ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೇಪಾಳ: ನಾಲ್ವರು ಭಾರತೀಯರು ಸೇರಿ 22 ಮಂದಿ ಪ್ರಯಾಣಿಸುತ್ತಿದ್ದ ವಿಮಾನ ಪತನ

ಮುಂಬೈನ ನಾಲ್ವರು ಸೇರಿ 22 ಮಂದಿ ಪ್ರಯಾಣಿಸುತ್ತಿದ್ದರು
Last Updated 29 ಮೇ 2022, 13:46 IST
ಅಕ್ಷರ ಗಾತ್ರ

ಕಠ್ಮಂಡು/ಮುಂಬೈ: ನಾಲ್ವರು ಭಾರತೀಯರ ಸಹಿತ 22 ಮಂದಿ ಪ್ರಯಾಣಿಸುತ್ತಿದ್ದ ನೇಪಾಳದ ಲಘು ವಿಮಾನವೊಂದು ಭಾನುವಾರ ಪತನಗೊಂಡಿದೆ.

‘ವಿಮಾನವು ಮುಸ್ಟಾಂಗ್‌ ಜಿಲ್ಲೆಯ ಥಸಾಂಗ್‌ ಪಟ್ಟಣ ಬಳಿಯ ಲಲಿಂಗ್ಚಾಗೋಲಾ ಎಂಬ ಪ್ರದೇಶದಲ್ಲಿ, ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ. ವಿಮಾನದಲ್ಲಿದ್ದವರ ಸ್ಥಿತಿ ಏನಾಗಿದೆ ಎಂಬುದು ತಕ್ಷಣಕ್ಕೆ ಗೊತ್ತಾಗಿಲ್ಲ’ ಎಂದು ನೇಪಾಳ ಸೇನೆಯ ಮುಖ್ಯಸ್ಥ ಮೇಜರ್‌ ಜನರಲ್ ಬಾಬುರಾಮ್ ಶ್ರೇಷ್ಠ ಹೇಳಿದ್ದಾರೆ.

ತಾರಾ ಏರ್‌ ಎಂಬ ಖಾಸಗಿ ವಿಮಾನಸಂಸ್ಥೆಗೆ ಸೇರಿದ ‘9ಎನ್‌–ಎಇಟಿ’ ವಿಮಾನವು ಪೋಖರಾದಿಂದ ಜೋಮ್‌ಸೊಮ್‌ ಎಂಬಲ್ಲಿಗೆ ಹೊರಟಿತ್ತು. ಇಬ್ಬರು ಜರ್ಮನ್‌ ಪ್ರಜೆಗಳು, 13 ಮಂದಿ ನೇಪಾಳಿಯರು, ಮೂವರು ಸಿಬ್ಬಂದಿಯೂ ವಿಮಾನದಲ್ಲಿದ್ದರು ಎಂದು ತಾರಾ ಏರ್‌ ಪ್ರಕಟಣೆಯಲ್ಲಿ ತಿಳಿಸಿದೆ.

ಪೋಖರಾ ವಿಮಾನನಿಲ್ದಾಣದಿಂದ ಬೆಳಿಗ್ಗೆ 9.55ಕ್ಕೆ ಟೇಕಾಫ್‌ ಆಗಿದ್ದ ವಿಮಾನವುಪಶ್ಚಿಮ ಭಾಗದ ಪರ್ವತಪ್ರದೇಶದಲ್ಲಿರುವ ಜೋಮ್‌ಸೊಮ್‌ ವಿಮಾನನಿಲ್ದಾಣದಲ್ಲಿ 10.15ಕ್ಕೆ ತಲುಪಬೇಕಿತ್ತು.

‘ಟೇಕಾಫ್‌ ಆದ 15 ನಿಮಿಷಗಳ ನಂತರ ವಿಮಾನವು ನಿಯಂತ್ರಣ ಗೋಪುರದಿಂದ ಸಂಪರ್ಕ ಕಳೆದುಕೊಂಡಿತು’ ಎಂದು ತಾರಾ ಏರ್‌ನ ವಕ್ತಾರ ತಿಳಿಸಿದ್ದಾರೆ.

ನೇಪಾಳ ಸೇನೆಯ 10 ಸೈನಿಕರನ್ನು ಒಳಗೊಂಡ ತಂಡವನ್ನು ಹೊತ್ತ ಹೆಲಿಕಾಪ್ಟರ್‌ ಘಟನಾ ಸ್ಥಳಕ್ಕೆ ತೆರಳಿದ್ದು, ಪ್ರಯಾಣಿಕರ ಪತ್ತೆ ಹಾಗೂ ರಕ್ಷಣಾ ಕಾರ್ಯದಲ್ಲಿ ತಂಡ ತೊಡಗಿದೆ.ಮೋಡಕವಿದ ವಾತಾವರಣ ಇದ್ದು, ಮಳೆಯೂ ಬೀಳುತ್ತಿರುವ ಕಾರಣ ರಕ್ಷಣಾ ಕಾರ್ಯಾಚರಣೆಗೆ ಅಡಚಣೆಯಾಗಿದೆ ಎಂದು ನಾಗರಿಕ ವಿಮಾನಯಾನ ಪ್ರಾಧಿಕಾರ ತಿಳಿಸಿದೆ.

‘ವಿಮಾನದ ಕ್ಯಾಪ್ಟನ್‌ ಪ್ರಭಾಕರ್ ಘಿಮಿರೆ ಅವರ ಮೊಬೈಲ್‌ ರಿಂಗಣಿಸುತ್ತಿದ್ದುದನ್ನು ನೇಪಾಳ ಟೆಲಿಕಾಂ ಸಂಸ್ಥೆ ಪತ್ತೆ ಹಚ್ಚಿತು. ಅದರ ಆಧಾರದ ಮೇಲೆ ವಿಮಾನವು ಪತನಗೊಂಡಿರುವ ಸ್ಥಳವನ್ನು ಗುರುತಿಸಲಾಯಿತು’ ಎಂದು ತ್ರಿಭುವನ್ ಅಂತರರಾಷ್ಟ್ರೀಯ ವಿಮಾನನಿಲ್ದಾಣದ ಪ್ರಧಾನ ವ್ಯವಸ್ಥಾಪಕ ಪ್ರೇಮನಾಥ್‌ ಠಾಕೂರ್‌ ಹೇಳಿದ್ದಾರೆ.

‘ವಿಮಾನವು ಖೈಬಾಂಗ್‌ ಬಳಿ ಎರಡು ಬಾರಿ ವೃತ್ತಾಕಾರದಲ್ಲಿ ಹಾರಾಡಿ ನಂತರ ಲೇಟೆ ಪಾಸ್‌ ಬಳಿ ಬಿತ್ತು ಎಂಬುದಾಗಿ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ’ ಎಂದು ಜಿಲ್ಲಾಧಿಕಾರಿ ಮ್ಯಾಗ್ಡಿ ಚಿರಂಜೀವಿ ರಾಣಾ ಮಾಹಿತಿ ನೀಡಿದ್ದಾರೆ.

ನಾಲ್ವರು ಮುಂಬೈಯ ಠಾಣೆ ನಿವಾಸಿಗಳು

ಮಹಾರಾಷ್ಟ್ರದ ಠಾಣೆ ನಿವಾಸಿಗಳಾದ ಅಶೋಕಕುಮಾರ್‌ ತ್ರಿಪಾಠಿ, ಪತ್ನಿವೈಭವಿ ತ್ರಿಪಾಠಿ, ಮಕ್ಕಳಾದ ಧನುಷ್ ಹಾಗೂ ರಿತಿಕಾ ಈ ನತದೃಷ್ಟ ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು.

ವಿಮಾನ ನಾಪತ್ತೆಯಾದ ಬೆನ್ನಲ್ಲೇ, ನೇಪಾಳದಲ್ಲಿರುವ ಭಾರತದ ರಾಯಭಾರ ಕಚೇರಿ ಅಧಿಕಾರಿಗಳು ಸ್ಥಳೀಯ ಪೊಲೀಸರನ್ನು ಸಂಪರ್ಕಿಸಿ, ತ್ರಿಪಾಠಿ ಕುಟುಂಬದ ಬಗ್ಗೆ ವಿವರಗಳನ್ನು ಸಂಗ್ರಹಿಸಿದರು ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT