ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಷ್ಯಾ–ಉಕ್ರೇನ್ ಸಂಘರ್ಷ: ಮ್ಯಾನ್‌ಹುಶ್‌ನಲ್ಲಿ ಸಾಮೂಹಿಕ ಸಮಾಧಿ ಪತ್ತೆ

9 ಸಾವಿರ ನಾಗರಿಕರ ಹತ್ಯೆ ಶಂಕೆ: ಮ್ಯಾಕ್ಸರ್ ಟೆಕ್ನಾಲಜೀಸ್ ಉಪಗ್ರಹದಿಂದ ಸಮಾಧಿ ಚಿತ್ರ ಬಿಡುಗಡೆ
Last Updated 22 ಏಪ್ರಿಲ್ 2022, 20:56 IST
ಅಕ್ಷರ ಗಾತ್ರ

ಝಪ್ರೊರಿಝಿಯಾ (ಉಕ್ರೇನ್‌): ಕೀವ್‌ ಹೊರವಲಯದ ಉಪನಗರ ಬುಚಾದಲ್ಲಿ ನಡೆದಿದೆ ಎನ್ನಲಾದ ‘ನರಮೇಧ’ದ ಸಾಮೂಹಿಕ ಸಮಾಧಿಗಳು ಪತ್ತೆಯಾದಂತೆಯೇ ಮರಿಯುಪೊಲ್‌ ಬಳಿಯೂ ನಾಗರಿಕರ ಸಾಮೂಹಿಕ ಸಮಾಧಿ ಮಾಡಿರುವ ಸಾಧ್ಯತೆಗಳ ಚಿತ್ರಗಳನ್ನು ಮ್ಯಾಕ್ಸರ್‌ ಟೆಕ್ನಾಲಜಿಸ್‌ ಉಪಗ್ರಹ ಸೆರೆ ಹಿಡಿದಿದೆ.

ಮರಿಯುಪೊಲ್‌ ನಗರ ಹೊರವಲಯದ ಮ್ಯಾನ್‌ಹುಶ್ ಪಟ್ಟಣದಲ್ಲಿನ ಸ್ಮಶಾನಕ್ಕೆಸ್ವಲ್ಪ ದೂರದಲ್ಲಿ 200ಕ್ಕೂ ಹೆಚ್ಚು ಸಾಮೂಹಿಕ ಸಮಾಧಿಗಳು ಗೋಚರಿಸಿರುವ ಚಿತ್ರಗಳನ್ನು ಮ್ಯಾಕ್ಸರ್ ಟೆಕ್ನಾಲಜೀಸ್ ಉಪ್ರಗಹ ಬಿಡುಗಡೆ ಮಾಡಿದೆ.

‘ಮರಿಯುಪೊಲ್‌ನ ಸುಮಾರು 9 ಸಾವಿರ ನಾಗರಿಕರನ್ನು ರಷ್ಯಾ ಪಡೆಗಳು ಹತ್ಯೆಗೈದು, ಇಲ್ಲಿ ಸಾಮೂಹಿಕ ಸಮಾಧಿ ಮಾಡಿದ್ದಾರೆ. ರಷ್ಯಾದ ನಿಯಂತ್ರಣದಲ್ಲಿರುವ ಧ್ವಂಸಗೊಂಡ ಬಂದರು ನಗರದಲ್ಲಿ ನಡೆಯುತ್ತಿರುವ ನರಮೇಧ ಮರೆಮಾಚಲು ಮಾಡಿರುವ ಸಾಮೂಹಿಕ ಸಮಾಧಿಗಳು ಇವು’ ಎಂದು ಉಕ್ರೇನ್‌ ಅಧಿಕಾರಿಗಳು ಆರೋಪಿಸಿದ್ದಾರೆ.

‘ಮ್ಯಾನ್‌ಹುಶ್‌ನಲ್ಲಿನಸಮಾಧಿಗಳು ಮಾರ್ಚ್ ಅಂತ್ಯದಲ್ಲಿ ಶುರುವಾಗಿದ್ದು, ಇತ್ತೀಚಿನ ವಾರಗಳವರೆಗೂ ವಿಸ್ತರಿಸಿದಂತವು’ ಎಂದು ಮ್ಯಾಕ್ಸರ್‌ ಟೆಕ್ನಾಲಜಿಸ್‌, ಉಪಗ್ರಹ ಸೆರೆ ಹಿಡಿದ ಚಿತ್ರಗಳನ್ನು ವಿಶ್ಲೇಷಿಸಿ ಹೇಳಿದೆ.

ದೈತ್ಯ ಉಕ್ಕಿನ ಸ್ಥಾವರದಲ್ಲಿ ಅಂದಾಜು 2 ಸಾವಿರ ಉಕ್ರೇನ್‌ ಹೋರಾಟಗಾರರು ಇದ್ದು, ಸ್ಥಾವರದ ನಿಯಂತ್ರಣ ಬಿಟ್ಟುಕೊಡದ ನಡುವೆಯೂ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ‘ಮರಿಯುಪೊಲ್‌ ಯುದ್ಧದಲ್ಲಿ ವಿಜಯ ಸಾಧಿಸಿದ್ದೇವೆ’ ಎಂದು ಘೋಷಿಸಿದ ಕೆಲವೇ ತಾಸುಗಳಲ್ಲಿ ಮ್ಯಾನ್‌‌ಹುಶ್‌ನಲ್ಲಿನ ಸಾಮೂಹಿಕ ಸಮಾಧಿಯ ಚಿತ್ರಗಳು ಬಿಡುಗಡೆಯಾಗಿವೆ.

‘ಆಕ್ರಮಣಕಾರರು ಮರಿಯುಪೊಲ್‌ ನಾಗರಿಕರನ್ನು ಹತ್ಯೆ ಮಾಡಿ, ಶವಗಳನ್ನು ಮ್ಯಾನ್‌ಹುಶ್‌ನಲ್ಲಿ ಸಾಮೂಹಿಕ ಸಮಾಧಿ ಮಾಡಿ, ಯುದ್ಧಾಪರಾಧ ಮರೆಮಾಚಲು ಯತ್ನಿಸಿದ್ದಾರೆ.ಅವರು ಶವಗಳನ್ನು ಟ್ರಕ್‌ಗಳಲ್ಲಿ ‌ತಂದು ಇಲ್ಲಿ ಸುರಿಯುತ್ತಿ
ದ್ದರು’ ಎಂದು ನಗರದ ಮೇಯರ್‌ ವಾಡಿಮ್‌ ಬಾಯ್‌ಶೆಂಕೊ ಆರೋಪಿಸಿದ್ದಾರೆ. ಮ್ಯಾನ್‌ಹುಶ್‌ ಸಾಮೂಹಿಕ ಸಮಾಧಿ ಆರೋಪದ ಬಗ್ಗೆ ರಷ್ಯಾದಿಂದ ತಕ್ಷಣದ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ.

ರಕ್ಷಕರ ಶರಣಾಗತಿ: ರಷ್ಯಾ ಬಯಕೆ

ಉಕ್ಕಿನ ಸ್ಥಾವರದಲ್ಲಿ ಅಡಗಿರುವ ಉಕ್ರೇನ್‌ ಸೈನಿಕರನ್ನು ಮಣಿಸಲು ರಕ್ತಪಾತದ ಆಕ್ರಮಣಕ್ಕೆ ಸೈನಿಕರನ್ನು ಕಳುಹಿಸುವ ಬದಲು, ಸ್ಥಾವರಕ್ಕೆ ಮುತ್ತಿಗೆ ಹಾಕಿ, ಆಹಾರ ಮತ್ತು ಮದ್ದುಗುಂಡು ಖಾಲಿ ಮಾಡಿಸಿ, ಹೋರಾಟಗಾರರೇ ಸ್ವತಃ ಶರಣಾಗುವವರೆಗೆ ಕಾಯುವ ಸ್ಪಷ್ಟ ಉದ್ದೇಶವನ್ನು ರಷ್ಯಾ ಹೊಂದಿದೆ.

‘ಉಕ್ಕಿನ ಸ್ಥಾವರವನ್ನು ಮೂರರಿಂದ ನಾಲ್ಕು ದಿನಗಳಲ್ಲಿ ಸಂಪೂರ್ಣ ನಿಯಂತ್ರಣಕ್ಕೆ ತೆಗೆದುಕೊಳ್ಳಬಹುದು’ ಎಂದು ರಷ್ಯಾ ರಕ್ಷಣಾ ಸಚಿವ ಸೆರ್ಗಿ ಶೋಯಿಗು ಭವಿಷ್ಯ ನುಡಿದರು.ಆದರೆ, ಅಧ್ಯಕ್ಷ ಪುಟಿನ್ ಅವರು ತಮ್ಮ ಸೈನಿಕರ ಜೀವದ ಬಗ್ಗೆ ಕಳಕಳಿ ತೋರಿ, ‘ಇದು ಅರ್ಥಹೀನ ನಿರ್ಧಾರ. ಸಾವಿಗೆ ಅಂಜದ ಹೋರಾಟಗಾರರು ಅಡಗಿರುವ ದೈತ್ಯ ಸ್ಥಾವರದಭೂಗತ ಸುರಂಗಗಳಿಗೆ ನಮ್ಮ ಸೈನಿಕರನ್ನು ನುಗ್ಗಿಸುವುದು ಬೇಡ’ ಎಂದು ರಕ್ಷಣಾ ಸಚಿವರಿಗೆ ಸಲಹೆ ನೀಡಿದ್ದಾರೆ.

ಉಕ್ಕಿನ ಸ್ಥಾವರದ ಮೇಲೆ ಭೀಕರ ದಾಳಿಗೆ ಬದಲು, ‘ಒಂದು ನೊಣವೂ ಹೊರಬರದಂತೆ’ ಮುತ್ತಿಗೆ ಹಾಕಲು ಪುಟಿನ್‌ ಈಗಾಗಲೇ ಸೇನೆಗೆ ಆದೇಶ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT