ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶುದ್ಧ ಇಂಧನ ಕ್ಷೇತ್ರದ ಹೂಡಿಕೆ-ಜಿ–7 ಸದಸ್ಯ ರಾಷ್ಟ್ರಗಳಿಗೆ ಪ್ರಧಾನಿ ಮೋದಿ ಆಹ್ವಾನ

ತಾಪಮಾನ ಬದಲಾವಣೆ
Last Updated 27 ಜೂನ್ 2022, 21:16 IST
ಅಕ್ಷರ ಗಾತ್ರ

ಎಲ್ಮೌ, ಜರ್ಮನಿ (ಪಿಟಿಐ): ‘ತಾಪಮಾನ ಬದಲಾವಣೆ ಕುರಿತಂತೆ ಭಾರತದ ಬದ್ಧತೆಯು ದೇಶದ ಸಾಮರ್ಥ್ಯದ ದ್ಯೋತಕವೂ ಆಗಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಇಲ್ಲಿ ಪ್ರತಿಪಾದಿಸಿದರು.

ತಾಪಮಾನ ಬದಲಾವಣೆ ಸವಾಲು ಎದುರಿಸುವ ಭಾರತದ ಯತ್ನವನ್ನು ಜಿ–7 ಶೃಂಗದ ಸದಸ್ಯ ರಾಷ್ಟ್ರಗಳು ಬೆಂಬಲಿಸಲಿವೆ ಮತ್ತು ಶುದ್ಧ ಇಂಧನ ಕುರಿತ ತಂತ್ರಜ್ಞಾನಗಳಿಗೆ ವಿಶ್ವದ ಮಾರುಕಟ್ಟೆಯ ಅವಕಾಶಗಳ ಬಳಕೆಗೆ ಆಹ್ವಾನ ನೀಡಲಿವೆ ಎಂದು
ಆಶಿಸಿದರು.

‘ಉತ್ತಮ ಭವಿಷ್ಯಕ್ಕಾಗಿ ಹೂಡಿಕೆ: ತಾಪಮಾನ, ಇಂಧನ, ಆರೋಗ್ಯ’ ವಿಷಯ ಕುರಿತ ಗೋಷ್ಠಿಯಲ್ಲಿ ಅವರು, ನವೀಕರಿಸಬಹುದಾದ ಮೂಲದಿಂದ ಶೇ 40ರಷ್ಟು ಇಂಧನ ಬಳಸುವ ಗುರಿ ಸಾಧನೆಯಲ್ಲಿ ಭಾರತದ ಯತ್ನವನ್ನು ಪ್ರಮುಖವಾಗಿ ಪಟ್ಟಿ ಮಾಡಿದರು.

ಪೆಟ್ರೋಲ್‌ನಲ್ಲಿ ಶೇ 10ರಷ್ಟು ಎಥೆನಾಲ್ ಮಿಶ್ರಣ ಮಾಡುವ ಗುರಿಯನ್ನು ನಿಗದಿತ ಗಡುವಿಗೆ 5 ತಿಂಗಳು ಮೊದಲೇ ಸಾಧಿಸಿದ್ದೇವೆ. ಸಂಪೂರ್ಣ ಸೋಲಾರ್ ವಿದ್ಯುತ್‌ ಅವಲಂಬಿಸಿದ ವಿಶ್ವದ ಮೊದಲ ವಿಮಾನ ನಿಲ್ದಾಣ ಭಾರತದಲ್ಲಿದೆ. ಶೂನ್ಯ ಇಂಗಾಲ ಹೊರಸೂಸುವಿಕೆ ಗುರಿಯನ್ನು ಭಾರತದ ಬೃಹತ್‌ ರೈಲ್ವೆ ಇಲಾಖೆಯು ಈ ದಶಕದಲ್ಲಿಯೇ ಸಾಧಿಸಲಿದೆ ಎಂದು ಮೋದಿ ಹೇಳಿದರು.

ಭಾರತದಂತಹ ಬೃಹತ್‌ ರಾಷ್ಟ್ರ ಇಂಥ ಗುರಿ ಸಾಧನೆಯನ್ನು ತೋರಿದಾಗ, ಇತರೆ ಅಭಿವೃದ್ಧಿ ದೇಶಗಳು ಅದರಿಂದ ಪ್ರೇರೇಪಣೆ ಪಡೆಯಲಿವೆ. ಜಿ–7ನ ಶ್ರೀಮಂತ ದೇಶಗಳು ಭಾರತದ ಈ ಯತ್ನವನ್ನು ಬೆಂಬಲಿಸಲಿವೆ ಎಂದು ಆಶಿಸು
ತ್ತೇನೆ. ಶುದ್ಧ ಇಂಧನಕ್ಕೆ ಸಂಬಂಧಿಸಿದ ತಂತ್ರಜ್ಞಾನಗಳಿಗೆ ಬೃಹತ್ ಮಾರುಕಟ್ಟೆ ಭಾರತದಲ್ಲಿ ರೂಪುಗೊಳ್ಳುತ್ತಿದೆ ಎಂದು ಹೇಳಿದರು.

ಪ್ರತಿ ಹೊಸ ತಂತ್ರಜ್ಞಾನ ಇಡೀ ವಿಶ್ವದ ಎಲ್ಲ ರಾಷ್ಟ್ರಗಳ ಕೈಗೆಟುಕುವಂತೆ ಭಾರತವು ರೂಪಿಸಲಿದೆ. ಜಿ–7 ಶೃಂಗದ ಸದಸ್ಯ ರಾಷ್ಟ್ರಗಳು ಈ ವಲಯದ ಸಂಶೋಧನೆ, ಅನ್ವೇಷಣೆ, ಉತ್ಪಾದನಾ ಕ್ಷೇತ್ರದಲ್ಲಿ ಹೂಡಿಕೆ ಮಾಡಬೇಕು ಎಂದು
ಆಹ್ವಾನಿಸಿದರು.

ಮೋದಿ –ಬೈಡನ್‌ ಭೇಟಿಿ: ಜಿ–7 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಇಲ್ಲಿಗೆ ಆಗಮಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಮತ್ತು ಸದಸ್ಯ ರಾಷ್ಟ್ರಗಳ ವಿವಿಧ ಮುಖಂಡರ ಜೊತೆಗೆ ಚರ್ಚಿಸಿದ್ದರು.

ಎಲ್ಮೌ, ಜರ್ಮನಿ (ಪಿಟಿಐ): ಭಾರತ ಸೇರಿದಂತೆ ಅಭಿವೃದ್ಧಿಶೀಲ ದೇಶಗಳಲ್ಲಿ ಆಮೂಲಾಗ್ರ ಬದಲಾವಣೆ ತರಬಹುದಾದ ಮೂಲಸೌಕರ್ಯ ಯೋಜನೆಗಳಿಗೆ₹ 47,052 ಲಕ್ಷ ಕೋಟಿ ಬಂಡವಾಳವನ್ನು 2027ರ ವೇಳೆಗೆ ಹೂಡಿಕೆ ಮಾಡುವ ಯೋಜನೆಯನ್ನು ಅಮೆರಿಕ ಒಳಗೊಂಡಂತೆ ಜಿ–7 ಸದಸ್ಯ ರಾಷ್ಟ್ರಗಳು ಪ್ರಕಟಿಸಿವೆ.

ಚೀನಾದ ಸಂಪರ್ಕ ಮೂಲಸೌಕರ್ಯವನ್ನು ಪರಿಣಾಮಕಾರಿಯಾಗಿ ಎದುರಿಸಲು ಅದರ ಗಡಿಯುದ್ಧಕ್ಕೂ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸುವುದು ಈ ಯೋಜನೆಯ ಗುರಿ.

ಜಾಗತಿಕ ಮೂಲಸೌಕರ್ಯ ಮತ್ತು ಹೂಡಿಕೆ ಸಹಭಾಗಿತ್ವ ಯೋಜನೆಯನ್ನು ಭಾನುವಾರ ಇಲ್ಲಿ ನಡೆಯುತ್ತಿರುವ ಜಿ–7 ಶೃಂಗಸಭೆಯಲ್ಲಿ ಪ್ರಕಟಿಸಲಾಯಿತು. ಯೋಜನೆಯನ್ನು ಪ್ರಕಟಿಸಿದ ಅಮೆರಿಕದ ಅಧ್ಯಕ್ಷ ಜೋ ಬೈಡನ್‌ ಅವರು ‘ಈ ಯೋಜನೆಯ ಫಲವು ಎಲ್ಲರಿಗೂ ಸಿಗಲಿದೆ’ ಎಂದು ಬೈಡನ್ ಹೇಳಿದರು.

ಒಟ್ಟುಗೂಡಿ ನಾವೆಲ್ಲರೂ 2027ರವರೆಗೆ ಹೂಡಿಕೆ ಮಾಡಲು ಇಷ್ಟು ಮೊತ್ತವನ್ನು ಕ್ರೋಡೀಕರಿಸಲಿದ್ದೇವೆ. ಇದರಿಂದ ಒಟ್ಟಾಗಿ ಜೀವನಶೈಲಿ ಗುಣಮಟ್ಟ ಉತ್ತಮ ವಾಗಲಿದೆ ಎಂದರು. ‘ಇದು, ದತ್ತಿ, ದೇಣಿಗೆಯಲ್ಲ ಎಂದು ನಾನು ಸ್ಪಷ್ಟವಾಗಿ ಹೇಳುತ್ತಿದ್ದೇನೆ. ಇದೊಂದು ಹೂಡಿಕೆ. ಅಮೆರಿಕದ ಜನರು ಸೇರಿದಂತೆ ಎಲ್ಲರಿಗೂ ಇದರ ಅನುಕೂಲ ಆಗಲಿದ್ದು, ಆರ್ಥಿಕತೆಯನ್ನು ಉತ್ತಮಪಡಿಸಲಿದೆ’ ಎಂದರು. ಮೂಲಸೌಕರ್ಯ ಅಭಿವೃದ್ಧಿಗೆ ಸಂಬಂಧಿಸಿದಂತೆ ಚೀನಾದ ಬಿಆರ್‌ಐ ಯೋಜನೆ ಹಲವು ದೇಶಗಳನ್ನು ಸಾಲದ ಸುಳಿಗೆ ಸಿಲುಕಿಸಿದೆ ಎಂಬ ಟೀಕೆಗೆ ಗುರಿಯಾಗಿದೆ. ಬಿಆರ್‌ಐಗೆ ಪ್ರತಿಯಾಗಿ ಜಿ–7 ರಾಷ್ಟ್ರಗಳು ಹೊಸ ಯೋಜನೆ ಪ್ರಕಟಿಸಿವೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT