ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ಷರಶಃ ಸ್ಮಶಾನವಾದ ನಗರಗಳು

ಸಂತ್ರಸ್ತರ ಆಕ್ರಂದನ, ಕಟ್ಟಡಗಳ ಅವಶೇಷಗಳಡಿ ಸಿಲುಕಿರುವವರ ರಕ್ಷಣೆಗೆ ಅವಿರತ ಶ್ರಮ
Last Updated 6 ಫೆಬ್ರುವರಿ 2023, 15:34 IST
ಅಕ್ಷರ ಗಾತ್ರ

ದಿಯಾರ್‌ಬಕಿರ್‌: ಪ್ರಬಲ ಭೂಕಂಪಕ್ಕೆ ಟರ್ಕಿ ಮತ್ತು ಸಿರಿಯಾ ತತ್ತರಿಸಿವೆ. ಗಾಢ ನಿದ್ರೆಯಲ್ಲಿದ್ದ ಸಾವಿರಾರು ಜನರು ಕಟ್ಟಡಗಳ ಅವಶೇಷಗಳಡಿ ಸಿಲುಕಿ ಬಾರದ ಲೋಕಕ್ಕೆ ತೆರಳಿದ್ದಾರೆ. ನಸುಕಿನಲ್ಲಿ ಸಂಭವಿಸಿದ ಭೂಕಂಪದಿಂದ ಟರ್ಕಿಯೆಯ ಪ್ರಮುಖ ನಗರಗಳು ಅಕ್ಷರಶಃ ಸ್ಮಶಾನವಾಗಿ ಮಾರ್ಪಟ್ಟಿವೆ.

ರಕ್ಷಣಾ ಕಾರ್ಯಾಚರಣೆ ನಡೆಸುತ್ತಿರುವವರು ಭಾರಿ ಸಾಧನಗಳನ್ನು ಬಳಸಿ ಮತ್ತು ಕೆಲವೊಮ್ಮ ಬರಿಗೈನಲ್ಲಿಯೇ ಕಟ್ಟಡಗಳ ಅವಶೇಷಗಳಡಿ ಸಿಲುಕಿರುವವರನ್ನು ರಕ್ಷಿಸಲು ಅವಿರತ ಶ್ರಮ ವಹಿಸುತ್ತಿದ್ದು, ಎಲ್ಲೆಂದರಲ್ಲಿ ಸಂತ್ರಸ್ತರ ಆಕ್ರಂದನಗಳು ಕಿವಿಗಪ್ಪಳಿಸುತ್ತಿವೆ.

‘ಭೂಕಂಪ ವಲಯದಲ್ಲಿ ವಾಸಿಸುತ್ತಿರುವುದರಿಂದ, ಈಗಲೂ ನಾನು ನಡುಗುತ್ತಿದ್ದೇನೆ. ಈ ರೀತಿಯ ಭಯಾನಕ ಅನುಭವ ಆಗುತ್ತಿರುವುದು ಇದೇ ಮೊದಲು’ ಎಂದು ಟರ್ಕಿಯೆಯ ಕಹ್ರಾಮನ್‌ಮಾರಸ್‌ನ ವರದಿಗಾರ್ತಿ ಮೆಲೀಸಾ ಸಲ್ಮಾನ್ ಅವರು ಪರಿಸ್ಥಿತಿಯ ಕರಾಳ ಮುಖವನ್ನು ವಿವರಿಸಿದ್ದಾರೆ.

‘ನನ್ನ ತಂಗಿ, ಆಕೆಯ ಗಂಡ, ಮೂವರು ಮಕ್ಕಳು ಮತ್ತು ಅತ್ತೆ, ಮಾವ ಭಗ್ನಾವಶೇಷಗಳಿಡಿ ಸಿಲುಕಿದ್ದಾರೆ’ ಎಂದು ಇಲ್ಲಿನ ನಿವಾಸಿ ಮುಹಿತ್ತೀನ್‌ ಒರಾಕ್‌ಸಿ ಎಂಬವರು ಆತಂಕದಿಂದ ಹೇಳಿದರು.

‘ಭೂಮಿ ಕಂಪಿಸುವಾಗ ನನ್ನ ಕುಟುಂಬ ನಿದ್ರಿಸುತ್ತಿತ್ತು. ಪತ್ನಿ ಮತ್ತು ಮಕ್ಕಳನ್ನು ಎಚ್ಚರಿಸಿ ಬಾಗಿಲು ತೆರೆದು ಹೊರಬಂದೆವು. ಬಳಿಕ ಇಡೀ ಕಟ್ಟಡ ಕುಸಿಯಿತು’ ಎಂದು ಒಸಾಮಾ ಅಬ್ದೆಲ್‌ ಹಮಿದ್‌ ಎಂಬವರು ಘಟನೆಯ ತೀವ್ರತೆ ವಿವರಿಸಿದರು.

ಟರ್ಕಿಯಲ್ಲಿನ ತೀವ್ರ ಚಳಿಯು ಕಾರಣ ರಕ್ಷಣಾ ಕಾರ್ಯಾಚರಣೆ ಅಡ್ಡಿಯಾಗಿದೆ. ಭೂಕಂಪದಿಂದ ಮೂರು ಪ್ರಮುಖ ವಿಮಾನ ನಿಲ್ದಾಣಗಳು ಹಾನಿಗೊಳಗಾಗಿವೆ. ಹೀಗಾಗಿ ಅಗತ್ಯ ನೆರವು ಸಾಗಣೆಗೆ ತೊಡಕಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.

‘ವಾಯವ್ಯ ಸಿರಿಯಾದ ವಿವಿಧ ನಗರ ಮತ್ತು ಗ್ರಾಮಗಳಲ್ಲಿರುವ ಹಲವು ಕಟ್ಟಡಗಳು ಕುಸಿದಿದ್ದು, ಈಗಲೂ ಹಲವು ಕುಟುಂಬಗಳು ಭಗ್ನಾವಶೇಷಗಳಡಿ ಸಿಲುಕಿವೆ’ ಎಂದು ಇಸ್ಮೈಲಿಯಾ ಅಲಾಬ್ದಲ್ಲಾ ಹೇಳಿದರು.

ಮಲ್ತಾಯ ಪ್ರಾಂತ್ಯದ 13ನೇ ಶತಮಾನದ ಪ್ರಸಿದ್ಧ ಮಸೀದಿಯು ಭಾಗಶಃ ಕುಸಿದಿದೆ. 14 ಅಂತಸ್ತಿನ 28 ಅಪಾರ್ಟ್‌ಮೆಂಟ್‌ಗಳಿದ್ದ ಕಟ್ಟಡವೂ ಧರೆಗುರುಳಿದೆ. ಸಿರಿಯಾದ ಅಲೆಪ್ಪೊ, ಲಟಕಿಯಾ, ಹಮಾ ಮತ್ತು ಟರ್ಟಸ್‌ ಪ್ರಾಂತ್ಯಗಳಲ್ಲಿ ಅಪಾರ ಪ್ರಮಾಣದ ಹಾನಿಯುಂಟಾಗಿದೆ. ಮುಂಜಾಗ್ರತಾ ಕ್ರಮವಾಗಿ ವಿದ್ಯುತ್‌ ಸಂಪರ್ಕವನ್ನು ಕಡಿತಗೊಳಿಸಲಾಗಿದೆ. ಎರಡು ವಾರ ಶಾಲೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT