ಶುಕ್ರವಾರ, ಸೆಪ್ಟೆಂಬರ್ 30, 2022
26 °C

Queen Elizabeth II | ಆಕರ್ಷಕ ವ್ಯಕ್ತಿತ್ವದ ರಾಣಿ 2ನೇ ಎಲಿಜಬೆತ್‌

ಪಿಟಿಐ Updated:

ಅಕ್ಷರ ಗಾತ್ರ : | |

ಲಂಡನ್‌: ಶಿಸ್ತು ಹಾಗೂ ಆಕರ್ಷಕ, ವಿಶಿಷ್ಟ ವಿನ್ಯಾಸದ ಉಡುಪುಗಳಿಂದ ಗಮನ ಸೆಳೆಯುತ್ತಿದ್ದ ಬ್ರಿಟನ್‌ನ ರಾಣಿ ಎರಡನೇ ಎಲಿಜಬೆತ್‌ ಇನ್ನು ನೆನಪು ಮಾತ್ರ.

1952ರಲ್ಲಿ ರಾಣಿಯಾಗಿ ಅಧಿಕಾರ ಸ್ವೀಕರಿಸಿದಾಗ ಅವರ ವಯಸ್ಸು 25. ರಾಣಿಯಾಗಿ ಸಕ್ರಿಯ, ಚುರುಕಿನಿಂದ ಕಾರ್ಯನಿರ್ವಹಿಸಿದ್ದ ಅವರು ಬಹುತೇಕ ವಾರ್ಷಿಕ ಸರಾಸರಿ 300 ಸಾರ್ವಜನಿಕ ಸಭೆಗೆ ಹಾಜರಾಗಿದ್ದರು.

ಕೋಟು, ಟೋಪಿ ಅವರ ಹೆಗ್ಗುರುತಿನ ಧಿರಿಸಾಗಿತ್ತು. ಉಡುಪಿನ ವಿನ್ಯಾಸಕ್ಕೆ ವಿಶೇಷ ಗಮನ ನೀಡುತ್ತಿದ್ದ ಅವರು, ‘ವಿಭಿನ್ನ ಉಡುಪು ಧರಿಸುವುದು ನನ್ನ ಜನರಿಗಾಗಿಯಷ್ಟೇ ಅಲ್ಲ, ಮುಂದಿನ ಪೀಳಿಗೆಗೂ ಕೂಡಾ’ ಎಂದು ಹೇಳಿದ್ದರು. ಮಾಧ್ಯಮಗಳ ಎದುರು ಬರುವಾಗ ಝಗಮಗಿಸುವ, ಆಕರ್ಷಕ ಉಡುಪು ಧರಿವುದನ್ನು ಮರೆಯುತ್ತಿರಲಿಲ್ಲ. ಸಮೂಹದಲ್ಲಿ ಪ್ರತ್ಯೇಕವಾಗಿಯೇ ಕಾಣಲು ಬಯಸುತ್ತಿದ್ದರು. 

ಸುದೀರ್ಘ ಕಾಲ ರಾಣಿಯಾಗಿದ್ದು, ಯಾವುದೇ ದೇಶದ ಆಡಳಿತದಲ್ಲಿ 70 ವರ್ಷ ಆಡಳಿತ ವ್ಯವಸ್ಥೆಯ ಮುಖ್ಯಸ್ಥೆಯಾಗಿ ಅಧಿಕಾರದಲ್ಲಿದ್ದುದು ಒಂದು ದಾಖಲೆಯಾಗಿ ಇತಿಹಾಸದ ಪುಟ ಸೇರಿದೆ. 

ಮೂರು ಬಾರಿ (1961, 1983, 1997) ಭಾರತಕ್ಕೆ ಭೇಟಿ ನೀಡಿದ್ದರು. ಭಾರತದ ಬಗ್ಗೆ ಅಭಿಮಾನ ಹೊಂದಿದ್ದ ಅವರು, ‘ಭಾರತೀಯರ ಪ್ರೀತಿ, ಆತಿಥ್ಯ ಮತ್ತು ಈ  ದೇಶದ ಸಂಸ್ಕೃತಿ, ಶ್ರೀಮಂತಿಕೆ ಮತ್ತು ವೈವಿಧ್ಯ ಎಲ್ಲರಿಗೂ ಪ್ರೇರಣೆ’ ಎಂದು ಶ್ಲಾಘಿಸಿದ್ದರು. 

1961ರಲ್ಲಿ ಪತಿ, ದಿವಂಗತ ಫಿಲಿಪ್, ಡ್ಯೂಕ್ ಆಫ್ ಎಡಿನ್ ಬರ್ಗ್ ಅವರೊಂದಿಗೆ ಮುಂಬೈ, ಚೆನ್ನೈ, ಕೋಲ್ಕತ್ತಗೆ ಪ್ರವಾಸ ಮಾಡಿದ್ದರು. ಆಗ್ರಾದ ತಾಜ್‌ಮಹಲ್‌ಗೆ ಭೇಟಿ ನೀಡಿ ಸಂಭ್ರಮಿಸಿದ್ದರು. ರಾಜ್‌ಘಾಟ್‌ಗೆ ತೆರಳಿ ಮಹಾತ್ಮಗಾಂಧಿ ಅವರಿಗೆ ಗೌರವ ಸಲ್ಲಿಸಿದರು.  

ಅಂದಿನ ರಾಷ್ಟ್ರಪತಿ ರಾಜೇಂದ್ರ ಪ್ರಸಾದ್ ಅವರ ಆಹ್ವಾನದ ಮೇರೆಗೆ ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಗೌರವ ಅತಿಥಿಯಾಗಿದ್ದರು. ಆಗಲೇ ರಾಮ್‌ಲೀಲಾ ಮೈದಾನದಲ್ಲಿ ಅಸಂಖ್ಯ ಜನರನ್ನು ಉದ್ದೇಶಿಸಿ ಭಾಷಣ ಮಾಡಿದರು. 

1919ರಲ್ಲಿ ನಡೆದಿದ್ದ ಜಲಿಯನ್‌ ವಾಲಾಬಾಗ್ ಹತ್ಯಾಕಾಂಡವನ್ನು ತಮ್ಮ ಭಾಷಣದಲ್ಲಿ ಉಲ್ಲೇಖಿಸಿದ್ದರು. ‘ನಮ್ಮ ಇತಿಹಾಸ ಹಲವು ಕ್ಲಿಷ್ಟ ಅಧ್ಯಾಯಗಳನ್ನು ಒಳಗೊಂಡಿದೆ ಎಂಬುದು ರಹಸ್ಯವೇನೂ ಅಲ್ಲ’ ಎಂದಿದ್ದರು.

ಬ್ರಿಟಿಷ್‌ ಜನರಲ್ ಅವರ ಆದೇಶದ ಮೇರೆಗೆ ನಡೆದಿದ್ದ ಹತ್ಯಾಕಾಂಡಕ್ಕಾಗಿ ರಾಣಿ ಕ್ಷಮೆ ಕೋರಬೇಕು ಎಂಬ ಆಗ್ರಹ ಕೇಳಿಬಂದಿತ್ತು. ಈ ಬೇಡಿಕೆ ನಡುವೆಯೂ ಅಮೃತಸರದಲ್ಲಿ ಜಲಿಯನ್‌ವಾಲಾಬಾಗ್‌ ಸ್ಮಾರಕಕ್ಕೆ ಭೇಟಿ ನೀಡಿ ಪುಷ್ಪನಮನ ಸಲ್ಲಿಸಿದ್ದರು. 

1983ರಲ್ಲಿ ಅವರ ಭೇಟಿ ಕಾಮನ್‌ವೆಲ್ತ್  ಸರ್ಕಾರದ ಮುಖ್ಯಸ್ಥರ ಸಭೆ (ಸಿಎಚ್‌ಒಜಿಎಂ) ಆಗಿತ್ತು. ಮದರ್ ತೆರೇಸಾ ಅವರಿಗೆ ಗೌರವಾನ್ವಿತ ‘ಆರ್ಡರ್ ಆಫ್ ದಿ ಮೆರಿಟ್’ ನೀಡಿದರು. 

ಭಾರತದ ಸ್ವಾತಂತ್ರ್ಯದ 50ನೇ ವಾರ್ಷಿಕೋತ್ಸವದ ಆಚರಣೆ ಸಂದರ್ಭದಲ್ಲಿ ನೀಡಿದ್ದೇ ಭಾರತಕ್ಕೆ ಅವರ ಅಂತಿಮ ಭೇಟಿಯಾಗಿತ್ತು. ಮೊದಲ ಬಾರಿಗೆ ಅವರು ವಸಾಹತುಶಾಹಿ ಇತಿಹಾಸದ ಕಷ್ಟದ ಘಟನೆಗಳನ್ನು ಉಲ್ಲೇಖಿಸಿದ್ದರು.

ಬ್ರಿಟನ್ ರಾಣಿ ಅವರು ಭಾರತದ  ರಾಷ್ಟ್ರಪತಿಗಳಾಗಿದ್ದ ಡಾ.ರಾಧಾಕೃಷ್ಣನ್ (1963), ಆರ್.ವೆಂಕಟರಾಮನ್ (1999), ಪ್ರತಿಭಾ ಪಾಟೀಲ್ (2009) ಅವರಿಗೆ ಅರಮನೆಗೆ ಆಹ್ವಾನಿಸಿ ಆತಿಥ್ಯ ನೀಡಿದ್ದರು. 

ಬ್ರಿಟನ್ ಹೊಸ ರಾಜ 3ನೇ ಚಾರ್ಲ್ಸ್‌

ಲಂಡನ್:  ಬ್ರಿಟನ್‌ನ ಹೊಸ ರಾಜನನ್ನು ಔಪಚಾರಿಕವಾಗಿ 3ನೇ ಚಾರ್ಲ್ಸ್ ಎಂದು ಕರೆಯಲಾಗುವುದು ಎಂದು ಕ್ಲಾರೆನ್ಸ್ ಹೌಸ್ ನಿವಾಸವು ಗುರುವಾರ ದೃಢಪಡಿಸಿತು.

‘ನನ್ನ ಪ್ರೀತಿಯ ತಾಯಿ, ರಾಣಿಯ ಸಾವು ನನಗೆ ಮತ್ತು ನನ್ನ ಕುಟುಂಬದ ಎಲ್ಲ ಸದಸ್ಯರಿಗೆ ಅತ್ಯಂತ ದುಃಖದ ಕ್ಷಣವಾಗಿದೆ. ಪ್ರೀತಿಯ ತಾಯಿಯ ಅಗಲಿಕೆಗೆ ತೀವ್ರವಾಗಿ ಶೋಕಿಸುತ್ತೇವೆ’ ಎಂದು ಬ್ರಿಟನ್ ಹೊಸ ರಾಜ 3ನೇ ಚಾರ್ಲ್ಸ್ ತಿಳಿಸಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು