ಶುಕ್ರವಾರ, ಸೆಪ್ಟೆಂಬರ್ 24, 2021
23 °C

ತಾಲಿಬಾನ್ ಸರ್ಕಾರ ರಚನೆಗೆ ಎಲ್ಲ ರೀತಿಯ ಸಹಾಯ ಮಾಡುತ್ತೇವೆ: ಪಾಕ್ ಸೇನಾ ಮುಖ್ಯಸ್ಥ

ಪಿಟಿಐ Updated:

ಅಕ್ಷರ ಗಾತ್ರ : | |

ಇಸ್ಲಾಮಾಬಾದ್: ನೆರೆಯ ಅಫ್ಗಾನಿಸ್ತಾನದಲ್ಲಿ ಅಂತರ್ಗತ ಆಡಳಿತವನ್ನು ಸ್ಥಾಪಿಸಲು ಇಸ್ಲಾಮಾಬಾದ್ ತಾಲಿಬಾನ್‌ಗಳಿಗೆ ‘ಸಹಾಯ ಮಾಡುತ್ತದೆ’ ಎಂದು ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಕಮರ್ ಜಾವೇದ್ ಬಾಜ್ವಾ ಶನಿವಾರ ಬ್ರಿಟಿಷ್ ವಿದೇಶಾಂಗ ಕಾರ್ಯದರ್ಶಿ ಡೊಮಿನಿಕ್ ರಾಬ್ ಅವರಿಗೆ ಹೇಳಿದ್ದಾರೆ.

ಪರಸ್ಪರ ಹಿತಾಸಕ್ತಿ, ಪ್ರಾದೇಶಿಕ ಭದ್ರತೆ ಮತ್ತು ಅಫ್ಗಾನಿಸ್ತಾನದ ಪ್ರಸ್ತುತ ಪರಿಸ್ಥಿತಿ ಕುರಿತು ರಾಬ್ ಅವರೊಂದಿಗೆ ಜನರಲ್ ಬಾಜ್ವಾ ಚರ್ಚಿಸಿದರು.

‘ಅಫ್ಗಾನಿಸ್ತಾನದಲ್ಲಿ ಶಾಂತಿ ಮತ್ತು ಸ್ಥಿರತೆಗಾಗಿ ಪಾಕಿಸ್ತಾನ ಹೋರಾಡುತ್ತಲೇ ಇರುತ್ತದೆ. ಜೊತೆಗೆ, ಅಂತರ್ಗತ ಆಡಳಿತದ ರಚನೆಗೆ ಸಹಾಯ ಮಾಡುತ್ತದೆ’ಎಂದು ಜನರಲ್ ಬಾಜ್ವಾ ಸಭೆಯಲ್ಲಿ ಹೇಳಿದರು ಎಂದು ಪಾಕಿಸ್ತಾನದ ಅಬ್ಸರ್ವರ್ ಪತ್ರಿಕೆ ವರದಿ ಮಾಡಿದೆ.

ಅಫ್ಗಾನಿಸ್ತಾನದಲ್ಲಿ ಸರ್ಕಾರ ರಚನೆಗೆ ತಾಲಿಬಾನ್ ಕಸರತ್ತು ನಡೆಸಿರುವ ಬೆನ್ನಲ್ಲೇ ಪಾಕಿಸ್ತಾನದ ಪ್ರಬಲ ಗುಪ್ತಚರ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಫೈಜ್ ಹಮೀದ್ ಅವರು ಶನಿವಾರ ಕಾಬೂಲ್‌ಗೆ ಭೇಟಿ ನೀಡಿದ್ದಾರೆ. ಇದರ ಬೆನ್ನಲ್ಲೇ, ಜನರಲ್ ಬಾಜ್ವಾ ಅವರ ಹೇಳಿಕೆ ಮಹತ್ವ ಪಡೆದಿದೆ.

ಅಂತರರಾಷ್ಟ್ರೀಯ ಸಮುದಾಯಕ್ಕೆ ಸ್ವೀಕಾರಾರ್ಹವಾದ ವಿಶಾಲ ಆಧಾರಿತ ಮತ್ತು ಅಂತರ್ಗತ ಆಡಳಿತಕ್ಕೆ ರೂಪ ನೀಡಲು ಹೆಣಗಾಡುತ್ತಿರುವ ಕಾರಣ ಮುಂದಿನ ವಾರಕ್ಕೆ ಅಫ್ಗಾನಿಸ್ತಾನದಲ್ಲಿ ಹೊಸ ಸರ್ಕಾರ ರಚನೆಯನ್ನು ತಾಲಿಬಾನ್ ಮುಂದೂಡಿದೆ.

ಅಮೆರಿಕ ಬೆಂಬಲಿತ ಅಫ್ಗಾನಿಸ್ತಾನ ಸರ್ಕಾರವನ್ನು ಉರುಳಿಸಿದ ನಂತರ, ತಾಲಿಬಾನ್ ಸರ್ಕಾರ ರಚನೆಯನ್ನು ವಿಳಂಬ ಮಾಡಿರುವುದು ಇದು ಎರಡನೇ ಬಾರಿಯಾಗಿದೆ. ಸಂಘಟನೆಯ ಸಹ-ಸಂಸ್ಥಾಪಕ ಮುಲ್ಲಾ ಅಬ್ದುಲ್ ಘನಿ ಬರಾದರ್ ನೇತೃತ್ವದ ಹೊಸ ಸರ್ಕಾರ ರಚನೆಯನ್ನು ತಾಲಿಬಾನ್ ಘೋಷಿಸುವ ನಿರೀಕ್ಷೆ ಇತ್ತು.

‘ರಕ್ಷಣೆ, ತರಬೇತಿ ಮತ್ತು ಭಯೋತ್ಪಾದನೆ ವಿರುದ್ಧದ ಕ್ಷೇತ್ರಗಳಲ್ಲಿ ಸಹಕಾರದ ಮಾರ್ಗಗಳನ್ನು ಮುಂದುವರಿಸಲು ಎರಡೂ ದೇಶಗಳು ಮಾತುಕತೆ ವೇಳೆ ಒಪ್ಪಿವೆ’ಎಂದು ವರದಿ ಹೇಳಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು