ಲಾಹೋರ್: ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಸರ್ಕಾರ ನೀಡುವ ಉಚಿತ ಗೋಧಿ ಹಿಟ್ಟು ಪಡೆಯುವ ವೇಳೆ ಕಾಳ್ತುಳಿತಕ್ಕೆ ಸಿಲುಕಿ ಮತ್ತು ಆಯಾಸದಿಂದಾಗಿ ಕಳೆದ ಕೆಲವು ದಿನಗಳಲ್ಲಿ ಕನಿಷ್ಠ ನಾಲ್ವರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿರುವ ಪಾಕಿಸ್ತಾನ ಸರ್ಕಾರ, ಬಡವರಿಗಾಗಿ ಉಚಿತ ಗೋಧಿ ಹಿಟ್ಟು ನೀಡುವ ಯೋಜನೆ ಆರಂಭಿಸಿದೆ. ಮುಲ್ತಾನ್, ಮುಜಫ್ಫರ್‌ಗಢ ಮತ್ತು ಫೈಸಲಾಬಾದ್‌ನ ವಿತರಣಾ ಕೇಂದ್ರಗಳಿಂದ ಗೋಧಿ ಹಿಟ್ಟು ಪಡೆಯುವ ವೇಳೆ ಇಬ್ಬರು ಕಾಳ್ತುಳಿತಕ್ಕೆ ಸಿಲುಕಿ ಮೃತಪಟ್ಟರೆ, ಇನ್ನಿಬ್ಬರು ಸರದಿಯಲ್ಲಿ ನಿಂತು ತೀವ್ರ ಆಯಾಸಗೊಂಡು ಮೃತಪಟ್ಟಿದ್ದಾರೆ. ಹಲವರು ಗಾಯಗೊಂಡಿದ್ದಾರೆ ಎಂದು ಪಂಜಾಬ್ ಸರ್ಕಾರದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
‘ತೀವ್ರ ನೂಕು ನುಗ್ಗಾಟ ಮತ್ತು ಸರ್ಕಾರಿ ವಿತರಣಾ ಕೇಂದ್ರಗಳಲ್ಲಿ ಸೌಲಭ್ಯಗಳ ಕೊರತೆಯ ಕಾರಣದಿಂದ ಈ ಅವಘಡ ಸಂಭಿಸಿದೆ’ ಎಂದು ಅವರು ತಿಳಿಸಿದ್ದಾರೆ.
ಸರದಿಯಲ್ಲಿ ನಿಲ್ಲುವಂತೆ ಆಗ್ರಹಿಸಿ ಪೊಲೀಸರೂ ಹೊಡೆಯುತ್ತಿದ್ದಾರೆ. ವಿತರಣಾ ಕೇಂದ್ರದಲ್ಲಿ ಸೌಲಭ್ಯಗಳ ಕೊರತೆ ಖಂಡಿಸಿ ಜನರು ಸರ್ಕಾರವನ್ನು ಟೀಕಿಸುತ್ತಿದ್ದಾರೆ.
ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಪಾಕಿಸ್ತಾನ್ ತೆಹ್ರೀಕ್–ಎ–ಇನ್ಸಾಫ್ (ಪಿಟಿಐ) ಪಕ್ಷ ಅಮಾಯಕ ನಾಗರಿಕರ ಸಾವನ್ನು ಖಂಡಿಸಿದೆ.
‘ಉಚಿತ ಹಿಟ್ಟು ಪಡೆಯಲು ಹೋಗಿ ಜನರು ಜೀವ ಕಳೆದುಕೊಳ್ಳುತ್ತಿದ್ದಾರೆ. ಇದು ಈಗಿನ ಪಾಕಿಸ್ತಾನ. ಸರ್ಕಾರದ ಲೂಟಿಕೋರರ ಕೆಟ್ಟ ನೀತಿಗಳಿಂದ ಪರಿಸ್ಥಿತಿ ಹೀಗಾಗಿದೆ’ ಎಂದು ಪಿಟಿಐನ ಪಂಜಾಬ್ ಘಟಕದ ಅಧ್ಯಕ್ಷ ಡಾ.ಯಾಸ್ಮಿನ್ ರಶೀದ್ ತಿಳಿಸಿದ್ದಾರೆ.
ವ್ಯಾಪಕ ಟೀಕೆ ಬೆನ್ನಲ್ಲೇ ಪ್ರಧಾನಿ ಶೆಹಬಾಝ್ ಷರೀಫ್ ಅವರು ಗೋಧಿ ಹಿಟ್ಟು ವಿತರಣಾ ಕೇಂದ್ರಗಳಿಗೆ ಭೇಟಿ ನೀಡುತ್ತಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.