ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Covid-19 World Update: ದಕ್ಷಿಣ ಆಫ್ರಿಕಾದಲ್ಲಿ ಕೋವಿಡ್‌ ಪ್ರಕರಣಗಳಲ್ಲಿ ಇಳಿಕೆ

Last Updated 1 ಮಾರ್ಚ್ 2021, 6:35 IST
ಅಕ್ಷರ ಗಾತ್ರ

ಜೋಹಾನ್ಸ್‌ಬರ್ಗ್‌: ದಕ್ಷಿಣ ಆಫ್ರಿಕಾದಲ್ಲಿ ಕಳೆದ ಎಂಟು ವಾರಗಳಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆ ಇಳಿಕೆಯಾಗಿರುವ ಕಾರಣ ಲಾಕ್‌ಡೌನ್‌ ನಿಯಮವನ್ನು ಸಡಿಲಗೊಳಿಸಲು ಸರ್ಕಾರ ನಿರ್ಧರಿಸಿದೆ.

ದಕ್ಷಿಣ ಆಫ್ರಿಕಾವು ಸೋಮವಾರದಿಂದ ‘ಲೆವೆಲ್‌–1‘ ಲಾಕ್‌ಡೌನ್‌ ಅನ್ನು ಜಾರಿಗೊಳಿಸುತ್ತಿದೆ. ಇದು ಐದು ಹಂತಗಳ ಲಾಕ್‌ಡೌನ್‌ ಪೈಕಿ ಅತಿ ಕಡಿಮೆ ನಿರ್ಬಂಧಗಳನ್ನು ಒಳಗೊಂಡಿರುವ ಲಾಕ್‌ಡೌನ್‌ ಆಗಿದೆ.

ಈವರೆಗೆ 15 ಲಕ್ಷ ಜನರಿಗೆ ಸೋಂಕು ತಗುಲಿದ್ದು, ಸುಮಾರು50,000 ಮಂದಿ ಸೋಂಕಿನಿಂದಾಗಿ ಮೃತಪಟ್ಟಿದ್ದಾರೆ. ‘ದೇಶವು ಕೊರೊನಾ ಸೋಂಕಿನ ಎರಡನೇ ಅಲೆಯಿಂದ ಹೊರ ಬಂದಿದೆ. ಹೊಸ ಪ್ರಕರಣಗಳು ಕಡಿಮೆಯಾಗಿವೆ. ಹಾಗೇ ಸಾವಿನ ಸಂಖ್ಯೆಯಲ್ಲೂ ಇಳಿಕೆಯಾಗಿದೆ’ ಎಂದು ದಕ್ಷಿಣ ಆಫ್ರಿಕಾದ ಅಧ್ಯಕ್ಷ ಸಿರಿಲ್ ರಾಮಾಫೊಸಾ ಅವರು ಹೇಳಿದರು.

‘ಫೆಬ್ರುವರಿಯ ಕೊನೆ ವಾರದಲ್ಲಿ ಕೇವಲ 10,000 ಹೊಸ ಪ್ರಕರಣಗಳು ವರದಿಯಾಗಿವೆ. ಜನವರಿಯ ಕೊನೆ ವಾರದಲ್ಲಿ 40,000 ಮತ್ತು ಡಿಸೆಂಬರ್‌ನ ಕೊನೆಯ ವಾರದಲ್ಲಿ 90,000 ಹೊಸ ಪ್ರಕರಣಗಳು ವರದಿಯಾಗಿದ್ದವು’ ಎಂದು ಅವರು ತಿಳಿಸಿದರು.

‘ಸಾರ್ವಜನಿಕ ಆರೋಗ್ಯ ಕ್ರಮಗಳು, ನಡವಳಿಕೆಯಲ್ಲಿನ ಬದಲಾವಣೆಗಳು ಮತ್ತು ಸೋಂಕಿತರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿದ್ದ ಕಾರಣ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆಯಾಗಿವೆ. ಆದರೂ ಜನರು ಪರಿಸ್ಥಿತಿಯನ್ನು ಕಡೆಗಣಿಸಬಾರದು. ಸಾರ್ವಜನಿಕ ಸ್ಥಳಗಳಲ್ಲಿ ಕಡ್ಡಾಯವಾಗಿ ಮಾಸ್ಕ್‌ ಧರಿಸಬೇಕು. ಮಾಸ್ಕ್‌ ಧರಿಸದಿದ್ದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ಅವರು ಎಚ್ಚರಿಕೆ ನೀಡಿದರು.

‘ಲೆವೆಲ್‌–1 ಲಾಕ್‌ಡೌನ್‌ನಲ್ಲಿ ಕರ್ಫ್ಯೂ ಸಮಯವನ್ನು ಕಡಿಮೆಗೊಳಿಸಲಾಗಿದೆ. ಪ್ರತಿನಿತ್ಯ ಮಧ್ಯರಾತ್ರಿಯಿಂದ ಬೆಳಿಗ್ಗೆ 4 ಗಂಟೆ ತನಕ ರಾತ್ರಿ ಕರ್ಫ್ಯೂ ಇರಲಿದೆ. ಸಾಮಾಜಿಕ, ರಾಜಕೀಯ ಮತ್ತು ಸಾಂಸ್ಕೃತಿಕ ಸಭೆಗಳಲ್ಲಿ 100 ಜನರಿಗೆ ಅವಕಾಶ ನೀಡಲಾಗಿದೆ.‍ ಕರ್ಫ್ಯೂ ಅವಧಿ ಹೊರತು‍ಪಡಿಸಿ ಇತರೆ ಸಮಯದಲ್ಲಿ ಮಧ್ಯ ಮಾರಾಟಕ್ಕೆ ಅನುಮತಿ ನೀಡಲಾಗಿದೆ. ಆದರೆ ಅಂತ್ಯಕ್ರಿಯೆ ಸಂದರ್ಭದಲ್ಲಿ ಸಭೆ ಸೇರುವುದನ್ನು ನಿರ್ಬಂಧಿಸಲಾಗಿದೆ ಮತ್ತು ನೈಟ್‌ ಕ್ಲಬ್‌ಗಳು ಮುಚ್ಚಿರಲಿವೆ’ ಎಂದು ಅವರು ತಿಳಿಸಿದರು.

2.54​ ಲಕ್ಷ ಸೋಂಕಿತರು ಸಾವು
ಪ್ರಪಂಚದಾದ್ಯಂತ ಕೋವಿಡ್‌-19 ಸೋಂಕಿತರ ಸಂಖ್ಯೆ 11.4 ಕೋಟಿಗೆ (11,46,89,757) ಏರಿಕೆಯಾಗಿದೆ. ಇದರಲ್ಲಿ 2.54ಲಕ್ಷ (25,43,321) ಮಂದಿ ಮೃತಪಟ್ಟಿದ್ದಾರೆ ಎಂದು ವರ್ಲ್ಡೋಮೀಟರ್‌ ವೆಬ್‌ಸೈಟ್‌ ವರದಿಮಾಡಿದೆ.

ಅತಿಹೆಚ್ಚು (2.92 ಕೋಟಿ) ಪ್ರಕರಣಗಳು ವರದಿಯಾಗಿರುವ ಅಮೆರಿಕದಲ್ಲಿ ಈವರೆಗೆ ಒಟ್ಟು 5.25 ಲಕ್ಷ ಸೋಂಕಿತರು ಮೃತಪಟ್ಟಿದ್ದಾರೆ. ನಂತರದ ಸ್ಥಾನದಲ್ಲಿರುವ ಭಾರತದಲ್ಲಿ 1.11 ಕೋಟಿ ಪ್ರಕರಣಗಳು ವರದಿಯಾಗಿದ್ದು, ಇದರಲ್ಲಿ 1.57 ಲಕ್ಷ ಜನರು ಮೃತಪಟ್ಟಿದ್ದಾರೆ. 1.07 ಕೋಟಿ ಸೋಂಕಿತರು ಗುಣಮುಖರಾಗಿದ್ದಾರೆ.

ಬ್ರೆಜಿಲ್‌ನಲ್ಲಿ2.55 ಲಕ್ಷ, ಮೆಕ್ಸಿಕೋದಲ್ಲಿ 1.85 ಲಕ್ಷ,ಇಂಗ್ಲೆಂಡ್‌ನಲ್ಲಿ 1.22 ಲಕ್ಷ, ಇಟಲಿಯಲ್ಲಿ 97 ಸಾವಿರ, ಫ್ರಾನ್ಸ್‌ನಲ್ಲಿ 86 ಸಾವಿರ ಮತ್ತುರಷ್ಯಾದಲ್ಲಿ 86 ಸಾವಿರ ಮಂದಿ ಕೋವಿಡ್-19ನಿಂದ ಸಾವಿಗೀಡಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT