ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಹೋರ್ | ಮುಂಬೈ ದಾಳಿ ಸೂತ್ರಧಾರ ಹಫೀಜ್ ಸಹಚರರ ಶಿಕ್ಷೆ ರದ್ದು

ಒಂದು ವರ್ಷದ ಜೈಲುಶಿಕ್ಷೆ ಅಮಾನತುಗೊಳಿಸಿದ ಕೋರ್ಟ್
Last Updated 13 ಆಗಸ್ಟ್ 2020, 14:15 IST
ಅಕ್ಷರ ಗಾತ್ರ

ಲಾಹೋರ್: ಭಯೋತ್ಪಾದಕರಿಗೆ ಹಣ ಪೂರೈಸಿದ ಪ್ರಕರಣದಲ್ಲಿ 2008ರ ಮುಂಬೈ ದಾಳಿಯ ಸೂತ್ರಧಾರ ಹಫೀಜ್ ಸಯೀದ್‌ನ ಆಪ್ತ ಸಹಾಯಕರಾದ ಜಮಾತ್–ಉದ್‌–ದವಾ (ಜೆಯುಡಿ) ಸಂಘಟನೆಯ ಇಬ್ಬರು ಹಿರಿಯ ನಾಯಕರಿಗೆ ವಿಧಿಸಲಾಗಿದ್ದ ಒಂದು ವರ್ಷದ ಜೈಲುಶಿಕ್ಷೆಯನ್ನು ಗುರುವಾರ ಪಾಕಿಸ್ತಾನದ ನ್ಯಾಯಾಲಯ ರದ್ದುಗೊಳಿಸಿದೆ.

ಭಯೋತ್ಪಾದಕರಿಗೆ ಹಣ ಸರಬರಾಜು ಮಾಡಿದ್ದ ಪ್ರಕರಣದಲ್ಲಿ ಜೆಯುಡಿ ಸಂಘಟನೆಯ ಅಬ್ದುಲ್ ರೆಹಮಾನ್ ಮಕ್ಕಿ ಮತ್ತು ಅಬ್ದುಸ್ ಸಲಾಂ ಅವರಿಗೆ ಲಾಹೋರ್‌ನ ಭಯೋತ್ಪಾದನಾ ನಿಗ್ರಹ ನ್ಯಾಯಾಲಯವು (ಎಟಿಸಿ) ಜೂನ್‌ನಲ್ಲಿ ಒಂದು ವರ್ಷದ ಜೈಲು ಶಿಕ್ಷೆ ವಿಧಿಸಿತ್ತು.

ಉಗ್ರ ಹಫೀಜ್ ಸಯೀದ್‌ನ ಸಹಚರರಾಗಿದ್ದ ಅಬ್ದುಲ್ ರೆಹಮಾನ್ ಮಕ್ಕಿ ಮತ್ತು ಅಬ್ದುಸ್ ಸಲಾಂ ವಿವಿಧೆಡೆಗಳಿಂದ ಹಣ ಸಂಗ್ರಹಿಸಿ ಭಯೋತ್ಪಾದಕರಿಗೆ ಪೂರೈಸುತ್ತಿದ್ದರು.

ಲಾಹೋರ್‌ನ ಕೋಟ್ ಲಖ್‌ಪತ್ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದ ಈ ಇಬ್ಬರು ನಾಯಕರು ಲಾಹೋರ್‌ ಹೈಕೋರ್ಟಿನಲ್ಲಿ ತಮ್ಮ ಶಿಕ್ಷೆಯನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದರು.

‘ಲಾಹೋರ್ ಹೈಕೋರ್ಟ್ ಗುರುವಾರ ಇಬ್ಬರಿಗೂ ಒಂದು ವರ್ಷದ ಶಿಕ್ಷೆಯನ್ನು ಅಮಾನತುಗೊಳಿಸಿ, ಜಾಮೀನು ಮಂಜೂರು ಮಾಡಿದೆ’ ಎಂದು ಕೋರ್ಟ್‌ನ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಜೆಯುಡಿ ಭಾಗವಾಗಿದ್ದ ಲಷ್ಕರ್‌–ಎ–ತಯ್ಯಬಾ(ಎಲ್ಇಟಿ) ಸಂಘಟನೆ ನೇತೃತ್ವದಲ್ಲಿ 2008ರಲ್ಲಿ ಮುಂಬೈನಲ್ಲಿ ದಾಳಿ ನಡೆಸಲು ಹಫೀಜ್ ಸಯೀದ್ ಯೋಜನೆ ರೂಪಿಸಿದ್ದ. ಈತನ ಮಾರ್ಗದರ್ಶನದಲ್ಲಿ ಮುಂಬೈನಲ್ಲಿ ನಡೆದ ದಾಳಿಯಲ್ಲಿ ಆರು ಅಮೆರಿಕ ಪ್ರಜೆಗಳು ಸೇರಿದಂತೆ ಒಟ್ಟು 166 ಮಂದಿ ಸಾವನ್ನಪ್ಪಿದ್ದರು.

ಭಯೋತ್ಪಾದಕರಿಗೆ ಹಣ ಸರಬರಾಜು ಮಾಡಿದ್ದ ಆರೋಪ ಸಾಬೀತಾಗಿದ್ದರಿಂದ ಎಟಿಸಿಯು ಫೆಬ್ರುವರಿಯಲ್ಲಿ ಸಯೀದ್‌ಗೆ 11 ವರ್ಷ ಹಾಗೂ ಆತನ ಮತ್ತೊಬ್ಬ ಸಹಚರ ಜಫರ್ ಇಕ್ಬಾಲ್‌ಗೆ ಐದೂವರೆ ವರ್ಷ ಜೈಲುಶಿಕ್ಷೆ ವಿಧಿಸಿತ್ತು. ಕಳೆದ ವರ್ಷ ಜುಲೈನಲ್ಲಿ ಬಂಧಿತನಾಗಿದ್ದ ಸಯೀದ್ ಈಗ ಲಾಹೋರ್‌ನ ಕೋಟ್ ಲಖ್‌ಪತ್ ಜೈಲಿನಲ್ಲಿದ್ದಾನೆ.

ಸಯೀದ್ ಮತ್ತು ಆತನ ಸಹಚರರ ವಿರುದ್ಧ ಪಂಜಾಬ್ ಭಯೋತ್ಪಾದನ ನಿಗ್ರಹ ಪಡೆಯು 23 ಎಫ್‌ಐಆರ್‌ಗಳನ್ನು ದಾಖಲಿಸಿದೆ. ಹಫೀಜ್ ಸಯೀದ್‌ನನ್ನು ಅಮೆರಿಕವು ಜಾಗತಿಕ ಭಯೋತ್ಪಾದಕರ ಪಟ್ಟಿಯಲ್ಲಿ ಸೇರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT