದರು.

‘ವಾಯುಮಾಲಿನ್ಯವನ್ನು ತಗ್ಗಿಸಲು ಭಾರತ, ಚೀನಾ ಮತ್ತು ರಷ್ಯಾ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ’ ಎಂದು ಟ್ರಂಪ್ ಜರೆದಿದ್ದರು.

ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ಮುಖಂಡ ಕಪಿಲ್ ಮಿಶ್ರಾ ಅವರು, 'ಹೌದು, ಟ್ರಂಪ್ ಹೇಳಿರುವುದು ಸರಿಯಾಗಿಯೇ ಇದೆ. ದೆಹಲಿಯಲ್ಲಿ ವಾಯುಮಾಲಿನ್ಯವಿದೆ. ಅದನ್ನು ನಾವು ಸರಿಪಡಿಸಬೇಕಿದೆ’ ಎಂದು ಹೇಳಿದರು. ಆನಂತರ ಭಾರತದಲ್ಲಿ ಗಾಳಿಯ ಗುಣಮಟ್ಟ ಹೆಚ್ಚಿಸಬೇಕು ಎಂದು ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಒತ್ತಾಯಿಸಿದ್ದಾರೆ.

ಆದರೆ, ಟ್ರಂಪ್ ಅವರು ಭಾರತವನ್ನು ಕೊಳಕು ಎಂದು ಕರೆದಿರುವುದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ‘ಟ್ರಂಪ್ ಅವರು ಭಾರತವನ್ನು ಕೊಳಕು ಎಂದು ಕರೆದಿದ್ದಾರೆ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಮೌನವಾಗಿರುವುದು ಏಕೆ’ ಎಂದು ಕಾಂಗ್ರೆಸ್‌ನ ಹಲವು ಕಾರ್ಯಕರ್ತರು ಟ್ವಿಟರ್‌ನಲ್ಲಿ ಪ್ರಶ್ನಿಸಿದ್ದಾರೆ.

***

ವೈರಸ್ ಅಪಾಯಕಾರಿ ಎಂದು ಟ್ರಂಪ್ ಜನರನ್ನು ಎಚ್ಚರಿಸಲೇ ಇಲ್ಲ. ಇಂಥವರು ಅಧ್ಯಕ್ಷರಾಗಿ ಶ್ವೇತಭವನದಲ್ಲಿ ಇರುವುದು ಸರಿಯಲ್ಲ

-ಜೊ ಬೈಡನ್‌, ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ

***

ಬೈಡನ್ ರೀತಿ ಅಡಗಿ ಕುಳಿತು ಎಲ್ಲವನ್ನೂ ಬಂದ್ ಮಾಡಲು ಸಾಧ್ಯವಿಲ್ಲ. ನಾವು ಇಡೀ ರಾಷ್ಟ್ರವನ್ನು ಲಾಕ್‌ಡೌನ್‌ ಮಾಡಲು ಸಾಧ್ಯವಿಲ್ಲ

-ಡೊನಾಲ್ಡ್‌ ಟ್ರಂಪ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT