ಗುರುವಾರ , ಸೆಪ್ಟೆಂಬರ್ 23, 2021
21 °C

ಜನರು ವಿದೇಶಗಳಿಗೆ ಹೋಗಲು ಸೌಲಭ್ಯ ಕಲ್ಪಿಸಿ: ಅಫ್ಗಾನ್ ನಾಯಕರಿಗೆ ವಿಶ್ವಸಮುದಾಯ ಕರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾಬೂಲ್:‌ ಅಫ್ಗಾನಿಸ್ತಾನದಲ್ಲಿರುವ ರಾಜಕೀಯ ಪಕ್ಷಗಳು ವಿದೇಶಿಯರು ಮತ್ತು ದೇಶ ತೊರೆಯಲು ಬಯಸುವ ಅಫ್ಗಾನ್‌ ಪ್ರಜೆಗಳು ಸುರಕ್ಷಿತ, ಕ್ರಮಬದ್ಧ ಮತ್ತು ಗೌರವಯುತವಾಗಿ ಪ್ರಯಾಣಿಸಲು ಸೌಲಭ್ಯ ಕಲ್ಪಿಸಬೇಕು ಎಂದು ವಿಶ್ವ ಸಮುದಾಯ ಆಗ್ರಹಿಸಿದೆ.

ಈ ಸಂಬಂಧ ಅಂತರರಾಷ್ಟ್ರೀಯ ಸಮುದಾಯ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ, ವಿದೇಶಗಳಿಗೆ ತೆರಳಲು ಬಯಸುವ ಅಫ್ಗಾನಿಸ್ತಾನ ಮತ್ತು ವಿದೇಶಗಳ ನಾಗರಿಕರಿಗೆ ಅವಕಾಶ ಕಲ್ಪಿಸಬೇಕು. ರಸ್ತೆ, ವಿಮಾನ ನಿಲ್ದಾಣಗಳು ಮತ್ತು ಗಡಿ ದಾಟುವಿಕೆಯು ಮುಕ್ತ ಮತ್ತು ಶಾಂತಿಯುತವಾಗಿರಬೇಕು ಎಂದು ಕೋರಲಾಗಿದೆ.

ʼಅಫ್ಗಾನ್‌ ಜನರು ಸುರಕ್ಷಿತ, ಭದ್ರತೆ ಮತ್ತು ಘನತೆಯಿಂದ ಬದುಕಲು ಅರ್ಹರು. ಅಂತರರಾಷ್ಟ್ರೀಯ‌ ಸಮುದಾಯವಾಗಿ ನಾವು ಎಲ್ಲ ರೀತಿಯ ನೆರವು ನೀಡಲು ಸಿದ್ಧರಿದ್ದೇವೆʼ ಎಂದೂ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಅಲ್ಬೇನಿಯಾ, ಆಸ್ಟ್ರೇಲಿಯಾ, ಆಸ್ಟ್ರಿಯಾ, ಬಹಮಾಸ್‌, ಬೆಲ್ಜಿಯಂ, ಬುರ್ಕಿನಾ ಫಾಸೊ, ಕೆನಡಾ, ಚಿಲಿ, ಕೊಲಂಬಿಯಾ, ಕೊಸ್ಟರಿಕಾ, ಕ್ರೊವೇಷಿಯಾ, ಚೆಕ್‌ ಗಣರಾಜ್ಯ, ಡೆನ್ಮಾರ್ಕ್‌, ಡೊಮೆನಿಕಾ, ಫಿಜಿ, ಫಿನ್‌ಲ್ಯಾಂಡ್‌, ಫ್ರಾನ್ಸ್‌, ಜಾರ್ಜಿಯಾ, ಜರ್ಮನಿ, ಘಾನಾ, ಗ್ರೀಸ್‌, ಹೈಟಿ ಸೇರಿದಂತೆ ಇನ್ನೂ ಹಲವು ದೇಶಗಳು ಒಟ್ಟಾಗಿ ಈ ಹೇಳಿಕೆ ಬಿಡುಗಡೆ ಮಾಡಿವೆ.

ತಾಲಿಬಾನ್‌ ಸಂಘಟನೆ ಇದೀಗ ಅಫ್ಗಾನಿಸ್ತಾನವನ್ನು ವಶಕ್ಕೆ ತೆಗೆದುಕೊಂಡಿದೆ. ಹೀಗಾಗಿ ಜನರು ದೇಶ ತೊರೆಯಲು ಮುಂದಾಗಿದ್ದಾರೆ.

ಕಾಬೂಲ್‌ನಿಂದ ಅಮೆರಿಕಕ್ಕೆ ತೆರಳುತ್ತಿದ್ದ ಬೋಯಿಂಗ್‌ ಸಿ-17 ಗ್ಲೋಬ್‌ಮಾಸ್ಟರ್‌ ವಿಮಾನದ ಚಕ್ರಗಳನ್ನು ಹಿಡಿದು ಕುಳಿತಿದ್ದ ಮೂವರು, ವಿಮಾನ ಹಾರುತ್ತಿದ್ದಾಗ ಕೆಳಗೆ ಬಿದ್ದು ಸಾವಿಗೀಡಾಗಿದ್ದಾರೆ. ವಿಮಾನದಲ್ಲಿ ಸ್ಥಳಾವಾಕಾಶ ಇಲ್ಲದ್ದರಿಂದ ಅವರು ಚಕ್ರದ ಬಳಿ ಕುಳಿತಿದ್ದರು ಎಂದು ವರದಿಯಾಗಿದೆ.

ಅದಕ್ಕೂ ಮೊದಲು ವಿಮಾನ ನಿಲ್ದಾಣದಲ್ಲಿ ಉಗ್ರರು ನಡೆಸಿದ ಗುಂಡಿನ ದಾಳಿ ವೇಳೆ ಕನಿಷ್ಠ ಮೂವರು ಪ್ರಯಾಣಿಕರು ಮೃತಪಟ್ಟಿದ್ದರು.

ತಾಲಿಬಾನ್ ಉಗ್ರರು ಕಾಬೂಲ್‌ ಪ್ರವೇಶಿಸುತ್ತಿದ್ದಂತೆಯೇ ಅಫ್ಗಾನ್‌ ಅಧ್ಯಕ್ಷ‌ ಅಶ್ರಫ್‌ ಘನಿ ಭಾನುವಾರ ದೇಶ ತೊರೆದಿದ್ದರು.

ಇವನ್ನೂ ಓದಿ


ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು