ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪಘಾತಕ್ಕೀಡಾದ ವಿಮಾನ ಈ ಹಿಂದೆ ಕಿಂಗ್‌ಫಿಷರ್ ಏರ್‌ಲೈನ್ಸ್‌ಗೆ ಸೇರಿತ್ತು

Last Updated 16 ಜನವರಿ 2023, 13:19 IST
ಅಕ್ಷರ ಗಾತ್ರ

ಕಠ್ಮಂಡು: ನೇಪಾಳದಲ್ಲಿ ಭಾನುವಾರ ಪತನಗೊಂಡ ಅಪಘಾತಕ್ಕೀಡಾದ ಎಟಿಆರ್‌– 72 ವಿಮಾನವು ಉದ್ಯಮಿ ವಿಜಯ್ ಮಲ್ಯ ಒಡೆತನದ ಪ್ರಸ್ತುತ ನಿಷ್ಕ್ರಿಯವಾಗಿರುವ ಕಿಂಗ್ ಫಿಷರ್ ಏರ್‌ಲೈನ್ಸ್ ಮಾಲೀಕತ್ವದಲ್ಲಿತ್ತು ಎಂದು ‘ಸಿರಿಯಮ್ ಫ್ಲೀಟ್ಸ್‌’ ತಿಳಿಸಿದೆ.

‘ಸಿರಿಯಮ್ ಫ್ಲೀಟ್ಸ್‌’ ಮಾಹಿತಿಯ ಪ್ರಕಾರ, 2007ರಲ್ಲಿ 9ಎನ್–ಎಎನ್‌ಸಿ ವಿಮಾನವನ್ನು ಕಿಂಗ್‌ಫಿಷರ್ ಏರ್‌ಲೈನ್ಸ್‌ ಖರೀದಿಸಿತ್ತು. ಆರು ವರ್ಷಗಳ ಬಳಿಕ ಈ ವಿಮಾನವನ್ನು ಥಾಯ್ಲೆಂಡ್‌ನ ನೋಕ್ ಏರ್ ಖರೀದಿಸಿತ್ತು. ಬಳಿಕ ಈ ವಿಮಾನವನ್ನು 2019ರಲ್ಲಿ ನೇಪಾಳದ ಯೇತಿ ಏರ್‌ಲೈನ್ಸ್‌ಗೆ ಮಾರಾಟ ಮಾಡಲಾಗಿತ್ತು.

ಫ್ರಾನ್ಸ್ ಮತ್ತು ಇಟಲಿಯ ಜಂಟಿ ಸಹಭಾಗಿತ್ವದಲ್ಲಿ ಎಟಿಆರ್ ಕಂಪನಿಯು ಈ ವಿಮಾನವನ್ನು ಅಭಿವೃದ್ಧಿಪಡಿಸಿತ್ತು. ಅವಳಿ ಎಂಜಿನ್ ಟರ್ಬೊಪ್ರೊಪ್ ಹೊಂದಿದ್ದ ‘ಎಟಿಆರ್– 72’ ವಿಮಾನವು ತನ್ನ ಹೆಸರಿನಲ್ಲಿದ್ದ 72 ಸಂಖ್ಯೆಯಷ್ಟೇ ಪ್ರಯಾಣಿಕರ ಸಾಮರ್ಥ್ಯವನ್ನು ಹೊಂದಿದ್ದ ವಿಶಿಷ್ಟ ವಿಮಾನವಾಗಿತ್ತು. ಪ್ರಸ್ತುತ ಈ ವಿಮಾನವನ್ನು ಬುದ್ಧ ಏರ್ ಮತ್ತು ಯೇತಿ ಏರ್‌ಲೈನ್ಸ್ ಮಾತ್ರ ಅಲ್ಪಾವಧಿಯ ಸೇವೆಗೆ ಬಳಸುತ್ತಿದ್ದವು.

‘ಅಸಮರ್ಪಕ ನಿರ್ವಹಣೆ ಅಥವಾ ಪೈಲಟ್‌ನ ಆಯಾಸದ ಕಾರಣದಿಂದಾಗಿ ಭಾನುವಾರ ವಿಮಾನವು ಅಪಘಾತಕ್ಕೀಡಾಗಿರುವ ಸಾಧ್ಯತೆ ಇದೆ. ಆದರೆ, ವಿಸ್ತೃತ ತನಿಖೆಯ ನಂತರವೇ ಅಪಘಾತಕ್ಕೆ ನಿಖರ ಕಾರಣ ಏನೆಂಬುದು ತಿಳಿಯಲಿದೆ’ ಎಂದು ವಿಮಾನ ಅಪಘಾತ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

‘ಅಪಘಾತ ಸಂಭವಿಸುವ ಕೆಲವೇ ಸೆಕೆಂಡುಗಳ ಮುನ್ನ ಮೊಬೈಲ್‌ ವಿಡಿಯೊದಲ್ಲಿ ದಾಖಲಾದ ದೃಶ್ಯಾವಳಿಗಳನ್ನು ಗಮನಿಸಿದರೆ, ವಿಮಾನವು ಕೆಳಗಿಳಿಯುವ ಸಂದರ್ಭದಲ್ಲಿ ಆಕಾಶ ಶುಭ್ರವಾಗಿತ್ತು, ಯಾವುದೇ ಕೆಟ್ಟ ಹವಾಮಾನವೂ ಇರಲಿಲ್ಲ. ಅಪಘಾತಕ್ಕೀಡಾಗುವ ಮುನ್ನ ವಿಮಾನದ ಮುಂಭಾಗವು ತುಸು ಮೇಲಕ್ಕೆ ಹೋಗಿದೆ. ಬಳಿಕ ರೆಕ್ಕೆಗಳು ಎಡಭಾಗಕ್ಕೆ ಇಳಿಮುಖವಾಗಿದ್ದು, ನಿಷ್ಕ್ರಿಯವಾಗಿರುವ ಸಾಧ್ಯತೆ ಇದೆ’ ಎಂದು ತನಿಖಾಧಿಕಾರಿಯೊಬ್ಬರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT