ಗುರುವಾರ , ಜನವರಿ 28, 2021
25 °C

ಕೊನೆಗೂ ಸೋಲೊಪ್ಪಿಕೊಂಡ ಟ್ರಂಪ್; ಜ.20ರಂದು ಅಧಿಕಾರ ಹಸ್ತಾಂತರ

ಪಿಟಿಐ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್: ಅಮೆರಿಕ ಕ್ಯಾಪಿಟಲ್‌ ಕಟ್ಟಡಕ್ಕೆ ನಡೆದ ದಾಳಿಯನ್ನು ಖಂಡಿಸಿರುವ ನಿರ್ಗಮಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಸುಗಮವಾಗಿ ಅಧಿಕಾರವನ್ನು ಹಸ್ತಾಂತರಿಸಲಾಗುವುದು ಎಂದು ಹೇಳಿದ್ದಾರೆ.

ಅಮೆರಿಕ ಇತಿಹಾಸದಲ್ಲೇ ಅತ್ಯಂತ ಕರಾಳ ದಿನವೆಂಬಂತೆ ಬುಧವಾರ ಡೊನಾಲ್ಡ್ ಟ್ರಂಪ್ ಬೆಂಬಲಿಗರು ಸಂಸತ್ ಭವನಕ್ಕೆ (ಕ್ಯಾಪಿಟಲ್) ಮುತ್ತಿಗೆ ಹಾಕಿ ಹಿಂಸಾಚಾರ ನಡೆಸಿದ್ದರು. ಅಮೆರಿಕ ಸಂಸತ್‌ನಲ್ಲಿ ಜೋ ಬೈಡನ್ ಗೆಲುವನ್ನು ಪ್ರಮಾಣೀಕರಿಸುವ ವೇಳೆಯಲ್ಲಿ ದಾಳಿ ನಡೆದಿತ್ತು. ಹಿಂಸಾಚಾರದಲ್ಲಿ ನಾಲ್ವರು ಮೃತಪಟ್ಟಿದ್ದರು.

2020ರ ಅಧ್ಯಕ್ಷೀಯ ಚುನಾವಣೆಯಲ್ಲಿ ಜೋ ಬೈಡನ್ ಗೆಲುವನ್ನು ಕೊನೆಗೂ ಒಪ್ಪಿಕೊಂಡಿರುವ ಡೊನಾಲ್ಡ್ ಟ್ರಂಪ್, ಸುಗಮ, ಕ್ರಮಬದ್ಧ ಹಾಗೂ ತಡೆರಹಿತವಾಗಿ ಅಧಿಕಾರವನ್ನು ಹಸ್ತಾಂತರಿಸುವುದಾಗಿ ತಿಳಿಸಿದರು.

ಅಮೆರಿಕ ಕಾಂಗ್ರೆಸ್ ಚುನಾವಣೆ ಫಲಿತಾಂಶಗಳನ್ನು ಪ್ರಮಾಣೀಕರಿಸಿದೆ. ಹೊಸ ಆಡಳಿತ ಜನವರಿ 20ರಂದು ಉದ್ಘಾಟಿಸಲಾಗುವುದು. ಅಲ್ಲದೆ ಸುಗಮ, ಕ್ರಮಬದ್ಧ ಮತ್ತು ತಡೆರಹಿತ ಅಧಿಕಾರ ಹಸ್ತಾಂತರವನ್ನು ಖಡಿತಪಡಿಸುವುದರತ್ತ ತನ್ನ ಗಮನ ಕೇಂದ್ರಿತವಾಗಿದೆ ಎಂದು ಡೊನಾಲ್ಡ್ ಟ್ರಂಪ್ ತಿಳಿಸಿದರು.

ಇದನ್ನೂ ಓದಿ: 

ಹಿಂಸಾಚಾರವನ್ನು ಖಂಡಿಸಿರುವ ಡೊನಾಲ್ಡ್ ಟ್ರಂಪ್, ಇದು ಹೇಯ ಕೃತ್ಯ ಎಂದು ಹೇಳಿದರು. ಎಲ್ಲ ಅಮೆರಿಕನ್ನರಂತೆ ನಾನು ಕೂಡಾ ಹಿಂಸಾಚಾರ, ಕಾನೂನುಬಾಹಿರತೆ ಮತ್ತು ಹಾನಿಕರ ಘಟನೆಯಿಂದ ಅಸಮಾಧಾನಗೊಂಡಿದ್ದೇನೆ. ಅಮೆರಿಕ ಕ್ಯಾಪಿಟಲ್ ಕಟ್ಟಡವನ್ನು ಸುರಕ್ಷಿತವಾಗಿರಿಸಲು ಮತ್ತು ಒಳನುಗ್ಗಿದ ಪ್ರತಿಭಟನಕಾರರನ್ನು ಹೊರಹಾಕಲು ತಕ್ಷಣ ನ್ಯಾಷನಲ್ ಗಾರ್ಡ್ ನಿಯೋಜಿಸಿ ಫೆಡರಲ್ ಕಾನೂನು ಜಾರಿಗೊಳಿಸಿದ್ದೇನೆ. ಅಮೆರಿಕ ಯಾವತ್ತೂ ಕಾನೂನು ಸುವ್ಯವಸ್ಥೆಯ ರಾಷ್ಟ್ರವಾಗಿರಬೇಕು ಎಂದು ತಿಳಿಸಿದರು.

ಹಾಗಿದ್ದರೂ ಹಿಂಸಾಚಾರವನ್ನು ಪ್ರಚೋದಿಸುವಲ್ಲಿ ತಮ್ಮ ಪಾತ್ರದ ಬಗ್ಗೆ ಡೊನಾಲ್ಡ್ ಟ್ರಂಪ್ ಮಾತು ಎತ್ತಲಿಲ್ಲ. ನಮ್ಮ ಬೆಂಬಲಿಗರು ನಿರಾಸೆಗೊಂಡಿದ್ದಾರೆ. ನಮ್ಮ ಪ್ರಯಾಣವು ಈಗಷ್ಟೇ ಆರಂಭವಾಗಿದೆ ಎಂಬುದನ್ನು ಅವರಿಗೆ ಹೇಳಲಿಚ್ಛಿಸುತ್ತೇನೆ ಎಂದು ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು