ಭಾನುವಾರ, ಜನವರಿ 16, 2022
28 °C

ಭಯೋತ್ಪಾದನೆಯ ಸ್ವರ್ಗ ಪಾಕ್, ಭಾರತಕ್ಕಷ್ಟೇ ಅಲ್ಲ ವಿಶ್ವಕ್ಕೇ ತಲೆನೋವು: ಬಿಜೆಪಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ವಾಷಿಂಗ್ಟನ್‌: ಜಗತ್ತಿನಾದ್ಯಂತ ನಡೆದಿರುವ ಎಲ್ಲಾ ಪ್ರಮುಖ ಭಯೋತ್ಪಾದಕ ದಾಳಿಗಳಲ್ಲಿ ಪಾಕಿಸ್ತಾನದವರ ಹೆಜ್ಜೆ ಗುರುತುಗಳಿವೆ. ಹಾಗಾಗಿ ಭಯೋತ್ಪಾದಕರಿಗೆ ಸುರಕ್ಷಿತ ತಾಣವಾಗಿರುವ ಆ ದೇಶ ಇಡೀ ವಿಶ್ವಕ್ಕೇ ‘ತಲೆನೋವಾಗಿದೆ’ ಎಂದು ಬಿಜೆಪಿಯ ಹಿರಿಯ ನಾಯಕ ರಾಮ್ ಮಾಧವ್ ಹೇಳಿದ್ದಾರೆ.

ಇಲ್ಲಿ ಭಾರತೀಯ–ಅಮೆರಿಕನ್ನರು ಆಯೋಜಿಸಿದ್ದ ‘ಜಾಗತಿಕ ಭಯೋತ್ಪಾದನಾ ವಿರೋಧಿ ದಿನ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಜಾಗತಿಕ ಭಯೋತ್ಪಾದನೆಯ ತಾಣ ಆಗಿರುವ ಪಾಕಿಸ್ತಾನವನ್ನು ವಿಶ್ವ ಸಮುದಾಯ ಸೂಕ್ತವಾಗಿ ನಿಭಾಯಿಸಬೇಕಾದ ಅಗತ್ಯವಿದೆ’ ಎಂದರು.

‘ಪಾಕಿಸ್ತಾನ ಕೇವಲ ಭಾರತಕ್ಕಷ್ಟೇ ತಲೆನೋವಾಗಿಲ್ಲ. ಇಡೀ ವಿಶ್ವಕ್ಕೆ ಸಮಸ್ಯೆಯಾಗಿದೆ. ಕೈಗವಸು ತೊಟ್ಟು ಮಕ್ಕಳಿಗೆ ಚಿಕಿತ್ಸೆ ನೀಡುವಂತೆ, ಆ ದೇಶಕ್ಕೆ ಚಿಕಿತ್ಸೆ ನೀಡಲು ಸಾದ್ಯವಿಲ್ಲ’ ಎಂದು ಆರ್‌ಎಸ್‌ಎಸ್‌ನ ರಾಷ್ಟ್ರೀಯ ಕಾರ್ಯಕಾರಿ  ಸದಸ್ಯರೂ ಆಗಿರುವ ಮಾಧವ್ ಅವರು ಪುನರುಚ್ಚರಿಸಿದರು.

’ಪಾಕಿಸ್ತಾನವು ಭಯೋತ್ಪಾದಕರನ್ನು ರಕ್ಷಿಸುವ ಕಾರ್ಯ ಮಾಡುತ್ತದೆ. ಭಯೋತ್ಪಾದನೆಯನ್ನು ಉತ್ತೇಜಿಸುತ್ತದೆ. ಆರ್ಥಿಕ ನೆರವು ಒದಗಿಸುತ್ತದೆ. ಹೀಗಾಗಿ ಭಯೋತ್ಪಾದಕರಿಗೆ ಅದು ಸುರಕ್ಷಿತ ಸ್ವರ್ಗ. ಅಂಥ ರಾಷ್ಟ್ರವನ್ನು ಸಮರ್ಪಕವಾಗಿ ನಿಯಂತ್ರಿಸಬೇಕಿದೆ’ ಎಂದು ಹೇಳಿದರು.

‘ವಾಷಿಂಗ್ಟನ್‌ನಲ್ಲಿರುವ ಬುದ್ದಿಜೀವಿಗಳ ಗುಂಪೊಂದು ಪಾಕಿಸ್ತಾನ ಮತ್ತು ಅದರ ಗೂಢಚರ್ಯೆ ಏಜೆನ್ಸಿ ಐಎಸ್‌ಐ ಅನ್ನು ಸಮರ್ಥಿಸಿ ಕೊಳ್ಳುವಲ್ಲಿ ನಿರತರವಾಗಿದೆ’ ಎಂದು ಮಾಧವ್ ದೂರಿದರು.

‘ಅವರು (ಐಎಸ್ಐ) ಭಯೋತ್ಪಾದಕರು. ಅಮೆರಿಕದಲ್ಲಿರುವ ಕೆಲವು ಬುದ್ದಿಜೀವಿಗಳಿಗೆ ಮನವರಿಕೆ ಮಾಡುವಲ್ಲಿ ಅವರು ಯಶಸ್ವಿಯಾಗಿದ್ದಾರೆ’ ಎಂದು ಹೇಳಿದರು.

ಕಾಶ್ಮೀರ ಸೇರಿದಂತೆ ಭಾರತದಲ್ಲಿ ಯಶಸ್ವಿಯಾಗಿ ಭಯೋತ್ಪಾದನೆಯನ್ನು ನಿಗ್ರಹಿಸಿದ್ದೇವೆ ಎಂದು ಅವರು ಸಭಿಕರಿಗೆ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು