ಸೋಮವಾರ, ಸೆಪ್ಟೆಂಬರ್ 27, 2021
21 °C
ಜನಗಣತಿಯ ಅಂಕಿ–ಅಂಶ ಉಲ್ಲೇಖಿಸಿ ಸಂಸದ ರಾಜಾ ಕೃಷ್ಣಮೂರ್ತಿ ಅಭಿಮತ

ಅಮೆರಿಕದ ಪ್ರಗತಿಗೆ ಭಾರತೀಯರ ಕೊಡುಗೆ ರುಜುವಾತು: ರಾಜಾ ಕೃಷ್ಣಮೂರ್ತಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ವಾಷಿಂಗ್ಟನ್: ‘ಸಾಂಸ್ಕೃತಿಕ, ಆರ್ಥಿಕ ಸೇರಿದಂತೆ ಅಮೆರಿಕದ ವಿವಿಧ ಕ್ಷೇತ್ರಗಳ ಉನ್ನತಿಗೆ ಭಾರತೀಯ ಅಮೆರಿಕನ್ನರು ಮಹತ್ವದ ಕೊಡುಗೆ ನೀಡಿದ್ದಾರೆ. ಇತ್ತೀಚಿಗೆ ಬಿಡುಗಡೆಯಾಗಿರುವ ಜನಗಣತಿ ವಿವರಗಳು ಈ ಮಾತುಗಳನ್ನು ರುಜುವಾತುಪಡಿಸುತ್ತವೆ’ ಎಂದು ಸಂಸದ ರಾಜಾ ಕೃಷ್ಣಮೂರ್ತಿ ಅಭಿಪ್ರಾಯಪಟ್ಟಿದ್ದಾರೆ.

ಪಿಟಿಐ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಅವರು ಅಮೆರಿಕದ ಪ್ರಗತಿಗೆ ಭಾರತೀಯರ ಕೊಡುಗೆ ಕುರಿತು ವಿವರಿಸಿದ್ದಾರೆ.

‘ಜನಗಣತಿಯ ಪ್ರಕಾರ ಅಮೆರಿಕದಲ್ಲಿ 40 ಲಕ್ಷಕ್ಕೂ ಹೆಚ್ಚು ಭಾರತೀಯರು ವಾಸಿಸುತ್ತಿದ್ದಾರೆ. ದೇಶದ ಒಟ್ಟು ಜನಸಂಖ್ಯೆಯಲ್ಲಿ ಭಾರತೀಯರ ಸಂಖ್ಯೆ ಶೇ 1.3ರಷ್ಟು. ವೃತ್ತಿ ಹಾಗೂ ಆರ್ಥಿಕ ಸ್ವಾವಲಂಬನೆ ವಿಷಯಕ್ಕೆ ಬಂದಾಗ ಭಾರತೀಯರು ಗಮನಾರ್ಹ ಯಶಸ್ಸು ಗಳಿಸಿದ್ದಾರೆ. ಅಮೆರಿಕದ ಅಭಿವೃದ್ಧಿಗೆ ಇತರ ದೇಶಗಳ ಪ್ರಜೆಗಳಿಗಿಂತ ಭಾರತೀಯರ ಕೊಡುಗೆ ಕಡಿಮೆಯೇನಿಲ್ಲ’ ಎಂದು ಹೇಳಿದರು.

‘ಶೇ 80ಕ್ಕೂ ಹೆಚ್ಚು ಭಾರತೀಯ ಅಮೆರಿಕನ್ನರು ಪದವೀಧರರಾಗಿದ್ದಾರೆ. ಇತರ ಯಾವುದೇ ದೇಶದ ಪ್ರಜೆಗಳಿಗೆ ಹೋಲಿಸಿದರೆ ಭಾರತೀಯರ ತಲಾ ಆದಾಯವೂ ಅಧಿಕ. ಕಂಪ್ಯೂಟರ್‌ ವಿಜ್ಞಾನ, ಹಣಕಾಸು, ವೈದ್ಯಕೀಯ ಸೇರಿದಂತೆ  ಎಲ್ಲ ಕ್ಷೇತ್ರಗಳಲ್ಲಿ ಭಾರತೀಯರು ತಮ್ಮ ಛಾಪು ಮೂಡಿಸಿದ್ದಾರೆ. ಅಮೆರಿಕದಲ್ಲಿರುವ ವೈದ್ಯರ ಪೈಕಿ ಭಾರತೀಯರ ಸಂಖ್ಯೆ ಶೇ 10ರಷ್ಟಿದೆ’ ಎಂದೂ ರಾಜಾ ಕೃಷ್ಣಮೂರ್ತಿ ಹೇಳಿದರು.

‘ಹಲವಾರು ಕ್ಷೇತ್ರಗಳಲ್ಲಿ ಭಾರತೀಯರು ಸಾಧನೆ ಮಾಡಿದ್ದಾರೆ. ಅದೇ ರೀತಿ ರಾಜಕೀಯ ಕ್ಷೇತ್ರವನ್ನು ಹೆಚ್ಚು ಜನರು ಪ್ರವೇಶಿಸಬೇಕು ಎಂಬುದು ನನ್ನ ಅಪೇಕ್ಷೆ’ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು