ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Covid-19 World Update | ಡಬ್ಲ್ಯುಎಚ್‌ಒ ಅಧ್ಯಯನ ತಂಡಕ್ಕೆ ಸಹಕಾರ: ಚೀನಾ ಭರವಸೆ

Last Updated 17 ಡಿಸೆಂಬರ್ 2020, 14:11 IST
ಅಕ್ಷರ ಗಾತ್ರ

ಬೀಜಿಂಗ್: ಕೊರೊನಾವೈರಸ್‌ ಮೂಲ ಪತ್ತೆ ಅಧ್ಯಯನಕ್ಕಾಗಿಆಗಮಿಸಲಿರುವ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ ) ತಂಡಕ್ಕೆ ಸಹಕಾರ ನೀಡುವುದಾಗಿ ಚೀನಾ ಭರವಸೆ ನೀಡಿದೆ. ಚೀನಾಕ್ಕೆ ಮುಂದಿನ ವರ್ಷ ತನಿಖಾ ತಂಡವನ್ನು ಕಳುಹಿಸುವುದಾಗಿ ಡಬ್ಲ್ಯುಎಚ್‌ಒ ಬುಧವಾರವಷ್ಟೇ ಘೋಷಿಸಿತ್ತು.

ಈ ವೈರಸ್‌ ಮೊದಲ ಬಾರಿಗೆ (2019ರ ಡಿಸೆಂಬರ್‌ನಲ್ಲಿ) ಪತ್ತೆಯಾದ ವುಹಾನ್‌ಗೆ 10 ಮಂದಿ ತಜ್ಞರ ತಂಡ ಮುಂದಿನ ವರ್ಷ ಭೇಟಿ ನೀಡಲಿದೆ.

ಸಹಕಾರ ನೀಡುವುದಾಗಿ ಭರವಸೆ ನೀಡಿರುವ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ವಾಂಗ್‌ ವೆನ್‌ಬಿನ್‌, ‘ವೈರಸ್‌ ಮೂಲ ಪತ್ತೆಗಾಗಿನ ಜಾಗತಿಕ ಪ್ರಯತ್ನವನ್ನು ಮುನ್ನಡೆಸಲು ಮತ್ತು ಸಾಂಕ್ರಾಮಿಕ ರೋಗದ ವಿರುದ್ಧದ ಗೆಲುವಿಗೆ ನಮ್ಮ ಪಾಲು ನೀಡಲು ಡಬ್ಲ್ಯುಎಚ್‌ಒ ಜೊತೆಗಿನ ಸಹಕಾರವನ್ನು ಹೆಚ್ಚಿಸಲು ಚೀನಾ ಸಿದ್ಧವಿದೆ’ ಎಂದು ತಿಳಿಸಿದ್ದಾರೆ.

ಜಾಗತಿಕವಾಗಿ ಕೋವಿಡ್‌–19 ಪ್ರಕರಣಗಳು ಏಕಾಏಕಿ ಏರಿಕೆಯಾದಾಗಿನಿಂದಲೂ ವೈರಸ್‌ ಮೂಲ ಪತ್ತೆಗಾಗಿ ಸಹಕಾರವನ್ನು ಮುಕ್ತ, ಪಾರದರ್ಶಕ ಮತ್ತು ಜವಾಬ್ದಾರಿಯುತವಾಗಿ ಮುನ್ನಡೆಸಲು ಚೀನಾ ಮುಂದಾಗಿದೆ ಎಂದೂ ಹೇಳಿದ್ದಾರೆ.

ಆದಾಗ್ಯೂ, ವೈರಸ್‌ ಮೂಲ ಪತ್ತೆಗಾಗಿ ಅಂತರರಾಷ್ಟ್ರೀಯ ತನಿಖೆ ನಡೆಸಬೇಕು ಎಂಬ ವಿವಿಧ ರಾಷ್ಟ್ರಗಳ ಒತ್ತಾಯವನ್ನು ಚೀನಾ ತೀವ್ರವಾಗಿ ವಿರೋಧಿಸುತ್ತಿದೆ. ಜೊತೆಗೆ ಇಂತಹ ಒತ್ತಾಯಗಳು ಚೀನಾ ವಿರೋಧಿಯಾಗಿವೆ ಎಂದು ಹೇಳುತ್ತಿದೆ.

ಅಮೆರಿಕ, ಆಸ್ಟ್ರೇಲಿಯಾ ಸೇರಿದಂತೆ ಅನೇಕ ರಾಷ್ಟ್ರಗಳು ಅಂತರರಾಷ್ಟ್ರೀಯ ತನಿಖೆಗೆ ಒತ್ತಾಯಿಸಿದ್ದವು.

ಇಂದು 1.59 ಲಕ್ಷ ಹೊಸ ಪ್ರಕರಣ
ಪ್ರಪಂಚದಾದ್ಯಂತ ಇಂದು ಹೊಸದಾಗಿ 1.59 ಲಕ್ಷಕ್ಕೂ ಹೆಚ್ಚು ಸೋಂಕು ಪ್ರಕರಣಗಳು ವರದಿಯಾಗಿದ್ದು, ಇದೇವೇಳೆ 1.61 ಲಕ್ಷಕ್ಕೂ ಹೆಚ್ಚು ಸೋಂಕಿತರು ಗುಣಮುಖರಾಗಿದ್ದಾರೆ ಎಂದು ವರ್ಡೋಮೀಟರ್ ವೆಬ್‌ಸೈಟ್‌ ವರದಿಮಾಡಿದೆ.

ವೆಬ್‌ಸೈಟ್‌ ನೀಡಿರುವ ಮಾಹಿತಿ ಪ್ರಕಾರ ವಿಶ್ವದಾದ್ಯಂತ ಇದುವರೆಗೆ ಒಟ್ಟು 7.46 ಕೋಟಿ ಪ್ರಕರಣಗಳು ವರದಿಯಾಗಿವೆ. ಇಂದು ಈವರೆಗೆ ವರದಿಯಾಗಿರುವ 3,837 ಸಾವಿನ ಪ್ರಕರಣಗಳೂ ಸೇರಿದಂತೆ 16.5 ಲಕ್ಷ ಮಂದಿ ಮೃತಪಟ್ಟಿದ್ದು, 5.25 ಕೋಟಿ ಮಂದಿ ಗುಣಮುಖರಾಗಿದ್ದಾರೆ. ಉಳಿದಂತೆ 2.05 ಕೋಟಿ ಸಕ್ರಿಯ ಪ್ರಕರಣಗಳು ಇವೆ.

ಅಮೆರಿಕದಲ್ಲಿ 1 ಕೋಟಿ ಸೋಂಕಿತರು ಗುಣಮುಖ
ಅತಿಹೆಚ್ಚು ಸೋಂಕು ಪ್ರಕರಣಗಳು ವರದಿಯಾಗಿರುವ ಅಮೆರಿಕದಲ್ಲಿ ಈವರೆಗೆ 1.73 ಕೋಟಿ ಪ್ರಕರಣಗಳು ದೃಢಪಟ್ಟಿದ್ದು, ಇದರಲ್ಲಿ 1.01 ಕೋಟಿ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ಇನ್ನೂ 69.06 ಲಕ್ಷ ಪ್ರಕರಣಗಳು ಸಕ್ರಿಯವಾಗಿವೆ. ಇದರಲ್ಲಿ 27,325 ಜನರ ಸ್ಥಿತಿ ಗಂಭೀರವಾಗಿದೆ.

ಅಮೆರಿಕದ ನಂತರದ ಸ್ಥಾನದಲ್ಲಿರುವ ಭಾರತದಲ್ಲಿ 99.51 ಲಕ್ಷ ಪ್ರಕರಣಗಳು ವರದಿಯಾಗಿವೆ. ಇದರಲ್ಲಿ 1.44 ಲಕ್ಷ ಸೋಂಕಿತರು ಮೃತಪಟ್ಟು, 94.89 ಲಕ್ಷ ಮಂದಿ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. 3.17 ಲಕ್ಷ ಪ್ರಕರಣಗಳು ಸಕ್ರಿಯವಾಗಿವೆ.

ಬ್ರೆಜಿಲ್‌ನಲ್ಲಿ 69.29 ಲಕ್ಷ, ರಷ್ಯಾದಲ್ಲಿ 27.07 ಲಕ್ಷ, ಫ್ರಾನ್ಸ್‌ನಲ್ಲಿ 23.79 ಲಕ್ಷ ಪ್ರಕರಣಗಳು ದಾಖಲಾಗಿವೆ.

ಹೆಚ್ಚು ಸೋಂಕಿತರು ಮೃತಪಟ್ಟ ರಾಷ್ಟ್ರಗಳ ಸಾಲಿನಲ್ಲಿಯೂ ಅಮೆರಿಕ ಮೊದಲ ಸ್ಥಾನದಲ್ಲಿದೆ. ಈ ದೇಶದಲ್ಲಿ 3.14 ಲಕ್ಷ ಮಂದಿ ಮೃತಪಟ್ಟಿದ್ದಾರೆ. ಬ್ರೆಜಿಲ್‌ (1.83 ಲಕ್ಷ) ಎರಡನೇ ಸ್ಥಾನದಲ್ಲಿದ್ದು, ಮೂರನೇ ಸ್ಥಾನದಲ್ಲಿ ಭಾರತ (1.44 ಲಕ್ಷ),ನಾಲ್ಕನೇ ಸ್ಥಾನದಲ್ಲಿ ಮೆಕ್ಸಿಕೊ (1.15 ಲಕ್ಷ) ಇದೆ. ಉಳಿದಂತೆ ಇಟಲಿ (66 ಸಾವಿರ), ಇಂಗ್ಲೆಂಡ್‌ (65 ಸಾವಿರ) ಹಾಗೂ ಫ್ರಾನ್ಸ್‌ನಲ್ಲಿ (59 ಸಾವಿರ) 50 ಸಾವಿರಕ್ಕಿಂತ ಹೆಚ್ಚು ಮಂದಿ ಸಾವಿಗೀಡಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT