ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಸ್ರೇಲ್‌ ಸರ್ಕಾರ ಮತ್ತೆ ಪತನ; 2 ವರ್ಷಗಳಲ್ಲಿ 4ನೇ ಬಾರಿ ಚುನಾವಣೆ

Last Updated 23 ಡಿಸೆಂಬರ್ 2020, 2:05 IST
ಅಕ್ಷರ ಗಾತ್ರ

ಜೆರುಸಲೆಮ್: ಇಸ್ರೇಲ್‌ ಸರ್ಕಾರ ಮಂಗಳವಾರ ಪತನಗೊಂಡಿದ್ದು, ಮತ್ತೊಮ್ಮೆ ದೇಶದಲ್ಲಿ ಅವಧಿಗೂ ಮುನ್ನ ಚುನಾವಣೆ ಎದುರಾಗಿದೆ. ಕಳೆದ ಎರಡು ವರ್ಷಗಳಲ್ಲಿ ನಾಲ್ಕನೇ ಬಾರಿಗೆ ಇಸ್ರೇಲ್‌ನಲ್ಲಿ ಚುನಾವಣೆ ನಡೆಯುತ್ತಿದೆ.

ಮಂಗಳವಾರ ಮಧ್ಯರಾತ್ರಿ ಇಸ್ರೇಲ್‌ ಸಂಸತ್ತು ತಾನಾಗಿಯೇ ವಿಸರ್ಜನೆಗೊಂಡಿದೆ. ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಏಳು ತಿಂಗಳ ಹಿಂದೆ ಪ್ರಮುಖ ಎದುರಾಳಿ ಬೆನ್ನಿ ಗಾಂಟ್ಜ್ ಅವರ ಪಕ್ಷದ ಸಹಕಾರದೊಂದಿಗೆ ಸರ್ಕಾರ ರಚಿಸಿದ್ದರು.

ನೆತನ್ಯಾಹು ಅವರ ಲಿಕುಡ್‌ ಪಾರ್ಟಿ ಮತ್ತು ಗಾಂಟ್ಜ್ ನೇತೃತ್ವದ ಬ್ಲೂ ಆ್ಯಂಡ್‌ ವೈಟ್‌ ಪಾರ್ಟಿ ಮೈತ್ರಿ ಸರ್ಕಾರವು ಉಭಯ ಪಕ್ಷಗಳ ಕಿತ್ತಾಟದಿಂದಾಗಿ ಕೊನೆಯಾಗಿದೆ. ಮುಂದಿನ ಮೂರು ತಿಂಗಳ ಒಳಗಾಗಿ ಚುನಾವಣೆ ನಡೆಯಬೇಕಿದ್ದು, ಮಾರ್ಚ್‌ 23ಕ್ಕೆ ಮತದಾನ ನಿಗದಿಯಾಗಿದೆ.

ಸಂಸತ್‌ ವಿಸರ್ಜನೆ ಮುಂದೂಡುವ ಪ್ರಯತ್ನದ ಭಾಗವಾಗಿ ನೆತನ್ಯಾಹು ಮಂಗಳವಾರ ಸಂಸತ್ತಿನಲ್ಲಿ ಮಾತನಾಡುತ್ತ, 'ಪ್ರಸ್ತುತ ಅನಗತ್ಯವಾಗಿರುವ ಚುನಾವಣೆಯನ್ನು ತಪ್ಪಿಸಲು ನಾವೆಲ್ಲರೂ ಒಗ್ಗಟ್ಟಾಗಿ ಮಾರ್ಗ ಕಂಡುಕೊಳ್ಳಬೇಕಿದೆ' ಎಂದಿದ್ದರು.

2020ರ ಬಜೆಟ್‌ ಅನುಮೋದನೆಗೆ ನೀಡಲಾಗಿದ್ದ ಕಾನೂನಾತ್ಮಕ ಗಡುವು ಮುಕ್ತಾಯವಾದ ಬೆನ್ನಲ್ಲೇ ಸಂಸತ್ ವಿಸರ್ಜಿಸಲ್ಪಟ್ಟಿದೆ. ಹಣಕಾಸು ಖಾತೆಯನ್ನು ನೆತನ್ಯಾಹು ಪಕ್ಷವೇ ನಿರ್ವಹಿಸುತ್ತಿತ್ತು, ಆದರೆ ಬಜೆಟ್‌ ಮಂಡಿಸಲು ನಿರಾಕರಿಸಿತ್ತು. ಗಾಂಟ್ಜ್ ಪಕ್ಷದೊಂದಿಗಿನ ಮೈತ್ರಿ ಒಪ್ಪಂದ ಉಲ್ಲಂಘನೆ ಸರ್ಕಾರದ ಪತನಕ್ಕೆ ಕಾರಣವೆಂದು ಮೇಲ್ನೋಟಕ್ಕೆ ತೋರುತ್ತಿದೆ.

ನೆತನ್ಯಾಹು ವಿರುದ್ಧ ಭ್ರಷ್ಟಾಚಾರ, ಲಂಚ, ಮೋಸ ಹಾಗೂ ನಂಬಿಕೆ ದ್ರೋಹದ ಪ್ರಕರಣಗಳು ದಾಖಲಾಗಿದ್ದು, ವಿಚಾರಣಗಳಿಗೆ ನೆತನ್ಯಾಹು ಕೋರ್ಟ್‌ಗೆ ಹಾಜರಾಗಬೇಕಿದೆ. ನೆತನ್ಯಾಹು ಮತ್ತು ಗಾಂಟ್ಜ್ ನಡುವೆ ಪರಸ್ಪರ ಅಪನಂಬಿಕೆ ದೊಡ್ಡದಾಗಿ ದೇಶವೇ ಇಬ್ಬಾಗವಾಗಿ ಹೋದ ಪರಿಸ್ಥಿತಿ ಸೃಷ್ಟಿಯಾಗಿತ್ತು.

ವಿಶ್ಲೇಷಕರ ಪ್ರಕಾರ, ಮತ್ತೊಂದು ಚುನಾವಣೆಯಲ್ಲಿ ನೆತನ್ಯಾಹು ಬಲಪಂಥೀಯ, ಧಾರ್ಮಿಕ ಸರ್ಕಾರ ರಚಿಸುವ ಯೋಜನೆ ರೂಪಿಸಿಕೊಂಡಿದ್ದಾರೆ. ಅದರಿಂದಾಗಿ ಬಂಧನದಿಂದ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಲಿದ್ದಾರೆ.

ಚುನಾವಣೆ ಮುಗಿದು ಹೊಸ ಸರ್ಕಾರ ರಚನೆಯಾಗುವವರೆಗೂ ಇದೇ ಸರ್ಕಾರವೇ ದೇಶವನ್ನು ಮುನ್ನಡೆಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT