ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ಲಸಿಕೆ ‘ಕೋವಿಶೀಲ್ಡ್‌’ ಶೇ 70ರಷ್ಟು ಪರಿಣಾಮಕಾರಿ

Last Updated 23 ನವೆಂಬರ್ 2020, 20:18 IST
ಅಕ್ಷರ ಗಾತ್ರ

ಲಂಡನ್‌: ಕೋವಿಡ್‌–19 ವಿರುದ್ಧ ಅಭಿವೃದ್ಧಿಪಡಿಸಿರುವ ಕೋವಿಶೀಲ್ಡ್‌ ಲಸಿಕೆಯು ಸರಾಸರಿ ಶೇ 70ರಷ್ಟು ಪರಿಣಾಮಕಾರಿ ಎಂಬುದು ಮಧ್ಯಂತರ ವಿಶ್ಲೇಷಣೆಯಿಂದ ತಿಳಿದು ಬಂದಿದೆ ಎಂದು ಔಷಧತಯಾರಿಕಾ ಸಂಸ್ಥೆ ಆಸ್ಟ್ರಾ ಜೆನೆಕಾ ಸೋಮವಾರ ಹೇಳಿದೆ. ಮನುಷ್ಯನ ಮೇಲಿನ ಪ್ರಯೋಗದಲ್ಲಿ ಭರವಸೆದಾಯಕ ಫಲಿತಾಂಶ ನೀಡಿದ ಮೂರನೇ ಕೋವಿಡ್‌ ತಡೆ ಲಸಿಕೆ ಇದು.

ಆಕ್ಸ್‌ಫರ್ಡ್‌ ಯುನಿವರ್ಸಿಟಿ ಸಹಭಾಗಿತ್ವದಲ್ಲಿ ಆಸ್ಟ್ರಾ ಜೆನೆಕಾ ಸಂಸ್ಥೆಯು ಈ ಲಸಿಕೆಯನ್ನು ಅಭಿವೃದ್ಧಿಪಡಿಸಿದೆ. ಪ್ರಯೋಗದ ಸಂದರ್ಭದಲ್ಲಿ ಯಾವುದೇ ಗಂಭೀರ ಅಡ್ಡ ಪರಿಣಾಮಗಳು ಕಾಣಿಸಿಲ್ಲ.

ಫೈಝರ್‌ ಮತ್ತು ಮೊಡೆರ್ನಾ ಕಂಪನಿಗಳು ಅಭಿವೃದ್ಧಿಪಡಿಸಿರುವ ಕೋವಿಡ್‌ ಲಸಿಕೆಗಳು ಕ್ರಮವಾಗಿ ಶೇ 95 ಮತ್ತು ಶೇ 94.5ರಷ್ಟು ಪರಿಣಾಮಕಾರಿ ಎಂಬುದನ್ನು ಈಗಾಗಲೇ ಪ್ರಕಟಿಸಲಾಗಿದೆ. ಆದರೆ, ಕೋವಿಶೀಲ್ಡ್‌ ಲಸಿಕೆಯು ಈ ಎರಡೂ ಲಸಿಕೆಗಳಿಗಿಂತ ಅಗ್ಗ ಮತ್ತು ಇವುಗಳನ್ನು ದಾಸ್ತಾನು ಇರಿಸಿಕೊಳ್ಳುವುದು ಸುಲಭ.

‘ಸಾಮಾನ್ಯ ಶೀಥಲೀಕರಣ (2–8 ಡಿಗ್ರಿ ಸೆಲ್ಸಿಯಸ್‌) ಸ್ಥಿತಿಯಲ್ಲಿಯೇ ಲಸಿಕೆಯನ್ನು ಆರು ತಿಂಗಳು ಇರಿಸಬಹುದು. ಇದರ ಸಾಗಾಟಕ್ಕೂ ಸಾಮಾನ್ಯ ಶೀಥಲೀಕರಣ ವ್ಯವಸ್ಥೆಯೇ ಸಾಕು’ ಎಂದು ಸೆರಂ ಇನ್ಸ್‌ಟಿಟ್ಯೂಟ್‌ ಆಫ್‌ ಇಂಡಿಯಾದ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಅದರ್‌ ಪೂನಾವಾಲಾ ಹೇಳಿದ್ದಾರೆ.

ಎಲ್ಲವೂ ಲೆಕ್ಕಾಚಾರದಂತೆ ನಡೆದರೆ ಮುಂದಿನ ತಿಂಗಳಲ್ಲಿಯೇ ಲಸಿಕೆ ತಯಾರಿ ಆರಂಭವಾಗಲಿದೆ. 2021ರಲ್ಲಿ ದೊಡ್ಡ ಪ್ರಮಾಣದಲ್ಲಿ ಲಸಿಕೆ ಪೂರೈಕೆ ನಡೆಯಲಿದೆ ಎಂದು ಬ್ರಿಟನ್‌ನ ಆರೋಗ್ಯ ಸಚಿವ ಮ್ಯಾಟ್‌ ಹ್ಯಾನ್‌ಕಾಕ್‌ ಹೇಳಿದ್ದಾರೆ. ಹೆಚ್ಚು ಡೋಸ್‌ನ ಲಸಿಕೆ ಕೊಟ್ಟಾಗ ಶೇ 62ರಷ್ಟು ಪರಿಣಾಮಕಾರಿಯಾಗಿತ್ತು. ಕಡಿಮೆ ಡೋಸ್‌ನ ಲಸಿಕೆ ನೀಡಿದಾಗ ಪರಿಣಾಮವು ಶೇ 90ರಷ್ಟಿತ್ತು. ಈ ವ್ಯತ್ಯಾಸ ಏಕೆ ಎಂಬ ಬಗ್ಗೆ ವಿಶ್ಲೇಷಣೆ ನಡೆಸಲಾಗುತ್ತಿದೆ ಎಂದು ಸಂಸ್ಥೆಯು ತಿಳಿಸಿದೆ.

ಭಾರತದ ಮೊದಲ ಲಸಿಕೆ?
ತುರ್ತು ಸಂದರ್ಭಗಳಲ್ಲಿ ಲಸಿಕೆ ಬಳಕೆಗೆ ಅನುಮತಿ ಪಡೆಯಲು ಸೆರಂ ಸಂಸ್ಥೆಯು ಕೇಂದ್ರ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆಗೆ ಅರ್ಜಿ ಸಲ್ಲಿಸಲಿದೆ. ಪ್ರಯೋಗದ ದತ್ತಾಂಶಗಳನ್ನು ಪರಿಶೀಲಿಸಿ ನಿಯಂತ್ರಣ ಸಂಸ್ಥೆಯು ಅನುಮತಿ ನೀಡಿದರೆ, ಕೋವಿಶೀಲ್ಡ್‌ ಭಾರತದಲ್ಲಿ ಲಭ್ಯವಾಗುವ ಮೊದಲ ಕೋವಿಡ್‌ ಲಸಿಕೆ ಎನಿಸಿಕೊಳ್ಳಬಹುದು. ತಿಂಗಳಿಗೆ 7 ಕೋಟಿ ಡೋಸ್‌ ಲಸಿಕೆ ತಯಾರಿಕೆ ಸಾಮರ್ಥ್ಯವನ್ನು ಸೆರಂ ಹೊಂದಿದೆ. ಅದರಲ್ಲಿ 3.5 ಕೋಟಿ ಭಾರತಕ್ಕೆ ಲಭ್ಯವಾಗಲಿದೆ.

ಸೆರಂ ಸಂಸ್ಥೆಯು 1,600 ಸ್ವಯಂಸೇವಕರ ಮೇಲೆ ಪ್ರಯೋಗ ನಡೆಸುತ್ತಿದೆ. ಇದು ಬಹುತೇಕ ಪೂರ್ಣಗೊಂಡಿದೆ. ಅದರ ಫಲಿತಾಂಶ ಸದ್ಯದಲ್ಲೇ ಪ್ರಕಟವಾಗಲಿದೆ.

ಎರಡು ರೀತಿಯ ಡೋಸ್‌
* ಮೊದಲಿಗೆ ಅರ್ಧ ಡೋಸ್‌ ಲಸಿಕೆ ನೀಡಿ, ಕನಿಷ್ಠ ಒಂದು ತಿಂಗಳ ಬಳಿಕ ಪೂರ್ಣ ಡೋಸ್‌ ಲಸಿಕೆ ನೀಡಿದರೆ ಶೇ 90ರಷ್ಟು ಪರಿಣಾಮಕಾರಿ
*ಮೊದಲಿಗೆ ಪೂರ್ಣ ಡೋಸ್‌ ಲಸಿಕೆ ಮತ್ತು ತಿಂಗಳ ಬಳಿಕ ಮತ್ತೊಂದು ಡೋಸ್‌ ಲಸಿಕೆ ನೀಡಿದರೆ ಶೇ 62ರಷ್ಟು ಪರಿಣಾಮ
* ಸರಾಸರಿ ಪರಿಣಾಮವು ಶೇ 70ರಷ್ಟು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT