ಸೋಮವಾರ, ಸೆಪ್ಟೆಂಬರ್ 20, 2021
29 °C

ಫ್ಲಾರಿಡಾ: ಆಸ್ಪತ್ರೆಯಲ್ಲಿ ಕೋವಿಡ್‌ ಸೋಂಕಿತರ ಸಂಖ್ಯೆ ಹೆಚ್ಚಳ

ಎಪಿ Updated:

ಅಕ್ಷರ ಗಾತ್ರ : | |

Prajavani

ಒರ್ಲಾಂಡೊ(ಅಮೆರಿಕ): ಫ್ಲಾರಿಡಾದಲ್ಲಿ ಏಕಾಏಕಿ ಕೋವಿಡ್‌ ಉಲ್ಬಣಗೊಂಡಿದ್ದು, ಪ್ರಸ್ತುತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರ ಸಂಖ್ಯೆಯು ಕೋವಿಡ್‌ ಲಸಿಕೆ ಲಭ್ಯವಾಗುವ ಮುನ್ನ ಆಸ್ಪತ್ರೆಗಳಲ್ಲಿ ದಾಖಲಾಗಿದ್ದ ಸೋಂಕಿತರ ಸಂಖ್ಯೆಯನ್ನೂ ದಾಟಿದೆ.

‘ಫ್ಲಾರಿಡಾ ರಾಜ್ಯದ ಆಸ್ಪತ್ರೆಗಳಲ್ಲಿ ಕೋವಿಡ್‌ ಸೋಂಕು ದೃಢಪಟ್ಟಿರುವ 10,207 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ’ ಎಂದು ಅಮೆರಿಕದ ಆರೋಗ್ಯ ಮತ್ತು ಮಾನವ ಸೇವೆಗಳ ಇಲಾಖೆಯು ಹೇಳಿದೆ.

‘ಕೋವಿಡ್‌ ಸೋಂಕಿಗೆ ಲಸಿಕೆ ಲಭ್ಯವಾಗುವುದಕ್ಕೂ ಮುನ್ನ ಅಂದರೆ 2020ರ  ಜುಲೈ 23ರಂದು ಆಸ್ಪತ್ರೆಯಲ್ಲಿ 10,170 ಸೋಂಕಿತರು ದಾಖಲಾಗಿದ್ದರು’ ಎಂದು ಫ್ಲಾರಿಡಾದ ಆಸ್ಪತ್ರೆಗಳ ಸಂಘವು ತಿಳಿಸಿದೆ.

ಫ್ಲಾರಿಡಾದ ಆಸ್ಪತ್ರೆಗಳಲ್ಲಿ ಕೋವಿಡ್‌ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ರೋಗಿಗಳಿಗಾಗಿ ಹಾಲ್‌ಗಳಲ್ಲಿಯೂ ಹಾಸಿಗೆ ವ್ಯವಸ್ಥೆಯನ್ನು ಮಾಡಲಾಗಿದೆ. ಅಲ್ಲದೆ ಕೋವಿಡ್‌ಗೆ ಕಿರಿಯ ವಯಸ್ಸಿನವರು ಕೂಡ ತುತ್ತಾಗುತ್ತಿದ್ದಾರೆ.

‘ಕಳೆದ ವಾರ ಫ್ಲಾರಿಡಾದಲ್ಲಿ ಸರಾಸರಿ 1,525 ವಯಸ್ಕರು ಮತ್ತು 35 ಮಕ್ಕಳು ಆಸ್ಪತ್ರೆಗೆ ದಾಖಲಾಗಿದ್ದಾರೆ. ರಾಜ್ಯದಲ್ಲಿ ಡೆಲ್ಟಾ ರೂಪಾಂತರ ತಳಿಯು ತೀವ್ರವಾಗಿ ಹರಡುತ್ತಿದೆ. ಅಲ್ಲದೆ ಜನಜೀವನವೂ ಕೋವಿಡ್‌ ಪೂರ್ವ ಸ್ಥಿತಿಗೆ ಮರಳಿರುವುದರಿಂದ ಪ್ರಕರಣಗಳು ಏರುಗತಿ ಕಂಡಿವೆ’ ಎಂದು ದಕ್ಷಿಣ ಫ್ಲಾರಿಡಾ ವಿಶ್ವವಿದ್ಯಾಲಯದ ಸಾಂಕ್ರಾಮಿಕ ರೋಗಶಾಸ್ತ್ರದ ಸಹಾಯಕ ಪ್ರಾಧ್ಯಾಪಕ ಜೇಸನ್ ಸಲೆಮಿ ತಿಳಿಸಿದರು.

ಮಿಯಾಮಿ ಆಸ್ಪತ್ರೆಯಲ್ಲಿ ಸೋಂಕಿಗೆ ತುತ್ತಾಗಿರುವ ಮಕ್ಕಳ ಸಂಖ್ಯೆಯಲ್ಲಿ ಏರುಗತಿ ಕಂಡುಬಂದಿದೆ. ಹಲವರನ್ನು ತೀವ್ರ ನಿಗಾ ಘಟಕದಲ್ಲಿ ಇರಿಸುವ ಪರಿಸ್ಥಿತಿ ಎದುರಾಗಿದೆ. ಜೋ ಡಿಮ್ಯಾಜಿಯೊ ಮಕ್ಕಳ ಆಸ್ಪತ್ರೆಯಲ್ಲಿ ಏಳು ಮಕ್ಕಳು, ನಿಕ್ಲಾಸ್ ಮಕ್ಕಳ ಆಸ್ಪತ್ರೆಯಲ್ಲಿ 17 ಮಕ್ಕಳು ಕೋವಿಡ್‌ಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರಲ್ಲಿ ಆರು ಮಕ್ಕಳನ್ನು ಐಸಿಯುನಲ್ಲಿ ಇರಿಸಲಾಗಿದೆ’ ಎಂದು ಮುಖ್ಯ ವೈದ್ಯಕೀಯ ಅಧಿಕಾರಿ ಡಾ. ಮಾರ್ಕಸ್‌ ಮೆಸ್ಟ್ರೆ ಅವರು ಮಾಹಿತಿ ನೀಡಿದರು.

‘ನಿಕ್ಲಾಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅರ್ಧದಷ್ಟು ಸೋಂಕಿತರು 12 ವರ್ಷಕ್ಕಿಂತ ಕೆಳಗಿನವರು. ಇನ್ನುಳಿದವರು ಲಸಿಕೆಗೆ ಅರ್ಹರಾಗಿದ್ದರೂ, ಲಸಿಕೆ ಪಡೆಯದವರು’ ಎಂದು ಅವರು ತಿಳಿಸಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು