ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೆಕ್ಕೆಗಳಲ್ಲಿನ ವಾಯುಫಲಕ ಪೂರ್ಣಪ್ರಮಾಣದಲ್ಲಿ ತೆರೆಯದಿದ್ದುದೇ ದುರಂತಕ್ಕೆ ಕಾರಣ!

ಯೇತಿ ಏರ್‌ಲೈನ್ಸ್‌ ವಿಮಾನ ದುರಂತ * ನೇಪಾಳ ಮಾಧ್ಯಮಗಳ ವರದಿ
Last Updated 19 ಜನವರಿ 2023, 13:29 IST
ಅಕ್ಷರ ಗಾತ್ರ

ಕಠ್ಮಂಡು: ವಿಮಾನವನ್ನು ಇಳಿಸುವ ಸಂದರ್ಭದಲ್ಲಿ ಅದರ ರೆಕ್ಕೆಗಳೊಂದಿಗೆ ಇರುವ ವಾಯುಫಲಕಗಳನ್ನು ಪೂರ್ಣಪ್ರಮಾಣದಲ್ಲಿ ಬಳಕೆ ಮಾಡುವಲ್ಲಿ ಪೈಲಟ್‌ಗಳು ವಿಫಲರಾಗಿರಬಹುದು. ವಿಮಾನ ಅಪಘಾತಕ್ಕೀಡಾಗಲು ಇದು ಕಾರಣವಾಗಿರಬಹುದು ಎಂದು ಮಾಧ್ಯಮಗಳು ಗುರುವಾರ ವರದಿ ಮಾಡಿವೆ.

ನೇಪಾಳದ ಪೊಖರಾ ನಗರ ಬಳಿ ಕಳೆದ ಭಾನುವಾರ ಯೇತಿ ಏರ್‌ಲೈನ್ಸ್‌ನ ವಿಮಾನ (ಎಟಿಆರ್‌–72) ಅಪಘಾತಕ್ಕೀಡಾಗಿತ್ತು. ವಿಮಾನ ಅಪಘಾತಕ್ಕೆ ಈ ಅಂಶವೂ ಕಾರಣವಾಗಿರಬಹುದು ಎನ್ನಲಾಗುತ್ತಿದೆ.

ಈ ಘಟನೆಯಲ್ಲಿ, ಐವರು ಭಾರತೀಯರು ಸೇರಿ 72 ಮಂದಿ ಅಸುನೀಗಿದ್ದರು. ಅಪಘಾತಕ್ಕೆ ಕಾರಣಗಳನ್ನು ಪತ್ತೆ ಮಾಡಲು ತನಿಖೆ ನಡೆಯುತ್ತಿದೆ.

‘ವಿಮಾನವೊಂದು ಇಳಿಯುವ ಸಂದರ್ಭದಲ್ಲಿ, ರೆಕ್ಕೆಗಳ ಜೊತೆಗಿರುವ ವಾಯುಫಲಕಗಳನ್ನು ಪೂರ್ಣಪ್ರಮಾಣದಲ್ಲಿ ತೆರೆದುಕೊಳ್ಳುವಂತೆ ಮಾಡಲಾಗುತ್ತದೆ. ಇದರಿಂದ ಕಡಿಮೆ ವೇಗದಲ್ಲಿ ಚಲಿಸುವ ವಿಮಾನದ ಮೇಲೆ ನಿಯಂತ್ರಣ ಸಾಧಿಸಲು ಹಾಗೂ ಅದರ ಚಲನೆ ಸ್ಥಗಿತವಾಗುವುದನ್ನು ತಡೆಯಲು ಸಾಧ್ಯವಾಗಲಿದೆ’ ಎಂದು ಕಠ್ಮಂಡು ಪೋಸ್ಟ್ ವರದಿ ಮಾಡಿದೆ.

‘ಬ್ಲ್ಯಾಕ್‌ಬಾಕ್ಸ್‌ನಲ್ಲಿನ ವಿವರಗಳನ್ನು ವಿಶ್ಲೇಷಿಸಿದ ನಂತರವಷ್ಟೆ ವಿಮಾನ ಅಪಘಾತಕ್ಕೀಡಾಗಲು ನಿಖರ ಕಾರಣ ಏನು ಎಂಬುದು ಗೊತ್ತಾಗಲಿದೆ’ ಎಂದೂ ವರದಿಯಲ್ಲಿ ಹೇಳಲಾಗಿದೆ.

ಫ್ರಾನ್ಸ್‌ನಿಂದ ಬಂದಿರುವ ಒಂಬತ್ತು ತಜ್ಞರನ್ನು ಒಳಗೊಂಡ ತಂಡವು ವಿಮಾನದ ಸಿಬ್ಬಂದಿಯಿಂದ ಮಾಹಿತಿ ಸಂಗ್ರಹಿಸುತ್ತಿದೆ ಎಂದು ಏರ್‌ಲೈನ್ಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT