ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀಲಂಕಾ: ಅಧ್ಯಕ್ಷ ಗೊಟಬಯಗೆ ವಾಗ್ದಂಡನೆಯ ಭೀತಿ, ಸಂಸದರ ಸಹಿ ಸಂಗ್ರಹ ಆರಂಭ

ಅವಿಶ್ವಾಸ ನಿರ್ಣಯಕ್ಕೆ ವಿರೋಧ ಪಕ್ಷಗಳ ತಯಾರಿ
Last Updated 8 ಏಪ್ರಿಲ್ 2022, 19:30 IST
ಅಕ್ಷರ ಗಾತ್ರ

ಕೊಲಂಬೊ: ಆರ್ಥಿಕ ಬಿಕ್ಕಟ್ಟಿನಿಂದ ಸಾರ್ವಜನಿಕರು ಎದುರಿಸುತ್ತಿರುವ ಸಂಕಷ್ಟಗಳನ್ನು ಪರಿಹರಿಸಲು ಕ್ರಮಗಳನ್ನು ಕೈಗೊಳ್ಳಲು ಅಧ್ಯಕ್ಷ ಗೊಟಬಯ ರಾಜಪಕ್ಸ ನೇತೃತ್ವದ ಸರ್ಕಾರವು ವಿಫಲವಾದರೆ, ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸುವುದಾಗಿ ಶ್ರೀಲಂಕಾದ ಪ್ರಮುಖ ವಿರೋಧ ಪಕ್ಷವಾದ ಸಮಾಗಿ ಜನ ಬಲವೆಗಯ (ಎಸ್‌ಜೆಬಿ) ಶುಕ್ರವಾರ ಘೋಷಿಸಿದೆ. ಅಧ್ಯಕ್ಷ ಗೊಟಬಯ ಅವರನ್ನು ವಾಗ್ದಂಡನೆಗೆ ಒಳಪಡಿಸುವುದಕ್ಕೂ ಪಕ್ಷವು ಸಿದ್ಧತೆ ನಡೆಸಿದೆ.

ಅಧ್ಯಕ್ಷರ ಕೈಯಲ್ಲಿ ಅಧಿಕಾರ ಕೇಂದ್ರೀಕೃತವಾಗಿರುವ ಕಾರ್ಯನಿರ್ವಾಹಕ ಅಧ್ಯಕ್ಷೀಯ ವ್ಯವಸ್ಥೆ ರದ್ದುಪಡಿಸಿ, ಅಧಿಕಾರವನ್ನು ಕಾರ್ಯಾಂಗ,ಶಾಸಕಾಂಗ ಮತ್ತು ನ್ಯಾಯಾಂಗಗಳ ನಡುವೆ ಹಂಚಿಕೆ ಮಾಡಬೇಕು ಎಂದು ವಿರೋಧ ಪಕ್ಷದ ನಾಯಕ ಸಜಿತ್‌ ಪ್ರೇಮದಾಸ ಅವರು ಹೇಳಿದರು.

‘ಗೊಟಬಯ ಸ್ಥಾನ ತೊರೆಯಬೇಕು ಎಂದು ಜನರು ಬೇಡಿಕೆ ಇಡುತ್ತಿದ್ದಾರೆ. ಜನರ ಬೇಡಿಕೆಯನ್ನು ಸರ್ಕಾರ ಗಮನಿಸಬೇಕು. ಇಲ್ಲದಿದ್ದರೆ ನಾವು ಅವಿಶ್ವಾಸ ನಿರ್ಣಯ ಮಂಡಿಸುತ್ತೇವೆ. ಗೊಟಬಯ ರಾಜಪಕ್ಸ ಅವರು ಅಧ್ಯಕ್ಷರಾಗಿಯೇ ಮುಂದುವರಿಯುವ ಮಧ್ಯಂತರ ಸರ್ಕಾರವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಅಧ್ಯಕ್ಷರನ್ನು ಪದಚ್ಯುತಗೊಳಿಸಲು ನಾವು ತಯಾರಿ ಮಾಡಿದ್ದೇವೆ’ ಎಂದು ಪ್ರೇಮದಾಸ ಹೇಳಿದ್ದಾರೆ.

ಅವಿಶ್ವಾಸ ನಿರ್ಣಯಕ್ಕಾಗಿ ಸಂಸದರಿಂದ ಸಹಿ ಸಂಗ್ರಹಿಸುವ ಕೆಲಸಕ್ಕೂ ಎಸ್‌ಜೆಬಿ ಮುಂದಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

‘ಗೊಟಬಯ ರಾಜೀನಾಮೆ ನೀಡದಿದ್ದರೆ ಅಧ್ಯಕ್ಷ ಸ್ಥಾನದಿಂದ ಅವರನ್ನು ಪದಚ್ಯುತಗೊಳಿಸಲು ಕ್ರಮ ಕೈಗೊಳ್ಳುವ ಅಗತ್ಯ ಬರಲಿದೆ’ ಎಂದು ಮತ್ತೊಂದು ವಿರೋಧ ಪಕ್ಷವಾದ ಜನತಾ ವಿಮುಕ್ತಿ ಪೆರಮುನ (ಜೆವಿಪಿ) ಸಂಸದ ವಿಜಿತ ಹೆರತ್‌ ಹೇಳಿದ್ದಾರೆ.

ಆರ್ಥಿಕ ಬಿಟ್ಟಕ್ಕನ್ನು ಸರಿಪಡಿಸುವಂತೆ ಮತ್ತು ಗೊಟಬಯ ಅವರು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯುವಂತೆ ಸಾವಿರಾರು ಜನರು ಪ್ರತಿಭಟನೆ ನಡೆಸುತ್ತಿದ್ದಾರೆ. ವಿರೋಧ ಪಕ್ಷಗಳೂ ಪ್ರತಿಭಟನಕಾರರಿಗೆ ಬೆಂಬಲ ನೀಡಿವೆ.ಇದೇ ವೇಳೆ, ಸಾರ್ವಜನಿಕ ವಲಯ ಮತ್ತು ಖಾಸಗಿ ವಲಯದ ಉದ್ಯೋಗಿಗಳು ದೇಶದಾದ್ಯಂತ ಶುಕ್ರವಾರ ಮುಷ್ಕರ ಹಮ್ಮಿಕೊಂಡಿದ್ದರು.

ಸಚಿವ ಸ್ಥಾನಕ್ಕೆ ಮರಳಿದ ಅಲಿ ಸಾಬ್ರಿ

ಶ್ರೀಲಂಕಾದ ಹಣಕಾಸು ಸಚಿವರಾಗಿ ನೇಮಕವಾದ 24 ಗಂಟೆಗಳ ಒಳಗೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಅಲಿ ಸಾಬ್ರಿ ಅವರು ಸಚಿವ ಸ್ಥಾನಕ್ಕೆ ಶುಕ್ರವಾರ ಮರಳಿದ್ದಾರೆ.

ಅಂತರರಾಷ್ಟ್ರೀಯ ಹಣಕಾಸು ಮಂಡಳಿಗೆ (ಐಎಂಎಫ್‌) ತೆರಳಲಿರುವ ಶ್ರೀಲಂಕಾ ನಿಯೋಗವನ್ನು ಅವರು ಮುನ್ನಡೆಸಲಿದ್ದಾರೆ ಎನ್ನಲಾಗಿದೆ.

‘ಹಣಕಾಸು ಸಚಿವ ಸ್ಥಾನಕ್ಕೆ ನನಗಿಂತ ಹೆಚ್ಚು ಅರ್ಹರಾದ ವ್ಯಕ್ತಿಗೆ ಅವಕಾಶ ಕಲ್ಪಿಸುವ ಸಲುವಾಗಿ ನಾನು ಆ ಸ್ಥಾನದಿಂದ ಕೆಳಗಿಳಿದೆ. ಆದರೆ ಯಾರೂ ಆ ಸ್ಥಾನವನ್ನು ಒಪ್ಪಿಕೊಳ್ಳಲು ಮುಂದೆ ಬಾರದ ಕಾರಣ ನಾನೇ ಆ ಸ್ಥಾನಕ್ಕೆ ಮರಳಿದೆ. ಆರ್ಥಿಕತೆಯನ್ನು ಉಳಿಸಲು ಸಾಧ್ಯವಾಗುವಷ್ಟು ಕೆಲಸ ಮಾಡಲು ನಾನು ಸಚಿವನಾಗಿ ಮುಂದವರಿಯಲಿದ್ದೇನೆ’ ಎಂದು ಅವರು ಹೇಳಿದ್ದಾರೆ.

‘ಆರ್ಥಿಕ ದುರಂತ ಸನ್ನಿಹಿತ’

ಶ್ರೀಲಂಕಾದ ರಾಜಕೀಯ ಅಸ್ಥಿರತೆ ಕೊನೆಗೊಳ್ಳಬೇಕು. ಇಲ್ಲದೇ ಇದ್ದರೆ ಅರ್ಥ ವ್ಯವಸ್ಥೆಯು ಮಹಾದುರಂತಕ್ಕೆ ಸಾಕ್ಷಿಯಾಗಬೇಕಾದೀತು ಎಂದು ಅಲ್ಲಿನ ಉದ್ಯಮ ಮುಖಂಡರು ಎಚ್ಚರಿಸಿದ್ದಾರೆ. ರಫ್ತು, ಆಮದು ಮತ್ತು ಮೂಲಸೌಕರ್ಯಕ್ಕೆ ಸಂಬಂಧಿಸಿದ 23 ವ್ಯಾಪಾರ ಸಂಘಟನೆಗಳ ಮುಖಂಡರು ಕೊಲೊಂಬೊದಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ್ದಾರೆ.

ಪರಿಸ್ಥಿತಿಯು ದಿನದಿಂದ ದಿನಕ್ಕೆ ಹದಗೆಡುತ್ತಿದೆ. ಸಂಸದರು ಹೊಣೆಗಾರಿಕೆಯಿಂದ ವರ್ತಿಸಬೇಕು. ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು. ಇಲ್ಲದೇ ಇದ್ದರೆ ವ್ಯಾಪಾರ ವಹಿವಾಟುಗಳೆಲ್ಲವೂ ಸ್ಥಗಿತಗೊಳ್ಳುವ ಅಪಾಯ ಇದೆ ಎಂದು ಉದ್ಯಮ ವಲಯದ ನಾಯಕರು ಎಚ್ಚರಿಕೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT