ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೇಪಾಳದ ಕಮ್ಯುನಿಸ್ಟ್‌ ಪಕ್ಷ ಇಬ್ಭಾಗ?

Last Updated 22 ಡಿಸೆಂಬರ್ 2020, 12:45 IST
ಅಕ್ಷರ ಗಾತ್ರ

ಕಠ್ಮಂಡು: ಆಡಳಿತಾರೂಢ ನೇಪಾಳ ಕಮ್ಯುನಿಸ್ಟ್‌ ಪಕ್ಷದಲ್ಲಿನ (ಎನ್‌ಸಿಪಿ) ಬಣ ಜಗಳ ತಾರಕಕ್ಕೇರಿದ್ದು, ಪಕ್ಷವು ಇಬ್ಭಾಗವಾಗುವ ಲಕ್ಷಣಗಳು ಗೋಚರಿಸುತ್ತಿವೆ.

ಸಂಸತ್‌ ವಿಸರ್ಜಿಸಿರುವುದು ಅಸಾಂವಿಧಾನಿಕ ಹಾಗೂ ಪ್ರಜಾಪ್ರಭುತ್ವ ವಿರೋಧಿ ಕ್ರಮವಾಗಿರುವ ಕಾರಣ ‍ಪ್ರಧಾನಿ ಕೆ.ಪಿ.ಶರ್ಮಾ ಒಲಿ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಸೋಮವಾರ ನಡೆದಿದ್ದ ಪಕ್ಷದ ಸ್ಥಾಯಿ ಸಮಿತಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು.

ಇದರ ಬೆನ್ನಲ್ಲೇ ಪಕ್ಷದಲ್ಲಿ ತಮ್ಮ ಪ್ರಾಬಲ್ಯ ಹೆಚ್ಚಿಸಿಕೊಳ್ಳಲು ಮುಂದಾಗಿರುವ ಒಲಿ ಅವರು ಆಪ್ತರ ಜೊತೆಮಂಗಳವಾರ ಪ್ರತ್ಯೇಕ ಸಭೆ ನಡೆಸಿ 1,199 ಮಂದಿಯನ್ನೊಳಗೊಂಡ ಹೊಸ ಸಮಿತಿಯೊಂದನ್ನು ರಚಿಸಿದ್ದಾರೆ.

‘ನೂತನ ಸದಸ್ಯರೆಲ್ಲರೂ ಪ್ರಧಾನಿಯವರ ಸಮ್ಮುಖದಲ್ಲಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ನಾರಾಯಣ ಕಾಜಿ ಶ್ರೇಷ್ಠ ಅವರನ್ನು ಪಕ್ಷದ ವಕ್ತಾರ ಹುದ್ದೆಯಿಂದ ವಜಾಗೊಳಿಸಲಾಗಿದ್ದು, ಆ ಜವಾಬ್ದಾರಿಯನ್ನು ವಿದೇಶಾಂಗ ವ್ಯವಹಾರಗಳ ಖಾತೆ ಸಚಿವ ಪ್ರದೀಪ್‌ ಗ್ಯಾವಾಲಿ ಅವರಿಗೆ ವಹಿಸಲಾಗಿದೆ’ ಎಂದು ಸ್ಥಾಯಿ ಸಮಿತಿ ಸದಸ್ಯ ವಿನೋದ್‌ ಶ್ರೇಷ್ಠ ಹೇಳಿದ್ದಾರೆ.

‘ಪಕ್ಷದ ಮೇಲೆ ಬಿಗಿ ಹಿಡಿತ ಸಾಧಿಸುವ ಉದ್ದೇಶದಿಂದ ಒಲಿ ಈ ನಡೆ ಅನುಸರಿಸಿದ್ದಾರೆ’ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಕೆಲ ನಾಯಕರು ಪಕ್ಷ ತ್ಯಜಿಸಿದರೆ ಅದರಿಂದ ಏನೂ ನಷ್ಟವಾಗುವುದಿಲ್ಲ ಎಂದು ಒಲಿ ಅವರು ಸಭೆಯಲ್ಲಿ ತಿಳಿಸಿದ್ದಾರೆ ಎನ್ನಲಾಗಿದೆ.

ಮುಂದಿನ ವರ್ಷದ ನವೆಂಬರ್‌ 18ರಿಂದ 23ರವರೆಗೆ ಕಠ್ಮಂಡುವಿನಲ್ಲಿ ಪಕ್ಷದ ಸಮಾವೇಶ ಆಯೋಜಿಸುವ ಇಂಗಿತವನ್ನೂ ಒಲಿ ವ್ಯಕ್ತಪಡಿಸಿದ್ದಾರೆ. 2021ರ ಏಪ್ರಿಲ್‌ 7ರಿಂದ 12ರವರೆಗೆ ಸಮಾವೇಶ ನಡೆಸಲು ಈ ಮೊದಲು ತೀರ್ಮಾನಿಸಲಾಗಿತ್ತು.

ಇನ್ನೊಂದೆಡೆ ಒಲಿ ಅವರ ವಿರೋಧಿ ಪಾಳಯದ ನಾಯಕ ಪುಷ್ಪ ಕಮಲ್‌ ದಹಾಲ್‌ (ಪ್ರಚಂಡ) ಅವರೂ ತಮ್ಮ ಆಪ್ತರ ಜೊತೆ ಕಠ್ಮಂಡುವಿನಲ್ಲಿ ಸಭೆ ನಡೆಸಿದ್ದಾರೆ. ಮಾಜಿ ಪ್ರಧಾನಿಗಳಾದ ಮಾಧವಕುಮಾರ್‌ ನೇಪಾಳ್‌ ಮತ್ತು ಜಲನಾಥ್‌ ಖಾನಲ್‌, ಈ ಹಿಂದೆ ಕೃಷಿ ಸಚಿವರಾಗಿದ್ದ ಘನಶ್ಯಾಮ್‌ ಭೂಷಾಲ್‌ ಅವರು ಈ ಸಭೆಯಲ್ಲಿ ಪಾಲ್ಗೊಂಡ ಪ್ರಮುಖರಾಗಿದ್ದಾರೆ.

ಎನ್‌ಸಿಪಿ ಇಬ್ಭಾಗ ಸಂಬಂಧ ಶೀಘ್ರವೇ ಪ್ರಕಟಣೆ ಹೊರಬೀಳುವ ನಿರೀಕ್ಷೆ ಇದೆ ಎಂದೂ ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT