ಸೋಮವಾರ, ಏಪ್ರಿಲ್ 19, 2021
23 °C
ಹಾರ್ವೆ ವಿನ್‌ಸ್ಟೀನ್‌ ಗೆ ಜೈಲು ಶಿಕ್ಷೆ ವಿಧಿಸಿ ವರ್ಷ ಕಳೆದ ನಂತರ ಮನವಿ

ಹಾಲಿವುಡ್‌ ನಿರ್ಮಾಪಕ ವಿನ್‌ಸ್ಟೀನ್ ಅತ್ಯಾಚಾರ ಪ್ರಕರಣ: ಮರು ವಿಚಾರಣೆ ಕೋರಿ ಅರ್ಜಿ

ಎಪಿ Updated:

ಅಕ್ಷರ ಗಾತ್ರ : | |

Prajavani

ನ್ಯೂಯಾರ್ಕ್‌: ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಲಿವುಡ್‌ನ ಚಿತ್ರ ನಿರ್ಮಾಪಕ ಹಾರ್ವೆ ವಿನ್‌ಸ್ಟೀನ್‌ಗೆ ಜೈಲುಶಿಕ್ಷೆ ವಿಧಿಸಿ ವರ್ಷ ಕಳೆದಿದ್ದು, ಈಗ ಇಡೀ ಪ್ರಕರಣ ಕುರಿತಂತೆ ಹೊಸದಾಗಿ ವಿಚಾರಣೆ ನಡೆಸುವಂತೆ ಕೋರಿ ವಿನ್‌ಸ್ಟೀನ್‌ ಪರ ವಕೀಲರು ಮೇಲ್ಮನವಿ ಸಲ್ಲಿಸಿದ್ದಾರೆ.

ವಿನ್‌ಸ್ಟೀನ್‌ ಪರ ವಕೀಲರಾದ ಬ್ಯಾರಿ ಕ್ಯಾಮಿನ್ಸ್‌, ಜಾನ್‌ ಲೆವೆನ್‌ಥಾಲ್‌ ಹಾಗೂ ಡಯಾನಾ ಫ್ಯಾಬಿ–ಸ್ಯಾಮ್‌ಸನ್‌ ಅವರು ರಾಜ್ಯ ಮೇಲ್ಮನವಿ ಕೋರ್ಟ್‌ನಲ್ಲಿ ಈ ಸಂಬಂಧ 166 ಪುಟಗಳ ಅರ್ಜಿ ಸಲ್ಲಿಸಿದ್ದಾರೆ.

‘ವಿನ್‌ಸ್ಟೀನ್‌ ವಿರುದ್ಧದ ಆರೋಪಗಳ ಕುರಿತಂತೆ ನ್ಯಾಯಾಧೀಶ ಜೇಮ್ಸ್‌ ಬರ್ಕ್‌ ಅವರು ನಿಷ್ಪಕ್ಷಪಾತ ವಿಚಾರಣೆ ನಡೆಸಿಲ್ಲ. ನಿಷ್ಪಕ್ಷಪಾತ ವಿಚಾರಣೆ ನಮ್ಮ ಕಕ್ಷಿದಾರರ ಹಕ್ಕು’ ಎಂದು ವಿನ್‌ಸ್ಟೀನ್‌ ಪರ ವಕೀಲರು ಹೇಳಿದ್ದಾರೆ.

ವಿನ್‌ಸ್ಟೀನ್‌ ವಿರುದ್ಧ ಅತ್ಯಾಚಾರ, ಲೈಂಗಿಕ ದೌರ್ಜನ್ಯದ ಆರೋಪಗಳಿದ್ದವು. ಈ ಕುರಿತು ವಿಚಾರಣೆ ನಡೆಸಿದ್ದ ನ್ಯಾಯಾಧೀಶ ಬರ್ಕ್‌, ವಿನ್‌ಸ್ಟೀನ್‌ಗೆ 23 ವರ್ಷ ಜೈಲು ಶಿಕ್ಷೆ ವಿಧಿಸಿ 2020ರ ಫೆಬ್ರುವರಿಯಲ್ಲಿ ತೀರ್ಪು ನೀಡಿದ್ದಾರೆ.

ಹಾಲಿವುಡ್‌ನ ಖ್ಯಾತ ನಟಿ ಏಂಜಲೀನಾ ಜೋಲಿ ಸೇರಿದಂತೆ ಅನೇಕ ನಟಿಯರು ವಿನ್‌ಸ್ಟೀನ್ ವಿರುದ್ದ ಲೈಂಗಿಕ ದೌರ್ಜನ್ಯದ ಆರೋಪ ಹೊರಿಸಿದ್ದರು. ಇದು ‘ಮೀ ಟೂ’ ಚಳವಳಿಯ ಸ್ವರೂಪ ಪಡೆದುಕೊಂಡಿತ್ತು.

ವಿನ್‌ಸ್ಟೀನ್‌ ವಿರುದ್ಧ ಆರೋಪ ಮಾಡಿರುವವರ ಪರ ವಕೀಲ ಡಗ್ಲಾಸ್‌ ವಿಗ್ಡರ್‌ ಪ್ರತಿಕ್ರಿಯಿಸಿ, ‘ವಿನ್‌ಸ್ಟೀನ್‌ ವಿರುದ್ಧದ ಆರೋಪಗಳ ಕುರಿತು ಮರುವಿಚಾರಣೆ ಕೋರಿರುವುದು ಹತಾಶೆಯನ್ನು ತೋರಿಸುತ್ತದೆ. ನ್ಯಾಯಾಧೀಶ ಬರ್ಕ್‌ ಅವರು ನಿಷ್ಪಕ್ಷಪಾತ ವಿಚಾರಣೆ ನಡೆಸಿಯೇ ತೀರ್ಪು ನೀಡಿದ್ದಾರೆ’ ಎಂದರು.

‘ಒಂದು ವೇಳೆ ಮರುವಿಚಾರಣೆ ನಡೆದರೂ, ವಿನ್‌ಸ್ಟೀನ್‌ಗೆ ವಿಧಿಸಿರುವ ಶಿಕ್ಷೆಯಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ ಎಂಬುದು ನಮ್ಮ ವಿಶ್ವಾಸ’ ಎಂದೂ ಡಗ್ಲಾಸ್‌ ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು