ಸೋಮವಾರ, ಆಗಸ್ಟ್ 15, 2022
20 °C

ಇರಾನ್‌ನ ಪರಮಾಣು ವಿಜ್ಞಾನಿ ಹತ್ಯೆಗೆ ಉಪಗ್ರಹ ನಿಯಂತ್ರಿತ ಮೆಷಿನ್‌ ಗನ್‌ ಬಳಕೆ

ರಾಯಿಟರ್ಸ್‌ Updated:

ಅಕ್ಷರ ಗಾತ್ರ : | |

ಟೆಹರಾನ್‌: ಇರಾನ್‌ನ ಉನ್ನತ ಮಟ್ಟದ ಪರಮಾಣು ವಿಜ್ಞಾನಿ ಮೊಹ್ಸೆನ್‌ ಫಖ್ರಿಜಾದೆ ಅವರ ಹತ್ಯೆಯನ್ನು ಕೃತಕ ಬುದ್ಧಿಮತ್ತೆ ಮತ್ತು 'ಉಪಗ್ರಹ-ನಿಯಂತ್ರಿತ ಸ್ಮಾರ್ಟ್ ವ್ಯವಸ್ಥೆ' ಇರುವ ಮೆಷಿನ್ ಗನ್ ಬಳಸಿ ನಡೆಸಲಾಗಿದೆ ಎಂದು ಹಿರಿಯ ಕಮಾಂಡರ್‌ವೊಬ್ಬರ ಮಾಹಿತಿ ಉಲ್ಲೇಖಿಸಿ ಸುದ್ದಿ ಸಂಸ್ಥೆ ತಸ್ನಿಮ್ ವರದಿ ಮಾಡಿದೆ.

'ಯಾವುದೇ ಭಯೋತ್ಪಾದಕರು ಘಟನಾ ಸ್ಥಳದಲ್ಲಿ ಇರಲಿಲ್ಲ. ಸುಧಾರಿತ ಕ್ಯಾಮೆರಾ ಬಳಸಿ, ಅವರತ್ತ ಗನ್‌ ಕೇಂದ್ರೀಕರಿಸಿ, ಜೂಮ್ ಮಾಡಿ ಹುತಾತ್ಮ ಫಖ್ರಿಜಾದೆ ಅವರ ಮೇಲೆ ದಾಳಿ ಮಾಡಲಾಗಿದೆ,' ಎಂದು ಕಮಾಂಡರ್ ಅಲಿ ಫಾದವಿ ಅವರ ಹೇಳಿಕೆ ಉಲ್ಲೇಖಿಸಿ ವರದಿ ಮಾಡಲಾಗಿದೆ.

'ಮೆಷಿನ್ ಗನ್ ಅನ್ನು ಟ್ರಕ್‌ನಲ್ಲಿ ಇರಿಸಲಾಗಿತ್ತು. ಅದನ್ನು ಉಪಗ್ರಹದಿಂದ ನಿಯಂತ್ರಿಸಲಾಗುತ್ತಿತ್ತು,' ಎಂದು ಅವರು ಹೇಳಿದ್ದಾರೆ.

ಹಂತಕರ ಬಗ್ಗೆ ಸುಳಿವು ಸಿಕ್ಕಿರುವುದಾಗಿ ಇರಾನ್‌ ಅಧಿಕಾರಿಗಳು ತಿಳಿಸಿರುವ ಬೆನ್ನಲ್ಲೇ ಕಮಾಂಡರ್‌ ಫಾದವಿ ಅವರೂ ಈ ಹೇಳಿಕೆ ನೀಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಈ ವರೆಗೆ ಯಾರನ್ನೂ ಬಂಧಿಸಿಲ್ಲ.

ಫಖ್ರಿಜಾದೆ ಕೊಲೆ ನಂತರ ಗನ್‌ ಇದ್ದ ಟ್ರಕ್‌ ಸ್ಫೋಟಗೊಂಡಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದರು.

'ಯಾವುದೇ ವ್ಯಕ್ತಿಯ ನೆರವು ಪಡೆಯದೇ ಎಲೆಕ್ಟ್ರಾನಿಕ್‌ ಸಾಧನ ಬಳಸಿ ಫಖ್ರಿಜಾದೆ ಅವರನ್ನು ಹತ್ಯೆ ಮಾಡಲಾಗಿದೆ,' ಎಂದು ಇರಾನ್‌ನ ರಾಷ್ಟ್ರೀಯ ಭದ್ರತಾ ಆಯೋಗದ ಕಾರ್ಯದರ್ಶಿ ಅಲಿ ಶಮ್‌ಖಾನಿ ಈ ಮೊದಲು ಅಭಿಪ್ರಾಯಪಟ್ಟಿದ್ದರು.

ಪರಮಾಣು ಶಸ್ತ್ರಾಸ್ತ್ರಗಳ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸುವ ಇರಾನಿನ ರಹಸ್ಯ ಕಾರ್ಯಕ್ರಮದ ಮಾಸ್ಟರ್ ಮೈಂಡ್ ಎಂದು ಪಾಶ್ಚಿಮಾತ್ಯ ಗುಪ್ತಚರ ಏಜೆನ್ಸಿಗಳಿಂದ ಕರೆಯಲಾಗುವ ಮೊಹ್ಸೆನ್ ಫಖ್ರಿಜಾದೆ ಹತ್ಯೆ ಸಂಬಂಧ ಇರಾನ್‌ ಇಸ್ರೇಲ್‌ ಅನ್ನು ದೂರಿತ್ತು. ಆದರೆ, ಪರಮಾಣು ಹೊಂದುವ ಮಹತ್ವಾಕಾಂಕ್ಷೆಯನ್ನು ಹೊಂದಿಲ್ಲ ಎಂದು ಇರಾನ್‌ ಹೇಳುತ್ತಲೇ ಬಂದಿದೆ.

ಮೊಹ್ಸೆನ್‌ ಫಖ್ರಿಜಾದೆ ಅವರ ಹತ್ಯೆಯಲ್ಲಿನ ತನ್ನ ಕೈವಾಡವನ್ನು ಇಸ್ರೇಲ್ ಈ ವರೆಗೆ ಒಪ್ಪಿಲ್ಲಯೂ ಇಲ್ಲ, ನಿರಾಕರಿಸಿಯೂ ಇಲ್ಲ. ಶತ್ರು ರಾಷ್ಟ್ರ ಇರಾನ್‌ನ ಪರಮಾಣು ಕಾರ್ಯಕ್ರಮದ ರಹಸ್ಯ, ಗುಪ್ತಚರ ಮಾಹಿತಿ ಸಂಗ್ರಹ ಕಾರ್ಯಾಚರಣೆಗಳನ್ನು ಮುಂದುವರಿಸುವುದಾಗಿ ಅದು ಈ ಹಿಂದೆ ಹೇಳಿತ್ತು.

25 ಸೆಂಟಿಮೀಟರ್‌ ದೂರದಲ್ಲಿದ್ದ ಪತ್ನಿಗೆ ಸಣ್ಣ ಗಾಯವಿಲ್ಲ

ಉನ್ನತ ಮಟ್ಟದ ಪರಮಾಣು ವಿಜ್ಞಾನಿ ಫಖ್ರಿಜಾದೆ ಅವರ ಮೇಲೆ ದಾಳಿ ನಡೆದಾಗ ಅವರ ಪತ್ನಿ, ಅದೇ ಕಾರಿನಲ್ಲಿ ಕೇವಲ 25 ಸೆಂ.ಮೀ ದೂರದಲ್ಲಿ ಕುಳಿತಿದ್ದರು ಎನ್ನಲಾಗಿದೆ. ಘಟನೆಯಲ್ಲಿ 13 ಗುಂಡುಗಳು ಫಖ್ರಿಜಾದೆ ದೇಹ ಹೊಕ್ಕಿತ್ತಾದರೂ, ಪಕ್ಕದಲ್ಲೆ ಇದ್ದ ಅವರ ಪತ್ನಿಗೆ ಒಂದೇ ಒಂದು ಗುಂಡೂ ತಗುಲಿರಲಿಲ್ಲ. ಹೀಗಾಗಿ ಇದು ಅತ್ಯಂತ ವ್ಯವಸ್ಥಿತ, ತಂತ್ರಜ್ಞಾನ ಆಧಾರಿತ ದಾಳಿ ಎಂದು ಇರಾನ್‌ ಪ್ರತಿಪಾದಿಸುತ್ತಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು