ಗುರುವಾರ , ಸೆಪ್ಟೆಂಬರ್ 23, 2021
22 °C

ನ್ಯೂಯಾರ್ಕ್: ₹ 7.2 ಕೋಟಿ ಬಹುಮಾನದ ಟಿಕೆಟ್ ಹಿಂದಿರುಗಿಸಿದ ಭಾರತೀಯ ಕುಟುಂಬ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನ್ಯೂಯಾರ್ಕ್: ಆತುರದಲ್ಲಿ ಏನೆಲ್ಲ ಆಗುತ್ತೆ. ಅದೃಷ್ಟ ನಮ್ಮ ಪರವಾಗಿದ್ದರೆ ನಮಗೆ ಸಿಗಬೇಕಾದದ್ದು ಸಿಕ್ಕೇ ಸಿಗುತ್ತದೆ ಎಂಬುದಕ್ಕೆ ಅಮೆರಿಕದಲ್ಲಿ ನಡೆದಿರುವ ಈ ಪ್ರಕರಣ ಸಾಕ್ಷಿಯಾಗಿದೆ.

ಹೌದು, 1 ಮಿಲಿಯನ್ ಡಾಲರ್ (₹ 7.2 ಕೋಟಿ) ಬಹುಮಾನ ಗೆದ್ದಿದ್ದ ಲಕ್ಕಿ ಡ್ರಾ ಟಿಕೆಟ್ ಅನ್ನು ಸರಿಯಾಗಿ ಗಮನಿಸದ ಮಹಿಳೆಯೊಬ್ಬರು ಅದನ್ನು ಬಿಸಾಡುವಂತೆ ಹೇಳಿ ಹೊರಟು ಹೋಗಿದ್ದರು. ಆದರೆ, ಅವರ ಅದೃಷ್ಟ ಹೇಗಿತ್ತೆಂದರೆ ಮತ್ತೆ ಆ ಬಹುಮಾನ ಬಂದಿರುವ ಟಿಕೆಟ್ ಅವರ ಕೈಸೇರಿದೆ. ಭಾರತೀಯ ಮೂಲದ ಕುಟುಂಬವು ತಮ್ಮ ಅಂಗಡಿಯ ಬಹುಕಾಲದ ಗ್ರಾಹಕಿಯಾಗಿದ್ದ ಆ ಮಹಿಳೆಗೆ ಟಿಕೆಟ್ ಹಿಂದಿರುಗಿಸುವ ಮೂಲಕ ಮೆಚ್ಚುಗೆಗೆ ಪಾತ್ರವಾಗಿದೆ.

ಆಗಿದ್ದಿಷ್ಟು..
ಲೀ ರೋಸ್ ಫೀಗಾ ಎಂಬ ಗ್ರಾಹಕಿ ಮಾರ್ಚ್‌ನಲ್ಲಿ ಮೆಸಾಚುಸೆಟ್ಸ್‌ನ ಸೌತ್‌ವಿಕ್‌ನಲ್ಲಿರುವ ಭಾರತೀಯ ಮೂಲದ ಕುಟುಂಬ ನಡೆಸುತ್ತಿರುವ ಲಕಿ ಸ್ಟಾಪ್ ಎಂಬ ಅಂಗಡಿಯಲ್ಲಿ ಡೈಮಂಡ್ ಮಿಲಿಯನ್ ಸ್ಕ್ರಾಚ್-ಆಫ್ ಟಿಕೆಟ್ ಖರೀದಿಸಿದ್ದರು,

ಆದರೆ, ಟಿಕೆಟ್ ಅನ್ನು ಸಂಪೂರ್ಣವಾಗಿ ಸ್ರ್ಯಾಚ್ ಮಾಡದೆ ಬಿಸಾಡಲಾಗಿತ್ತು. ಕಸದ ಬುಟ್ಟಿಯಲ್ಲಿದ್ದ ಪೂರ್ಣಗೊಳ್ಳದ 30 ಡಾಲರ್ ಬೆಲೆಯ ಟಿಕೆಟ್ ಅನ್ನು ಅಂಗಡಿಯ ಮಾಲೀಕರ ಮಗ ಅಭಿ ಶಾ ಅವರು ಗಮನಿಸಿದ್ದಾರೆ. ಈ ಬಗ್ಗೆ ತಾಯಿ ಅರುಣಾ ಶಾ ಅವರನ್ನು ವಿಚಾರಿಸಿದಾಗ ಆ ಟಿಕೆಟ್ ಅನ್ನು ರೆಗ್ಯುಲರ್ ಕಸ್ಟಮರ್ ಒಬ್ಬರಿಗೆ ಮಾರಿದ್ದಾಗಿ ತಿಳಿಸಿದರು. ಬಳಿಕ, ಟಿಕೆಟ್ ಅನ್ನು ಸ್ಕ್ರ್ಯಾಚ್ ಮಾಡಿದಾಗ ಅದಕ್ಕೆ 1 ಮಿಲಿಯನ್ ಡಾಲರ್(₹ 7.2 ಕೋಟಿ) ಬಹುಮಾನ ಬಂದಿರುವುದು ತಿಳಿಯಿತು ಎಂದು ಅಭಿ ಸ್ಥಳೀಯ ಚಾನಲ್‌ವೊಂದರ ಜೊತೆ ಮಾತನಾಡುತ್ತಾ ಹೇಳಿದ್ದಾರೆ.

ನಾನು ರಾತ್ರೋರಾತ್ರಿ ಮಿಲಿಯನೇರ್ ಆಗಿದ್ದೆ. ಒಂದು ಕ್ಷಣ ಆ ಹಣದ ಮೂಲಕ ಟೆಸ್ಲಾ ಕಾರು ಖರೀದಿಸುವ ಬಯಕೆಯಾಗಿತ್ತು. ಆದರೆ, ಬಳಿಕ ಅದನ್ನು ಹಿಂದಿರುಗಿಸಲು ನಿರ್ಧರಿಸಿದೆ ಎಂದು ಅಭಿ ಹೇಳಿದ್ದಾರೆ.

‘ನನ್ನ ಕೈಯಲ್ಲಿ 1 ಮಿಲಿಯನ್ ಡಾಲರ್ ಇತ್ತು. ಮತ್ತೊಂದೆಡೆ ಏನಾದರೂ ಒಳ್ಳೆಯದನ್ನು ಮಾಡಬೇಕೆನಿಸಿತು’ ಎಂದು ಅಭಿ ಹೇಳಿದ್ದಾರೆ.

1 ಮಿಲಿಯನ್ ಡಾಲರ್ ಬಹುಮಾನ ಗೆದ್ದ ಟಿಕೆಟ್ ಹಿಂದಿರುಗಿಸುವ ನಿರ್ಣಯ ಸುಲಭವಲ್ಲ ಎಂದು ಬಳಿಕ ನನ್ನ ಕುಟುಂಬ ಅಭಿಪ್ರಾಯಪಟ್ಟಿತು ಎಂದು ಅಭಿ ಹೇಳಿದ್ದಾರೆ.

‘ನಮ್ಮ ಬಳಿ ಆ ಟಿಕೆಟ್ ಇದ್ದಾಗ 2 ರಾತ್ರಿ ನಿದ್ದೆಯೇ ಬರಲಿಲ್ಲ. ಅಭಿ, ಭಾರತದಲ್ಲಿರುವ ತನ್ನ ಅಜ್ಜಿ ತಾತನಿಗೆ ಕರೆ ಮಾಡಿ ಸಲಹೆ ಕೇಳಿದನು. ಟಿಕೆಟ್ ಹಿಂದಿರುಗಿಸು. ಆ ಹಣ ನಮಗೆ ಬೇಡ ಎಂದು ಅವರು ಸಲಹೆ ನೀಡಿದರು’ ಎಂದು ಲಕ್ಕಿ ಸ್ಟಾಪ್ ಅಂಗಡಿ ಮಾಲೀಕ ಮೌನೀಶ್ ಶಾ ಹೇಳಿದ್ದಾರೆ.

ಬಳಿಕ, ಮೌನೀಶ್ ಕುಟುಂಬವು ಆ ಗ್ರಾಹಕಿ ಅಂಗಡಿಗೆ ಬರುವವರೆಗೂ ಕಾಯಲಿಲ್ಲ. ಬದಲಾಗಿ, ಆಕೆ ಕೆಲಸ ಮಾಡುತ್ತಿದ್ದ ಜಾಗಕ್ಕೇ ತೆರಳಿ ಟಿಕೆಟ್ ಹಿಂದಿರುಗಿಸಿದ್ದಾರೆ.

‘ನಾನು ಟಿಕೆಟ್ ಖರೀದಿ ವೇಳೆ ಊಟದ ಬ್ರೇಕ್ ಆಗಿದ್ದರಿಂದ ಆತುರದಲ್ಲಿದ್ದೆ. ತರಾತುರಿಯಲ್ಲಿ ಟಿಕೆಟ್ ಅನ್ನು ಸರಿಯಾಗಿ ಸ್ಕ್ರ್ಯಾಚ್ ಮಾಡದೆ ಹಾಗೆ ನೋಡಿ ಬಹುಮಾನ ಬಂದಿಲ್ಲವೆಂದುಕೊಂಡು ಅದನ್ನು ಬಿಸಾಡುವಂತೆ ತಿಳಿಸಿ ಹೊರಟಿದ್ದೆ. ಆದರೆ, ಅಂಗಡಿ ಮಾಲೀಕರು ನನ್ನ ಕೆಲಸದ ಜಾಗಕ್ಕೇ ಬಂದು ಟಿಕೆಟ್ ನೀಡಿದ್ದಾರೆ. ಕೆಲಸದಲ್ಲಿ ನಿರತಳಾಗಿದ್ದೇನೆ ಎಂದು ಹೇಳಿದರೂ ಕೇಳದೆ ನೀವು ಹೊರಗೆ ಬರಲೇಬೇಕು ಎಂದು ಹೇಳಿದರು. ಬಳಿಕ, ಅಲ್ಲಿಗೆ ಹೋದಾಗ ನನಗೆ ನಂಬುವುದಕ್ಕೇ ಸಾಧ್ಯವಾಗಲಿಲ್ಲ. ಅಷ್ಟು ದೊಡ್ಡ ಮೊತ್ತದ ಬಹುಮಾನದ ಟಿಕೆಟ್ ಹಿಂದಿರುಗಿಸಿದ ಅಂಗಡಿ ಮಾಲೀಕರ ಕುಟುಂಬ ಸದಸ್ಯರನ್ನು ತಬ್ಬಿ ಕಣ್ಣೀರು ಹಾಕಿದೆ’ ಎಂದು ಲೀ ರೋಸ್ ಫೀಗಾ ಹೇಳಿದರು.

'ಅವರು ತುಂಬಾ ಒಳ್ಳೆಯ ಜನರು. ಅವರೊಂದಿಗೆ ಮಾತನಾಡುವ ಮೂಲಕ ನೀವು ಹೇಳಬಹುದು’ ಎಂದು ಮೆಸಾಚುಸೆಟ್ಸ್‌ನ ಟಿವಿಗೆ ಗ್ರಾಹಕರೊಬ್ಬರು ಹೇಳಿಕೆ ನೀಡಿದ್ದಾರೆ

ಪ್ರಾಮಾಣಿಕತೆ ಮೆರೆದ ಭಾರತೀಯ ಕುಟುಂಬಕ್ಕೆ ಈಗ ದೇಶದ ವಿವಿಧ ಕಡೆಯಿಂದ ಶುಭಾಶಯ ಮತ್ತು ಸಂದರ್ಶನದ ಕರೆಗಳು ಬರುತ್ತಿವೆ.

‘ನಾನು ಆ ಮಿಲಿಯನ್ ಡಾಲರ್ ಹಣವನ್ನು ಇಟ್ಟುಕೊಂಡಿದ್ದರೆ, ಇಷ್ಟು ಪ್ರಸಿದ್ಧನಾಗುತ್ತಿರಲಿಲ್ಲ. ಆದ್ದರಿಂದ, ನಾನು ಅದನ್ನು ಹಿಂದಿರುಗಿಸಿದ್ದಕ್ಕೆ ಖುಷಿ ಇದೆ, ’ ಎಂದು ಮಾಲೀಕರ ಮಗ ಅಭಿ ಹೇಳಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು