ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಬೂಲ್: ಸ್ಫೋಟದ ಬಳಿಕ ಜನರ ತೆರವು ಕಾರ್ಯಾಚರಣೆ ಬಿರುಸು

Last Updated 28 ಆಗಸ್ಟ್ 2021, 4:01 IST
ಅಕ್ಷರ ಗಾತ್ರ

ಕಾಬೂಲ್:ಬಾಂಬ್ ದಾಳಿ ನಡೆದ ಕಾರಣ ಹಲವು ದೇಶಗಳು ತೆರವು ಕಾರ್ಯಾಚರಣೆಯನ್ನು ಚುರುಕುಗೊಳಿಸಿವೆ. ಇನ್ನೆರಡು ದಿನಗಳಲ್ಲಿ ತೆರವು ಕಾರ್ಯಾಚರಣೆಯನ್ನು ಮುಗಿಸುವುದಾಗಿ ಬ್ರಿಟನ್ ಹೇಳಿದೆ. ಅಮೆರಿಕವು ತನ್ನ ತೆರವು ಕಾರ್ಯಾಚರಣೆಯನ್ನು ಬಿರುಸಾಗಿಸಿದೆ.

ಶುಕ್ರವಾರ ಬೆಳಿಗ್ಗೆವರೆಗೆ 1 ಲಕ್ಷ ಜನರನ್ನು ಕಾಬೂಲ್‌ನಿಂದ ತೆರವು ಮಾಡಲಾಗಿದೆ. ಉಳಿದಿರುವ ಕೆಲವೇ ಮಂದಿಯನ್ನು ಗಡುವಿನೊಳಗೆ ತೆರವು ಮಾಡಲಾಗುತ್ತದೆ ಎಂದು ಅಮೆರಿಕವು ಹೇಳಿದೆ.

ಬಾಂಬ್ ದಾಳಿ ನಡೆದ ಮರುದಿನವಾದ ಶುಕ್ರವಾರ ಸಾವಿರಾರು ಮಂದಿ ವಿಮಾನ ನಿಲ್ದಾಣದ ಸುತ್ತ ಸೇರಿದ್ದರು. ತೆರವು ಕಾರ್ಯಾಚರಣೆ ಚುರುಕುಗೊಳಿಸಿರುವ ಕಾರಣ, ಅಫ್ಗಾನಿಸ್ತಾನ ತೊರೆಯಲು ಹಲವು ಮಂದಿ ಮುಂದಾಗಿದ್ದಾರೆ.

l ತೆರವು ಕಾರ್ಯಾಚರಣೆಯನ್ನು ನಡೆಸುತ್ತಿದ್ದೇವೆ. ಆದರೆ ಶೀಘ್ರವೇ ಕಾರ್ಯಾಚರಣೆ ಸ್ಥಗಿತಗೊಳಿಸುವುದಾಗಿ ಫ್ರಾನ್ಸ್ ಸರ್ಕಾರ ಹೇಳಿದೆ

l ಅಫ್ಗಾನಿಸ್ತಾನದಲ್ಲಿರುವ ಜಪಾನ್ ಪ್ರಜೆಗಳು ಮತ್ತು ರಾಜತಾಂತ್ರಿಕ ಸಿಬ್ಬಂದಿಯನ್ನು ತೆರವು ಮಾಡಲು ಯತ್ನಿಸುತ್ತಿದ್ದೇವೆ. ಆದರೆ ತೆರವು ಕಾರ್ಯಾಚರಣೆ ಎಷ್ಟು ದಿನ ನಡೆಯಲಿದೆ ಎಂಬುದು ಗೊತ್ತಿಲ್ಲ ಎಂದು ಜಪಾನ್ ಸರ್ಕಾರ ಹೇಳಿದೆ

l ತೆರವು ಕಾರ್ಯಾಚರಣೆಯನ್ನು ಜರ್ಮನಿ ಶುಕ್ರವಾರ ಸ್ಥಗಿತಗೊಳಿಸಿದೆ. ಬೆಲ್ಜಿಯಂ ಮತ್ತು ಸ್ವಿಟ್ಜರ್ಲೆಂಡ್ ಪ್ರಜೆಗಳನ್ನು ಜರ್ಮನ್ ಸೇನೆ ತೆರವು ಮಾಡಬೇಕಿತ್ತು. ಆದರೆ ಈಗ ಅಮೆರಿಕವು ಬೆಲ್ಜಿಯಂ ಮತ್ತು ಸ್ವಿಟ್ಜರ್ಲೆಂಡ್ ಪ್ರಜೆಗಳನ್ನು ತೆರವು ಮಾಡಲಿದೆ

l ಇಟಲಿ ತೆರವು ಕಾರ್ಯಾಚರಣೆಯನ್ನು ಶುಕ್ರವಾರ ಸ್ಥಗಿತಗೊಳಿಸಿದೆ

l ಅಫ್ಗನ್‌ನಲ್ಲಿರುವ ತನ್ನ ಎಲ್ಲಾ ಪ್ರಜೆಗಳು ಮತ್ತು ತೆರವಿಗೆ ಗುರುತಿಸಲಾಗಿದ್ದವರನ್ನು ಪೂರ್ಣ ಪ್ರಮಾಣದಲ್ಲಿ ತೆರವು ಮಾಡಲು ಸಾಧ್ಯವಾಗಿಲ್ಲ ಎಂದು ನ್ಯೂಜಿಲೆಂಡ್ ಹೇಳಿದೆ. ಆದರೆ ತೆರವು ಕಾರ್ಯಾಚರಣೆ ಸ್ಥಗಿತಗೊಳಿಸಿದೆ

l ಅಫ್ಗಾನಿಸ್ತಾನದಲ್ಲಿರುವ ಹವಾಮಾನ ವೈಪರೀತ್ಯ ಕಾರ್ಯಕರ್ತರನ್ನು ಸಂಪೂರ್ಣವಾಗಿ ತೆರವು ಮಾಡಬೇಕು ಎಂದು ಗ್ರೆಟಾ ಥುನ್‌ಬರ್ಗ್ ಜಾಗತಿಕ ಸಮುದಾಯಕ್ಕೆ ಮನವಿ ಮಾಡಿದ್ದಾರೆ

l ತೆರವು ಕಾರ್ಯಾಚರಣೆಯನ್ನು ಸ್ವೀಡನ್ ಸ್ಥಗಿತಗೊಳಿಸಿದೆ

ರಾಕೆಟ್‌ ದಾಳಿಯ ಭೀತಿ

ದಾಳಿಯ ಹೊಣೆಯನ್ನು ಇಸ್ಲಾಮಿಕ್ ಸ್ಟೇಟ್ (ಐಎಸ್‌) ಉಗ್ರ ಸಂಘಟನೆ ಹೊತ್ತಿದೆ. ಇಸ್ಲಾಮಿಕ್ ಸ್ಟೇಟ್‌ನ ಅಫ್ಗನ್ ಘಟಕವಾದ ‘ಇಸ್ಲಾಮಿಕ್ ಸ್ಟೇಟ್-ಖೋರಸಾನ್‌’ (ಐಎಸ್‌-ಕೆ) ಈ ದಾಳಿಯನ್ನು ನಡೆಸಿದೆ ಎಂದು ಐಎಸ್ ಹೇಳಿದೆ. ಈ ಘಟಕವು 2015ರಿಂದ ಕಾರ್ಯನಿರ್ವಹಿಸುತ್ತಿದೆ.

ಆದರೆ ದಾಳಿಯ ಸ್ವರೂಪ ಎಂಥದ್ದು ಎಂಬುದರ ಬಗ್ಗೆ ಹಲವು ಪ್ರಶ್ನೆಗಳು ಮೂಡಿವೆ. ‘ಆರಂಭದಲ್ಲಿ ಇದು ಆತ್ಮಹತ್ಯಾ ಬಾಂಬ್ ದಾಳಿ ಎಂದು ಗುರುತಿಸಲಾಗಿತ್ತು. ಆದರೆ, ಎರಡೂ ಬಾಂಬ್‌ ದಾಳಿಗಳು ಆತ್ಮಹತ್ಯಾ ಬಾಂಬ್ ದಾಳಿ ಆಗಿರುವ ಸಾಧ್ಯತೆ ಇಲ್ಲ. ಮತ್ತೊಂದು ಬಾಂಬ್‌ ಅನ್ನು ಬ್ಯಾಗ್‌ನಲ್ಲಿ ಅಥವಾ ವಾಹನದಲ್ಲಿ ಇರಿಸಿ ಸ್ಫೋಟಿಸಿರುವ ಸಾಧ್ಯತೆ ಇದೆ’ ಎಂದು ಅಮೆರಿಕದ ರಕ್ಷಣಾ ಸಚಿವಾಲಯ ಹೇಳಿದೆ.

‘ಬಾಂಬ್ ದಾಳಿ ವೇಳೆ ಸಂಭವಿಸಿದ, ಗುಂಡಿನ ದಾಳಿಯನ್ನು ನಡೆಸಿದವರು ಯಾರು ಎಂಬುದು ಗೊತ್ತಾಗಿಲ್ಲ. ಬಹುಶಃ ಬಾಂಬ್ ದಾಳಿಯ ನಂತರ ಉಂಟಾದ ನೂಕುನುಗ್ಗಲನ್ನು ಚದುರಿಸಲು ತಾಲಿಬಾನಿಗಳೇ ಗಾಳಿಯಲ್ಲಿ ಗುಂಡುಹಾರಿಸಿರುವ ಸಾಧ್ಯತೆ ಇದೆ’ ಎಂದು ಅಮೆರಿಕದ ರಕ್ಷಣಾ ಸಚಿವಾಲಯ ಶಂಕೆ ವ್ಯಕ್ತಪಡಿಸಿದೆ.

‘ಇಸ್ಲಾಮಿಕ್ ಸ್ಟೇಟ್ ಉಗ್ರರು ತಾಲಿಬಾನ್‌ ಅನ್ನೂ ವಿರೋಧಿಸುತ್ತಾರೆ, ಪಾಶ್ಚಿಮಾತ್ಯ ದೇಶಗಳನ್ನೂ ದ್ವೇಷಿಸುತ್ತಾರೆ. ಹೀಗಾಗಿ ತಾಲಿಬಾನ್ ಮತ್ತು ಅಮೆರಿಕ-ಮಿತ್ರ ರಾಷ್ಟ್ರಗಳ ಸೈನಿಕರನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆಸಿದ್ದಾರೆ. ಈಗ ಮತ್ತಷ್ಟು ದಾಳಿ ನಡೆಸುವ ಸಾಧ್ಯತೆ. ಈ ಬಾರಿ ರಾಕೆಟ್ ಮತ್ತು ಬಾಂಬ್ ತುಂಬಿದ ಕಾರನ್ನು ನುಗ್ಗಿಸುವ ಸಾಧ್ಯತೆ ಇದೆ’ ಎಂದು ಅಮೆರಿಕ ಮತ್ತೆ ಎಚ್ಚರಿಕೆ ನೀಡಿದೆ.

ಅಮೆರಿಕ ಎಡವಟ್ಟು

ತಾಲಿಬಾನ್ ವಿರುದ್ಧ ಹೋರಾಡಲು ಅಮೆರಿಕಕ್ಕೆ ನೆರವಾಗಿದ್ದ ಅಫ್ಗನ್ ಪ್ರಜೆಗಳ ವಿವರವನ್ನು ಅಮೆರಿಕವೇ ಈಗ ಪರೋಕ್ಷವಾಗಿ ತಾಲಿಬಾನ್‌ಗೆ ನೀಡಿದೆ.

ಅಫ್ಗಾನಿಸ್ತಾನದಲ್ಲಿರುವ ಅಮೆರಿಕದ ರಾಯಭಾರ ಕಚೇರಿಗಳನ್ನು ಅಮೆರಿಕವು ಇದ್ದ ಹಾಗೆಯೇ ಬಿಟ್ಟುಹೋಗಿದೆ. ಸಿಬ್ಬಂದಿಯನ್ನು ಮಾತ್ರವೇ ತೆರವು ಮಾಡಿದ್ದು, ದಾಖಲೆ ಪತ್ರಗಳು ಮತ್ತು ದತ್ತಾಂಶಗಳನ್ನು ಬಿಟ್ಟುಬಂದಿದೆ. ಈ ದಾಖಲೆ ಪತ್ರಗಳು ಈಗ ತಾಲಿಬಾನ್‌ನ ವಶವಾಗಿವೆ. ಈ ದಾಖಲೆ ಪತ್ರಗಳನ್ನು ಬಳಸಿಕೊಂಡು ತಾಲಿಬಾನ್, ಈ ಜನರ ಮೇಲೆ ಸೇಡು ತೀರಿಸಿಕೊಳ್ಳುವ ಅಪಾಯವಿದೆ ಎಂದು ಇಲ್ಲಿನ ಮಾಧ್ಯಮಗಳು ವರದಿ ಮಾಡಿವೆ. ತಾಲಿಬಾನ್ ವಿರುದ್ಧ ಕೆಲಸ ಮಾಡಿದ್ದವರ ಮೇಲೆ ಸೇಡು ತೀರಿಸಿಕೊಳ್ಳುವುದಿಲ್ಲ ಎಂದು ತಾಲಿಬಾನ್ ವಕ್ತಾರರು ಹೇಳಿದ್ದಾರೆ. ಆದರೆ ತಾಲಿಬಾನಿಗಳು ತಮ್ಮ ವಿರುದ್ಧ ಕೆಲಸ ಮಾಡಿದ್ದವರಿಗಾಗಿ, ಕಾಬೂಲ್‌ನಲ್ಲಿ ಮನೆ ಮನೆ ಹುಡುಕುತ್ತಿದ್ದಾರೆ. ಈಗ ತಮ್ಮ ವಿರುದ್ಧ ಕೆಲಸ ಮಾಡಿದವರ ಸಂಪೂರ್ಣ ವಿವರ ಅವರಿಗೆ ದೊರೆತಿರುವ ಕಾರಣ, ಸೇಡಿನ ಕಾರ್ಯಾಚರಣೆ ತೀವ್ರವಾಗುವ ಅಪಾಯವಿದೆ ಎಂದು ಇಲ್ಲಿನ ಮಾಧ್ಯಮಗಳು ಕಳವಳ ವ್ಯಕ್ತಪಡಿಸಿವೆ.

ಪ್ರತೀಕಾರ ಖಂಡಿತ: ಬೈಡನ್‌

ಬಾಂಬ್ ದಾಳಿಯನ್ನು ಹಲವು ದೇಶಗಳು ಖಂಡಿಸಿವೆ. ಆದರೆ ಅಮೆರಿಕವು ಪ್ರತೀಕಾರದ ಮಾತು
ಗಳನ್ನಾಡಿದೆ. ಜಪಾನ್, ಜರ್ಮನಿ, ರಷ್ಯಾ, ಫ್ರಾನ್ಸ್, ಟರ್ಕಿ ಈ ದಾಳಿಯನ್ನು ಖಂಡಿಸಿವೆ.

‘ನಮ್ಮ ಮೇಲೆ ದಾಳಿ ನಡೆಸಿದ್ದ ಅಲ್‌-ಕೈದಾ ಉಗ್ರ ಒಸಾಮಾ ಬಿನ್ ಲಾಡೆನ್‌ನನ್ನು ಮುಗಿಸಿದೆವು. ಅಲ್‌-ಕೈದಾವನ್ನೂ ಹತ್ತಿಕ್ಕಿದೆವು. ಈಗ ನಮ್ಮ ಸೈನಿಕರನ್ನು ಗುರಿ ಮಾಡಿಕೊಂಡು ದಾಳಿ ನಡೆಸಿರುವ ಇಸ್ಲಾಮಿಕ್ ಸ್ಟೇಟ್ ಉಗ್ರರನ್ನು ಮರೆಯುವುದಿಲ್ಲ. ಈ ದಾಳಿಗೆ ತಕ್ಕ ಉತ್ತರ ನೀಡುತ್ತೇವೆ. ನಿಮ್ಮನ್ನು ಬೇಟೆಯಾಡುತ್ತೇವೆ’ ಎಂದು ಅಮೆರಿಕದ ಅಧ್ಯಕ್ಷ ಜೋ ಬೈಡನ್ ಅವರು ಟಿ.ವಿ ಭಾಷಣದಲ್ಲಿ ಘೋಷಿಸಿದ್ದಾರೆ.

‘ವಿಮಾನ ನಿಲ್ದಾಣದ ಮೇಲಿನ ದಾಳಿ ಅತ್ಯಂತ ಗಂಭೀರವಾದುದು. ಅಲ್ಲಿನ ಸ್ಥಿತಿ ಎಷ್ಟು ಅಪಾಯಕಾರಿಯಾಗಿದೆ ಎಂಬುದನ್ನು ಈ ದಾಳಿ ತೋರಿಸಿದೆ’ ಎಂದು ಚೀನಾ ವಿದೇಶಾಂಗ ಸಚಿವಾಲಯ ಕಳವಳ ವ್ಯಕ್ತಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT