ನವದೆಹಲಿ: ಬ್ರಿಟನ್‌ನಲ್ಲಿರುವ ಭಾರತೀಯ ಹೈಕಮಿಷನ್ ಕಚೇರಿಯಲ್ಲಿನ ತ್ರಿವರ್ಣ ಧ್ವಜವನ್ನು ಖಾಲಿಸ್ತಾನಿ ಪ್ರತ್ಯೇಕವಾದಿಗಳ ಗುಂಪೊಂದು ಕೆಳಗಿಳಿಸಿದ್ದೂ, ಅಲ್ಲದೇ ಘೋಷಣೆ ಕೂಗುತ್ತಾ ಖಾಲಿಸ್ತಾನದ ಧ್ವಜವನ್ನು ಏರಿಸಲು ಪ್ರಯತ್ನಿಸಿದ ಘಟನೆ ಭಾನುವಾರ ಸಂಜೆ ನಡೆದಿದೆ.
ಈ ಕುರಿತು ಬ್ರಿಟನ್ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ ಭಾರತದ ವಿದೇಶಾಂಗ ಸಚಿವಾಲಯ, ತನ್ನ ಹೈಕಮಿಷನ್ ಕಚೇರಿಗೆ ನೀಡುತ್ತಿರುವ ಭದ್ರತೆ ಹಾಗೂ ಸುರಕ್ಷತೆಯಲ್ಲಿನ ಲೋಪವನ್ನು ಪ್ರಶ್ನಿಸಿದೆ. ಬ್ರಿಟನ್ ರಾಯಭಾರಿಯನ್ನು ಕರೆಸಿ ಈ ಕುರಿತು ಸಂಪೂರ್ಣ ವಿವರ ನೀಡಲು ಆದೇಶಿಸಿದೆ.
ಮೊಬೈಲ್‌ನಲ್ಲಿ ಸೆರೆಹಿಡಿದಿರುವ ಘಟನೆ ಸಂಬಂಧಿತ ವಿಡಿಯೊವನ್ನು ಮಾಧ್ಯಮಗಳು ಬಿತ್ತರಿಸಿವೆ. ಅದರಲ್ಲಿ ಬ್ರಿಟನ್‌ನ ಭಾರತೀಯ ಹೈಕಮಿಷನ್ ಕಚೇರಿಯ ಎದುರು ಹಳದಿ ಬಣ್ಣದ ಖಾಲಿಸ್ತಾನದ ಬಾವುಟ ಹಿಡಿದ ಸುಮಾರು 30 ಜನರಿದ್ದ ಗುಂಪು ‘ಖಾಲಿಸ್ತಾನ ಜಿಂದಾಬಾದ್‘ ಎಂದು ಘೋಷಣೆ ಕೂಗುತ್ತಿದೆ. ತಕ್ಷಣ ಗುಂಪಿನಿಂದ ಮುಂದೆ ಬಂದ ವ್ಯಕ್ತಿಯೋರ್ವ ಕಮಿಷನರ್ ಕಚೇರಿಯ ಒಂದನೇ ಮಹಡಿಯನ್ನು ಏರಿ ಅಲ್ಲಿನ ಸ್ತಂಭದಲ್ಲಿದ್ದ ಭಾರತದ ತ್ರಿವರ್ಣ ಧ್ವಜವನ್ನು ಕೆಳಗಿಸುತ್ತಾನೆ. ನಂತರ, ತನ್ನ ಖಾಲಿಸ್ತಾನಿ ಧ್ವಜ ಏರಿಸಲು ಪ್ರಯತ್ನಿಸುವ ವೇಳೆಗಾಗಲೇ ಆಗಮಿಸಿದ ಕಮಿಷನರ್ ಕಚೇರಿಯ ಸಿಬ್ಬಂದಿಯೋರ್ವ ಆತನನ್ನು ತಡೆಯುತ್ತಿರುವ ದೃಶ್ಯವು ಸೆರೆಯಾಗಿದೆ.
ಘಟನೆಗೆ ಕಾರಣವೇನು?
ಹಿಂಸಾಚಾರ ಹಾಗೂ ಅಕ್ರಮ ಶಸ್ತ್ರಾಸ್ತ್ರ ಸಂಗ್ರಹಿಸಿದ ಪ್ರಕರಣಕ್ಕೆ ಸಂಬಂಧಿಸಿ ಪಂಜಾಬ್ ಸರ್ಕಾರವು ಖಾಲಿಸ್ತಾನಿ ಪ್ರತ್ಯೇಕತಾವಾದಿ ನಾಯಕ ಅಮೃತ್ ಪಾಲ್‌ಸಿಂಗ್ ಬಂಧನಕ್ಕೆ ಕಾರ್ಯಾಚರಣೆ ಶುರುಮಾಡಿರುವುದೇ ಬ್ರಿಟನ್‌ನಲ್ಲಿನ ಭಾರತೀಯ ಹೈಕಮಿಷನ್ ಕಚೇರಿಯಲ್ಲಿ ತ್ರಿವರ್ಣ ಧ್ವಜ ಇಳಿಸಿದ ಘಟನೆಗೆ ಕಾರಣ ಎನ್ನಲಾಗುತ್ತಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.