ಸೋಮವಾರ, ಅಕ್ಟೋಬರ್ 26, 2020
23 °C

ಕೋವಿಡ್‌ ಲಾಕ್‌ಡೌನ್‌ ಅಸಂವಿಧಾನಿಕ: ಡೊನಾಲ್ಡ್‌ ಟ್ರಂಪ್

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಗ್ರೀನ್‌ವಿಲ್‌(ಅಮೆರಿಕ): ಕೋವಿಡ್‌–19 ಪಿಡುಗಿನ ನಡುವೆಯೂ ಸಾರ್ವಜನಿಕ ಸಮಾರಂಭಗಳನ್ನು ಆಯೋಜಿಸುತ್ತಿರುವುದನ್ನು ಸಮರ್ಥಿಸಿಕೊಂಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಕೊರೊನಾ ಸೋಂಕು ವ್ಯಾಪಿಸುವುದನ್ನು ತಡೆಯಲು ರಾಷ್ಟ್ರದ ವಿವಿಧೆಡೆ ರಾಜ್ಯಗಳು ವಿಧಿಸಿರುವ ಲಾಕ್‌ಡೌನ್‌ ‘ಅಸಂವಿಧಾನಿಕ’ ಎಂದು ಟೀಕಿಸಿದ್ದಾರೆ. 

ಟೌನ್‌ಹಾಲ್‌ನಲ್ಲಿ ಎನ್‌ಬಿಸಿ ನ್ಯೂಸ್‌ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಟ್ರಂಪ್‌, ‘ಅಧ್ಯಕ್ಷನಾಗಿ ಶ್ವೇತಭವನದ ಸುಂದರವಾದ ಕೊಠಡಿಯೊಂದರಲ್ಲೇ ಉಳಿದುಕೊಳ್ಳಲು ಸಾಧ್ಯವಿಲ್ಲ. ಅಪಾಯದ ಹೊರತಾಗಿಯೂ ಜನರನ್ನು ಭೇಟಿಯಾಗಬೇಕಿದೆ’ ಎಂದರು. ಮುಖಗವಸು ಧರಿಸದೇ ಇರುವುದನ್ನೂ ಸಮರ್ಥಿಸಿಕೊಂಡ ಟ್ರಂಪ್‌, ‘ಮುಖಗವಸು ಧರಿಸಿದವರಿಗೂ ಕೊರೊನಾ ಸೋಂಕು ತಗುಲಿದೆ’ ಎಂದರು.

‘ಮುಖಗವಸು ಧರಿಸಿದವರಿಗೂ ಕೋವಿಡ್‌ ದೃಢಪಟ್ಟಿದೆ. ಚೀನಾದಿಂದ ಬಂದ ಈ ಸೋಂಕು ಹಲವರಿಗೆ ತಗುಲಿದೆ. ಈ ರೀತಿ ಆಗಲು ಬಿಡಬಾರದಿತ್ತು. ರಾಜಕೀಯ ಕಾರಣಕ್ಕಾಗಿ ರಾಷ್ಟ್ರದ ಹಲವೆಡೆ ಲಾಕ್‌ಡೌನ್‌ ಹೇರಲಾಗಿದೆ. ಲಾಕ್‌ಡೌನ್‌ ಮುಂದುವರಿಸುವುದರಿಂದ ಯಾವುದೇ ಪ್ರಯೋಜನವಿಲ್ಲ’ ಎಂದರು.  

ಅ.1ರಂದು ಟ್ರಂಪ್‌ ಅವರಿಗೆ ಕೋವಿಡ್‌ ದೃಢಪಟ್ಟಿತ್ತು. ಈ ಕಾರಣದಿಂದ ಕೆಲವು ದಿನ ಚುನಾವಣಾ ಪ್ರಚಾರದಿಂದ ಟ್ರಂಪ್‌ ದೂರ ಉಳಿದಿದ್ದರು. ನಾಲ್ಕು ದಿನ ಸೇನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ ಟ್ರಂಪ್‌, ಗುಣಮುಖರಾಗಿ ಕಳೆದ ಸೋಮವಾರದಿಂದ ಮತ್ತೆ ಚುನಾವಣಾ ಪ್ರಚಾರಕ್ಕೆ ಧುಮುಕಿದ್ದಾರೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು