ಟೋಕಿಯೊದಲ್ಲಿ 5.9 ತೀವ್ರತೆಯ ಭೂಕಂಪ; 17 ಜನರಿಗೆ ಗಾಯ

ಟೋಕಿಯೊ: ಗುರುವಾರ ರಾತ್ರಿ ಜಪಾನ್‌ನ ಟೋಕಿಯೊದಲ್ಲಿ 5.9ರಷ್ಟು ತೀವ್ರತೆಯ ಭೂಕಂಪ ಸಂಭವಿಸಿದ್ದು, ಕನಿಷ್ಠ 17 ಮಂದಿ ಗಾಯಗೊಂಡಿದ್ದಾರೆ. ಆದರೆ, ಸುನಾಮಿಯ ಅಪಾಯ ಇಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
ಟೋಕಿಯೊದ ಪೂರ್ವ ದಿಕ್ಕಿನಲ್ಲಿ 80 ಕಿ.ಮೀ ಆಳದ ಭೂಗರ್ಭದಲ್ಲಿ ಭೂಕಂಪನ ಕೇಂದ್ರ ಗುರುತಿಸಲಾಗಿದೆ ಎಂದು ಭೂವಿಜ್ಞಾನ ಸಂಸ್ಥೆಯು ಹೇಳಿದೆ. ಭೂಕಂಪನದಿಂದ ಕಟ್ಟಡಗಳು ಅಲುಗಾಡಿದ ಅನುಭವವಾಗಿದೆ ಹಾಗೂ ಮನೆಯೊಳಗಿನ ವಸ್ತುಗಳು ತೂಗಾಡಿವೆ.
ಭೂಕಂಪದ ಕಾರಣ ರೈಲು ಮತ್ತು ಸಬ್‌ವೇ ಸಂಚಾರ ಸ್ಥಗಿತಗೊಳಿಸಲಾಗಿದೆ. ಒಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಒಟ್ಟು 17 ಜನರು ಗಾಯಗೊಂಡಿರುವುದಾಗಿ ಪ್ರಧಾನ ಸಂಪುಟ ಕಾರ್ಯದರ್ಶಿ ಹಿರೊಕಜು ಮಟ್ಸುನೊ ಹೇಳಿದ್ದಾರೆ. ಪರಮಾಣು ವಿದ್ಯುತ್ ಸ್ಥಾವರಗಳಲ್ಲಿ ಯಾವುದೇ ವ್ಯತ್ಯಯ ಕಂಡು ಬಂದಿಲ್ಲ ಎಂದಿದ್ದಾರೆ.
ಟಿವಿ ಮಾಧ್ಯಮಗಳ ಪ್ರಕಾರ, ಭೂಕಂಪದ ಸಮಯದಲ್ಲಿ ಚಲಿಸುತ್ತಿದ್ದ ರೈಲು ಭಾಗಶಃ ಹಳ್ಳಿ ತಪ್ಪಿದೆ ಹಾಗೂ ತುರ್ತು ನಿಲುಗಡೆಯ ಕಾರಣದಿಂದಾಗಿ ರೈಲಿನೊಳಗೆ ಪ್ರಯಾಣಿಕರು ಬಿದ್ದು ಗಾಯಗೊಂಡಿದ್ದಾರೆ. ಟೋಕಿಯೊ ಸಮೀಪದ ಕನಾಗವಾದಲ್ಲೂ ಕೆಲವರು ಗಾಯಗೊಂಡಿದ್ದಾರೆ. ಟೋಕಿಯೊ ವಿದ್ಯುತ್ ಶಕ್ತಿ ಕಂಪನಿಯ ಪ್ರಕಾರ, ಟೋಕಿಯೊದಲ್ಲಿ ಸುಮಾರು 250 ಮನೆಗಳಿಗೆ ವಿದ್ಯುತ್ ಕಡಿತಗೊಂಡಿದೆ.
ನಗರದ ಹತ್ತಾರು ಕಡೆ ನೆಲದಡಿಯ ನೀರಿನ ಪೈಪ್‌ಗಳಿಗೆ ಹಾನಿಯಾಗಿರುವುದಾಗಿ ವಿಪತ್ತು ನಿರ್ವಹಣಾ ಪಡೆಯ ಅಧಿಕಾರಿಗಳು ತಿಳಿಸಿದ್ದಾರೆ.
ಜಪಾನ್‌ನ ನೂತನ ಪ್ರಧಾನಿ ಫುಮಿಯೊ ಕಿಶಿದಾ ಭೂಕಂಪದ ಕುರಿತು ಟ್ವೀಟಿಸಿದ್ದು, 'ಟೋಕಿಯೊದಲ್ಲಿ 2011ರ ಮಾರ್ಚ್ ಬಳಿಕ ನಡೆದಿರುವ ತೀವ್ರವಾದ ಭೂಕಂಪ ಇದಾಗಿದೆ. ಇತ್ತೀಚಿನ ಮಾಹಿತಿಗಳನ್ನು ಗಮನಿಸಿ ಹಾಗೂ ಜೀವ ರಕ್ಷಣೆಗಾಗಿ ಸೂಕ್ತ ಕ್ರಮಗಳನ್ನು ಕೈಗೊಳ್ಳಿ' ಎಂದಿದ್ದಾರೆ.
ಹಲವು ಕಟ್ಟಡಗಳಲ್ಲಿ ಎಲಿವೇಟರ್‌ಗಳು ತಾನಾಗಿಯೇ ಸ್ಥಗಿತಗೊಂಡವು, ಅದರಿಂದ ಕೆಲ ಸಮಯ ಜನರು ಸಿಲುಕಿಕೊಂಡರು. ಲೋಕಲ್ ರೈಲುಗಳ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದರಿಂದ ಜನರು ಮನೆ ತಲುಪಲು ಟ್ಯಾಕ್ಸಿಗಳಿಗೆ ಕಾಯುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.