ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೇಪಾಳ: ಪರ್ವತಾರೋಹಿ, ಚಾರಣಿಗರಿಗೆ ಅವಕಾಶ

ಕಟ್ಟುನಿಟ್ಟಿನ ‘ಕೋವಿಡ್‌ 19‘ ಮಾರ್ಗಸೂಚಿ ಪಾಲನೆ ಕಡ್ಡಾಯ
Last Updated 3 ನವೆಂಬರ್ 2020, 10:22 IST
ಅಕ್ಷರ ಗಾತ್ರ

ಕಠ್ಮಂಡು: ಕೊರೊನಾ ಸಾಂಕ್ರಾಮಿಕದಿಂದಾಗಿ ಏಳು ತಿಂಗಳುಗಳಿಂದ ಸ್ಥಗಿತಗೊಳಿಸಿದ್ದ ಪರ್ವತಾರೋಹಣ, ಚಾರಣ, ಪ್ರವಾಸೋದ್ಯಮದ ಚಟುವಟಿಕೆಗಳನ್ನು ಪುನರಾರಂಭಿಸಲು ನೇಪಾಳ ಸರ್ಕಾರ ಸಿದ್ಧತೆ ನಡೆಸಿದೆ.

ವಿದೇಶಿ ಪ್ರವಾಸಿಗರೇ ನೇಪಾಳದ ಪ್ರಮುಖ ಆದಾಯದ ಮೂಲ. ಆದರೆ, ಕೊರೊನಾ ಸಾಂಕ್ರಾಮಿಕದ ಕಾರಣ ಪ್ರವಾಸೋದ್ಯಮ ಚಟುವಟಿಕೆಗೆ ಬಂದ್‌ ಮಾಡಿದ್ದ ಕಾರಣದಿಂದ, ಈ ಉದ್ಯಮ ಅವಲಂಬಿಸಿದ್ದ ಸುಮಾರು 80 ಸಾವಿರಕ್ಕೂ ಹೆಚ್ಚು ಮಂದಿ ತೊಂದರೆಗೆ ಸಿಲುಕಿದ್ದರು.

ಈಗ ಕೋವಿಡ್‌ 19 ಮಾರ್ಗಸೂಚಿ ಮತ್ತು ನಿರ್ಬಂಧಗಳೊಂದಿಗೆ ಚಾರಣ, ಪರ್ವತಾರೋಹಣಕ್ಕೆ ಅವಕಾಶ ಕಲ್ಪಿಸಲಾಗಿದೆ. ಪ್ರಸಿದ್ಧ ಪರ್ವತಗಳನ್ನು ಏರಬಯಸುವ ನಿಯಮಿತ ಸಂಖ್ಯೆಯ ಚಾರಣಿಗರಿಗೆ ಸರ್ಕಾರ ಅವಕಾಶ ನೀಡಲು ತೀರ್ಮಾನಿಸಿದೆ. ವಿಶ್ವದ ಅತ್ಯಂತ ಎತ್ತರದ 14 ಪರ್ವತಗಳಲ್ಲಿ ಅತಿ ಎತ್ತರದ ಪರ್ವತ ಮೌಂಟ್‌ ಎವರೆಸ್ಟ್‌ ಸೇರಿದಂತೆ ಎಂಟು ಪರ್ವತಗಳು ನೇಪಾಳದಲ್ಲಿವೆ.

‘ಎಲ್ಲ ಪ್ರವಾಸಿಗರಿಗೂ ನೇಪಾಳ ಪ್ರವೇಶಕ್ಕೆ ಅವಕಾಶ ಕಲ್ಪಿಸುತ್ತಿಲ್ಲ. ಪೂರ್ವಾನುಮತಿಯೊಂದಿಗೆ ಬರುವಂತಹ ಪರ್ವತಾರೋಹಿಗಳಿಗೆ ಮತ್ತು ಚಾರಣಿಗರಿಗೆ ಮಾತ್ರ ಅವಕಾಶ ನೀಡುತ್ತಿದ್ದೇವೆ‘ ಎಂದು ನೇಪಾಳದ ಪ್ರವಾಸೋದ್ಯಮ ಇಲಾಖೆಯ ಪ್ರಧಾನ ನಿರ್ದೇಶಕ ರುದ್ರಸಿಂಗ್‌ ತಮಂಗ್‌ ಹೇಳಿದರು.

‘ನಮಗೆ ನಿರ್ವಹಿಸಲು ಸಾಧ್ಯವಾಗುವಂತಹ ಪ್ರವಾಸಿಗರಿಗೆ ಮಾತ್ರ ಅವಕಾಶ ನೀಡಲಾಗುತ್ತಿದೆ. ನೇಪಾಳಕ್ಕೆ ಬರುವ ಅಂಥ ವಿದೇಶಿ ಪ್ರವಾಸಿಗರು ‘ಆಗಮನದ ವೀಸಾ‘ದ ಬದಲಿಗೆ ಪ್ರವಾಸೋದ್ಯಮ ಇಲಾಖೆಯಿಂದ ಪೂರ್ವಾನುಮತಿ ಪಡೆದಿರಬೇಕು. ಜತೆಗೆ, ತಾವು ಪ್ರವಾಸ ಮಾಡುವ / ಚಾರಣ ಮಾಡುವ ಸ್ಥಳ ಮತ್ತು ವಿವರಗಳನ್ನು ನೀಡಬೇಕು. ಸ್ಥಳೀಯವಾಗಿ ಯಾವ ಪ್ರವಾಸಿ ಸಂಸ್ಥೆಯೊಂದಿಗೆ ವ್ಯವಹರಿಸುತ್ತೀರಿ ಎಂದು ತಿಳಿಸಬೇಕು. ಜತೆಗೆ, ಕೋವಿಡ್‌ 19 ಚಿಕಿತ್ಸೆ ಒಳಗೊಂಡಿರುವ ಆರೋಗ್ಯವಿಮೆ ಹೊಂದಿರಬೇಕು‘ ಎಂದು ತಮಂಗ್ ತಿಳಿಸಿದರು.

ತಮ್ಮ ದೇಶದಿಂದ ಹೊರಡುವಾಗ ಕೊರೊನಾ ಪರೀಕ್ಷೆ ಮಾಡಿಸಿ, ‘ನೆಗೆಟಿವ್ ಪ್ರಮಾಣ ಪತ್ರ‘ವನ್ನು ತಂದಿರಬೇಕು. ನೇಪಾಳಕ್ಕೆ ಬಂದವರು ಕಠ್ಮಂಡುವಿನಲ್ಲಿ ಒಂದು ವಾರದ ಕಾಲ ‘ಕ್ವಾರಂಟೈನ್‘ ಇರಬೇಕು. ನಂತರ ಪುನಃ ಕೊರೊನಾ ಪರೀಕ್ಷೆ ಮಾಡಿಸಿದ ನಂತರವೇ ಪ್ರವಾಸಕ್ಕೆ ಅನುಮತಿ ನೀಡಲಾಗುತ್ತದೆ.

ಸ್ಥಳೀಯ ಪ್ರವಾಸಿ ಮಾರ್ಗದರ್ಶಿ, ಪೋರ್ಟರ್‌, ಅಡುಗೆಯವರು, ಸಹಾಯಕರು, ಕಾರು ಚಾಲಕರು.. ಹೀಗೆ ಪ್ರವಾಸಿಗರೊಂದಿಗೆ ತೆರಳುವ ಎಲ್ಲರೂ ಕೋವಿಡ್‌ 19 ಪರೀಕ್ಷೆ ಮಾಡಿಸಿರಬೇಕು. ‘ತಾವು ವಾಸಿಸುವ ಪ್ರದೇಶ ಸೋಂಕು ಮುಕ್ತವಾಗಿದೆ‘ ಎನ್ನುವುದನ್ನು ಅವರು ದೃಢಪಡಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT