ಭಾನುವಾರ, ಅಕ್ಟೋಬರ್ 24, 2021
23 °C
ಮೋದಿ ಜತೆಗಿನ ಮಾತುಕತೆಯಲ್ಲಿ ಪ್ರತಿಪಾದನೆ

ಭಾರತ- ಅಮೆರಿಕ ನಂಟು ಬಲವಾಗಲಿ: ಜೋ ಬೈಡನ್

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ವಾಷಿಂಗ್ಟನ್: ‘ಭಾರತದ ಜತೆಗೆ ನಮ್ಮ ದ್ವಿಪಕ್ಷೀಯ ಸಂಬಂಧವನ್ನು ಬಲಪಡಿಸಲು ಎದುರು ನೋಡುತ್ತಿದ್ದೇವೆ’ ಎಂದು ಅಮೆರಿಕದ ಅಧ್ಯಕ್ಷ ಜೋ ಬೈಡನ್ ಅವರು ಹೇಳಿದ್ದಾರೆ.

ಕ್ವಾಡ್ ಸಭೆಗೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಮತ್ತು ಬೈಡನ್‌ ಮಧ್ಯೆ ನಡೆದ ಮಾತುಕತೆಯ ವೇಳೆ ಅವರು ಈ ಮಾತು ಹೇಳಿದ್ದಾರೆ. 

‘ಎರಡೂ ದೇಶಗಳು ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಗೌರವಿಸುತ್ತವೆ. ಎರಡೂ ದೇಶಗಳ ಸ್ನೇಹ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುವ ಬೀಜವನ್ನು ಬಿತ್ತಲಾಗಿದೆ. ಈ ಶತಮಾನದ ಮೂರನೇ ದಶಕದ ಆರಂಭದಲ್ಲಿ ನಡೆಯುತ್ತಿರುವ ಈ ದ್ವಿಪಕ್ಷೀಯ ಸಭೆಯು ಮಹತ್ವದ್ದಾಗಿದೆ’ ಎಂದು ಮೋದಿ ಹೇಳಿದ್ದಾರೆ.

ಕ್ವಾಡ್‌ ಸಭೆ: ಕ್ವಾಡ್‌ ಒಕ್ಕೂಟದ ದೇಶಗಳ ನಡುವೆ ನೂತನ ವಾಣಿಜ್ಯ ಸಹಕಾರ ಮತ್ತು 5ಜಿ ತಂತ್ರಜ್ಞಾನ ಅಳವಡಿಕೆ ಕುರಿತು ಕ್ವಾಡ್‌ ಒಕ್ಕೂಟದ ನಾಯಕರು ಘೋಷಿಸುವ ಸಾಧ್ಯತೆ ಇದೆ.

ಕ್ವಾಡ್ ಸಭೆಯ ನಂತರ ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರು ಕ್ವಾಡ್ ಒಕ್ಕೂಟದ ಉಳಿದ ಮೂರೂ ದೇಶಗಳ ಪ್ರಧಾನಿಗಳ ಜತೆ ಸಭೆ ನಡೆಸಲಿದ್ದಾರೆ.

ಭಾರತ-ಚೀನಾ ವಾಕ್ಸಮರ: ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕದ ಅಧ್ಯಕ್ಷ ಜೋ ಬೈಡನ್ ಜತೆ ಸಭೆ ನಡೆಸುವ ಕೆಲವೇ ಗಂಟೆಗಳ ಮೊದಲು ಚೀನಾವು ಗಾಲ್ವನ್ ಕಣಿವೆ ಸಂಘರ್ಷದ ಬಗ್ಗೆ ಕಿಡಿಕಾರಿದೆ. ಭಾರತವು ಅದಕ್ಕೆ ತಕ್ಕ ಪ್ರತ್ಯುತ್ತರ ನೀಡಿದೆ.

‘ಗಡಿಗೆ ಸಂಬಂಧಿಸಿದಂತೆ ಭಾರತವು ನಮ್ಮೊಂದಿಗೆ ಹಲವು ಒಪ್ಪಂದಗಳನ್ನು ಮಾಡಿಕೊಂಡಿದೆ. ಆದರೆ ಗಾಲ್ವನ್‌ನಲ್ಲಿ ಆ ಒಪ್ಪಂದಗಳನ್ನು ಉಲ್ಲಂಘಿಸಿ, ನಮ್ಮ ನೆಲವನ್ನು ಅತಿಕ್ರಮಿಸಿದ್ದರಿಂದಲೇ ಸಂಘರ್ಷ ನಡೆಯಿತು. ಅಲ್ಲಿ ನಡೆದ ಸೈನಿಕರ ಸಾವುಗಳಿಗೆ ಭಾರತವೇ ಹೊಣೆ’ ಎಂದು ಚೀನಾ ಆರೋಪ ಮಾಡಿದೆ.

‘ಇಂತಹ ಹೇಳಿಕೆಗಳನ್ನು ನಾವು ಖಡಾಖಂಡಿತವಾಗಿ ತಿರಸ್ಕರಿಸುತ್ತೇವೆ. ಪೂರ್ವ ಲಡಾಖ್‌ನಲ್ಲಿ ಕಳೆದ ವರ್ಷ ನಡೆದ ಬೆಳವಣಿಗೆಗಳ ಬಗ್ಗೆ ನಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ. ಚೀನಾ ಏಕಪಕ್ಷೀಯವಾಗಿ ಗಡಿಯನ್ನು ಬದಲಿಸಿದ್ದರಿಂದ ಮತ್ತು ನಮ್ಮ ನೆಲವನ್ನು ಅತಿಕ್ರಮಿಸಿ ಪ್ರಚೋದಿಸಿದ ಕಾರಣ ಸಂಘರ್ಷ ನಡೆಯಿತು’ ಎಂದು ವಿದೇಶಾಂಗ ಸಚಿವಾಲಯವು ತಿರುಗೇಟು ನೀಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು