ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣಾ ನಿಧಿ ಸಂಗ್ರಹಿಸಿದ ರಿಪಬ್ಲಿಕನ್‌ ಪಕ್ಷ

Last Updated 6 ಆಗಸ್ಟ್ 2020, 9:16 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ರಿಪಬ್ಲಿಕನ್‌ ಪಕ್ಷ ಹಾಗೂಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಪ್ರಚಾರ ತಂಡವು ಜೊತೆಯಾಗಿ ಜುಲೈನಲ್ಲಿ ಒಟ್ಟು 16.50 ಕೋಟಿ ಡಾಲರ್‌‌ (₹1,235 ಕೋಟಿ) ಚುನಾವಣಾ ನಿಧಿ ಸಂಗ್ರಹಿಸಿವೆ. ‌

‘ಅಧ್ಯಕ್ಷೀಯ ಚುನಾವಣೆಗೆ ಇನ್ನೂ 90 ದಿನಗಳು ಬಾಕಿ ಉಳಿದಿವೆ. ಟ್ರಂಪ್‌ ಅವರನ್ನು ಮತ್ತೊಂದು ಅವಧಿಗೆ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಬೇಕೆಂಬ ಉದ್ದೇಶದಿಂದ ನಮ್ಮ ತಂಡವು ಹಗಲಿರುಳೆನ್ನದೆ ಕೆಲಸ ಮಾಡುತ್ತಿದೆ’ ಎಂದು ರಿಪಬ್ಲಿಕನ್‌ ನ್ಯಾಷನಲ್‌ ಸಮಿತಿಯ (ಆರ್‌ಎನ್‌ಸಿ) ಮುಖ್ಯಸ್ಥೆ ರೊನ್ನಾ ಮೆಕ್‌ಡೇನಿಯಲ್‌ ಬುಧವಾರ ತಿಳಿಸಿದ್ದಾರೆ.

ಜುಲೈನಲ್ಲಿ ನಾವು ಸಂಗ್ರಹಿಸಿರುವ ನಿಧಿಯು ದಾಖಲೆಯ ಪುಟ ಸೇರಿದೆ. ಅಮೆರಿಕದಲ್ಲಿ ತಿಂಗಳೊಂದರಲ್ಲಿ ಸಂಗ್ರಹಿಸಲಾಗಿರುವ ಗರಿಷ್ಠ ನಿಧಿ ಇದಾಗಿದೆ ಎಂದು ಆರ್‌ಎನ್‌ಸಿ ಹೇಳಿದೆ.

‘ಟ್ರಂಪ್‌ ಅವರು ಮತ್ತೊಂದು ಅವಧಿಗೆ ಅಮೆರಿಕದ ಅಧ್ಯಕ್ಷರಾಗಬೇಕೆಂಬುದು ಜನರ ಬಯಕೆಯಾಗಿದೆ. ಜುಲೈನಲ್ಲಿ ದಾಖಲಾಗಿರುವ ನಿಧಿ ಸಂಗ್ರಹವು ಇದಕ್ಕೆ ನಿದರ್ಶನದಂತಿದೆ’ ಎಂದು ಟ್ರಂಪ್‌ ಪ್ರಚಾರ ತಂಡದ ಮ್ಯಾನೇಜರ್‌ ಬಿಲ್‌ ಸ್ಟೀಫನ್‌ ತಿಳಿಸಿದ್ದಾರೆ.

‘ಮತದಾರರು ವಿವಿಧ ರೀತಿಯಲ್ಲಿ ಟ್ರಂಪ್‌ ಅವರನ್ನು ಬೆಂಬಲಿಸುತ್ತಿದ್ದಾರೆ. ನಿಧಿ ಸಂಗ್ರಹ ಕಾರ್ಯಕ್ಕೆ ಕೈಜೋಡಿಸುವ ಮೂಲಕ ಟ್ರಂಪ್‌ ಮೇಲೆ ಒಲವು ವ್ಯಕ್ತಪಡಿಸಿದ್ದಾರೆ’ ಎಂದೂ ಅವರು ನುಡಿದಿದ್ದಾರೆ.

4 ಮಿಲಿಯನ್‌ ಡಾಲರ್‌ ಸಂಗ್ರಹಿಸಿದ ಇವಾಂಕ್: ಟ್ರಂಪ್‌ ಮಗಳು ಇವಾಂಕ್ ಟ್ರಂಪ್‌ ಅವರು ವರ್ಚುವಲ್‌ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಒಟ್ಟು 40ಲಕ್ಷ ಡಾಲರ್‌ (₹29.95 ಕೋಟಿ) ಚುನಾವಣಾ ನಿಧಿ ಸಂಗ್ರಹಿಸಿದ್ದಾರೆ.

ಜೂಮ್‌ ಆ್ಯಪ್‌ ಮೂಲಕ ಅವರು ನಡೆಸಿದ್ದ ಮೊದಲ ವರ್ಚುವಲ್‌ ನಿಧಿ ಸಂಗ್ರಹ ಕಾರ್ಯಕ್ರಮದಲ್ಲಿ 100ಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದರು ಎಂದು ಹೇಳಲಾಗಿದೆ.

ಇವಾಂಕ ಅವರು ಮುಂದಿನ ವಾರ ವ್ಯೋಮಿಂಗ್‌ನಲ್ಲಿ ಮತ್ತೊಂದು ವರ್ಚುವಲ್‌ ಕಾರ್ಯಕ್ರಮ ನಡೆಸುವ ನಿರೀಕ್ಷೆ ಇದೆ.

‘ಇವಾಂಕ ಅವರು ವಿವಿಧ ವಿಷಯಗಳ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಅವರ ಮಾತುಗಳನ್ನು ಆಲಿಸಲು ಜನರು ಆಸಕ್ತಿ ತೋರುತ್ತಿದ್ದಾರೆ’ ಎಂದು ಮೆಕ್‌ಡೇನಿಯಲ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT