ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊನೆಗೂ ರಾಜೀನಾಮೆ ನೀಡಿದ ಶ್ರೀಲಂಕಾ ಅಧ್ಯಕ್ಷ ಗೊಟಬಯ ರಾಜಪಕ್ಸ

ಅಕ್ಷರ ಗಾತ್ರ

ಕೊಲಂಬೊ/ಸಿಂಗಪುರ : ಶ್ರೀಲಂಕಾ ಅಧ್ಯಕ್ಷ ಗೊಟಬಯ ರಾಜಪಕ್ಸ ಅವರು ಗುರುವಾರ ರಾಜೀನಾಮೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮಾಲ್ದೀವ್ಸ್‌ನಿಂದ ಸಿಂಗಪುರಕ್ಕೆ ಗುರುವಾರ ತೆರಳಿರುವ ಅವರು ಅಲ್ಲಿಂದಲೇ ರಾಜೀನಾಮೆ ಪತ್ರವನ್ನು ಶ್ರೀಲಂಕಾ ಸಂಸತ್ತಿನ ಸ್ಪೀಕರ್‌ ಅವರಿಗೆ ಇ–ಮೇಲ್ ಮಾಡಿದ್ದಾರೆ ಎಂದು ಹೇಳಲಾಗಿದೆ.

ಸಿಂಗಪುರಕ್ಕೆ ಬಂದಿಳಿದ ತಕ್ಷಣ ಅವರು ರಾಜೀನಾಮೆ ಪತ್ರ ರವಾನಿಸಿದ್ದಾರೆಯೇ ಮತ್ತು ಇ–ಮೇಲ್‌ ಸ್ವರೂಪದ ರಾಜೀನಾಮೆ ಅಂಗೀಕಾರವಾಗುತ್ತದೆಯೇ ಎಂಬ ಅಂಶಗಳು ಇನ್ನೂ ಖಚಿತಪಟ್ಟಿಲ್ಲ.

ಹೆಂಡತಿಯ ಜತೆಗೆ ಮಾಲ್ದೀವ್ಸ್‌ಗೆ ಬುಧವಾರ ಪಲಾಯನ ಮಾಡಿದ್ದ ಗೊಟಬಯ ಅವರು ಗುರುವಾರ ಸಂಜೆ ವೇಳೆಗೆ ಸೌದಿ ಅರೇಬಿಯನ್ ಏರ್‌ಲೈನ್ಸ್ ವಿಮಾನದಲ್ಲಿ ಸಿಂಗಪುರಕ್ಕೆ ತೆರಳಿದ್ದಾರೆ ಎಂದು ಸಿಬ್ಬಂದಿ ತಿಳಿಸಿದ್ದಾರೆ.

ಕಪ್ಪು ದಿರಿಸಿನಲ್ಲಿದ್ದ ಅವರು, ಪತ್ನಿ ಹಾಗೂ ಇಬ್ಬರು ಭದ್ರತಾ ಸಿಬ್ಬಂದಿ ಜೊತೆ ವಿಮಾನದಲ್ಲಿ ಪ್ರಯಾಣಿಸಿದರು ಎಂದೂ ತಿಳಿಸಿದ್ದಾರೆ.

ಸಿಂಗಪುರದಲ್ಲಿ ಇಳಿಯಲು ಗೊಟಬಯ ಅವರಿಗೆ ಅಲ್ಲಿನ ಸರ್ಕಾರ ಅವಕಾಶ ಮಾಡಿಕೊಟ್ಟಿದೆ. ಗೊಟಬಯ ಅವರು ‘ಖಾಸಗಿ ಭೇಟಿ’ಗಾಗಿ ಇಲ್ಲಿಗೆ ಬಂದಿದ್ದಾರೆ ಎಂದು ಸಿಂಗಪುರದ ಅಧಿಕಾರಿಗಳು ತಿಳಿಸಿದ್ದಾರೆ.

ಕರ್ಫ್ಯೂ ವಿಸ್ತರಣೆ: ಈ ನಡುವೆ, ಗಲಭೆಪೀಡಿತ ರಾಜಧಾನಿ ಕೊಲಂಬೊ ದಲ್ಲಿ ಕರ್ಫ್ಯೂ ಮುಂದುವರಿಸಲಾಗಿದ್ದು, ಭದ್ರತಾಪಡೆಗಳು ನಗರದಲ್ಲಿ ಗಸ್ತು ನಡೆಸುತ್ತಿವೆ.

ಅಹಿತಕರ ಘಟನೆಗಳು ನಡೆಯುವುದನ್ನು ತಡೆಯಲು ಶುಕ್ರವಾರ ಬೆಳಗಿನವರೆಗೆ ನಗರದಲ್ಲಿ ಕರ್ಫ್ಯೂ ವಿಸ್ತರಿಸಲಾಗಿದೆ. ಶಸ್ತ್ರಸಜ್ಜಿತ ಯೋಧರು ವಾಹನಗಳಲ್ಲಿ ನಗರವನ್ನು ಸುತ್ತುತ್ತಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಸಂಸತ್ ಭವನದ ಬಳಿ ಗುರುವಾರ ಸಣ್ಣ ಪ್ರಮಾಣದ ಪ್ರತಿಭಟನೆ ನಡೆಯಿತು. ಉಳಿದ ಜಾಗಗಳಲ್ಲಿ ಪ್ರತಿಭಟನೆ ಅಷ್ಟಾಗಿ ಇರಲಿಲ್ಲ.

ಪ್ರಧಾನಿ ರಾನಿಲ್ ವಿಕ್ರಮಸಿಂಘೆ ಅವರನ್ನು ಪ್ರಭಾರಿ ಅಧ್ಯಕ್ಷರನ್ನಾಗಿ ನೇಮಿಸಿದ್ದು ಜನರಲ್ಲಿ ಸಿಟ್ಟು ತರಿಸಿದೆ. ‘ರಾನಿಲ್ ಮನೆಗೆ ಹೋಗಬೇಕು ಎಂಬುದು ನಮ್ಮ ಬೇಡಿಕೆ’ ಎಂದು ಆಟೋ ಚಾಲಕ ಮಲಿಕ್ ಪರೇರಾ ಎಂಬುವರು ಹೇಳಿದ್ದಾರೆ.

ಸಂಸತ್ ಭವನ ಹಾಗೂ ಪ್ರಧಾನಿ ನಿವಾಸದ ಬಳಿ ಪ್ರತಿಭಟನಕಾರರು ಹಾಗೂ ಭದ್ರತಾಪಡೆಗಳ ಮಧ್ಯೆ ನಡೆದ ಸಂಘರ್ಷದಲ್ಲಿ ಒಬ್ಬ ಮೃತಪಟ್ಟಿದ್ದು, 84 ಜನರು ಗಾಯಗೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಇಬ್ಬರು ಸೇನಾ ಸಿಬ್ಬಂದಿ ಮೇಲೆ ಆಕ್ರೋಶಭರಿತ ಜನರು ದಾಳಿ ನಡೆಸಿದ್ದರಿಂದ ಅವರು ಗಾಯಗೊಂಡಿದ್ದಾರೆ. ಯೋಧರ ಶಸ್ತ್ರಾಸ್ತ್ರಗಳನ್ನು ಕಿತ್ತುಕೊಳ್ಳಲಾಗಿದೆ.

ಶ್ರೀಲಂಕಾ: ದಿನದ ಬೆಳವಣಿಗೆ

*ತಮ್ಮ ವಿರುದ್ಧ ಸಲ್ಲಿಕೆ ಆಗಿರುವ ಮೂಲಭೂತ ಹಕ್ಕು ಅರ್ಜಿಯ ವಿಚಾರಣೆ ಶುಕ್ರವಾರ ನಡೆಯಲಿದ್ದು, ಅಲ್ಲಿಯವರೆಗೆ ದೇಶವನ್ನು ತೊರೆಯುವುದಿಲ್ಲ ಎಂದು ಶ್ರೀಲಂಕಾದ ಮಾಜಿ ಪ್ರಧಾನಿ ಮಹಿಂದ ರಾಜಪಕ್ಸ ಮತ್ತು ಮಾಜಿ ಹಣಕಾಸು ಸಚಿವ ಬಾಸಿಲ್‌ ರಾಜಪಕ್ಸ ಅವರು ಸುಪ್ರೀಂ ಕೋರ್ಟ್‌ಗೆ ಮುಚ್ಚಳಿಕೆ ನೀಡಿದ್ದಾರೆ. ಇವರಿಬ್ಬರು ಗೊಟಬಯ ಅವರ ಸಹೋದರರು

*ಶ್ರೀಲಂಕಾ ಸಂಸತ್‌ ಅಧಿವೇಶನವು ಶುಕ್ರವಾರ ನಡೆಯುವುದಿಲ್ಲ ಎಂದು ಅಲ್ಲಿಯ ಸ್ಪೀಕರ್‌ ಕಚೇರಿ ಗುರುವಾರ ತಿಳಿಸಿದೆ.ಸಂಸತ್‌ ಅಧಿವೇಶನವನ್ನು ಶುಕ್ರವಾರ ನಡೆಸಲಾಗುವುದು ಎಂದು ಈ ಮೊದಲು ಸ್ಪೀಕರ್‌ ಕಚೇರಿಯು ಘೋಷಿಸಿತ್ತು. ಅಧ್ಯಕ್ಷ ಗೊಟಬಯ ರಾಜಪಕ್ಸ ಅವರ ರಾಜೀನಾಮೆಯನ್ನು ಸ್ಪೀಕರ್‌ ಅವರು ಗುರುವಾರವೇ ಸ್ವೀಕರಿಸಿದರೆ ಸಂಸತ್‌ ಅಧಿವೇಶನದ ದಿನಾಂಕವನ್ನು ಮುಂದಿನ ಮೂರು ದಿನಗಳ ಒಳಗೆ ಘೋಷಿಸಲಾಗುವುದು ಎಂದು ಸ್ಪೀಕರ್‌ ಕಚೇರಿ ತಿಳಿಸಿದೆ.

* ವಶಕ್ಕೆ ಪಡೆದಿರುವ ಸರ್ಕಾರಿ ಕಟ್ಟಡಗಳನ್ನು ಹಿಂದಿರುಗಿಸುತ್ತೇವೆ, ಆದರೆ ಅಧ್ಯಕ್ಷ ಮತ್ತು ಪ್ರಧಾನಿ ರಾಜೀನಾಮೆ ವರೆಗೆ ಹೋರಾಟ ಮುಂದುವರಿಯಲಿದೆ ಎಂದು ಪ್ರತಿಭಟನಕಾರರು ಹೇಳಿದ್ದಾರೆ. ಅಧ್ಯಕ್ಷರ ಅರಮನೆ, ಪ್ರಧಾನಿ ಕಾರ್ಯಾಲಯ ಮುಂತಾದ ಕಟ್ಟಡಗಳನ್ನು ಪ್ರತಿಭಟನಕಾರರು ವಶದಲ್ಲಿ ಇರಿಸಿಕೊಂಡಿದ್ದರು

* ಗೊಟಬಯ ಅವರು ಸಿಂಗಪುರದಲ್ಲಿ ಬಂದಿಳಿದಾಗ, ಸಿಂಗಪುರದಲ್ಲಿ ನೆಲೆಸಿರುವ 20ಕ್ಕೂ ಹೆಚ್ಚು ಶ್ರೀಲಂಕನ್ನರು ವಿಮಾನ ನಿಲ್ದಾಣದಲ್ಲಿ ಸೇರಿದ್ದರು. ‘ಅಪರಾಧಿಯೊಬ್ಬನನ್ನು ನೋಡಲು ಬಂದಿದ್ದೇವೆ’, ‘ದೇಶವನ್ನು ನಾಶಗೊಳಿಸಿ ಪರಾರಿಯಾದ ವ್ಯಕ್ತಿಯನ್ನು ನೋಡಲು ಬಂದಿದ್ದೇವೆ’ ಎಂದು ಈ ಜನರು ಹೇಳಿದ್ದಾರೆ

* ಪ್ರತಿಭಟನಕಾರರು ಆಸ್ತಿ ಮತ್ತು ಜೀವಕ್ಕೆ ಹಾನಿ ಮಾಡಲು ಮುಂದಾದರೆ ಅದನ್ನು ತಡೆಯಲು ಅಗತ್ಯ ಬಲಪ್ರಯೋಗಿಸುವ ಅಧಿಕಾರವನ್ನು ಭದ್ರತಾ ಸಿಬ್ಬಂದಿಗೆ ಕೊಡಲಾಗಿದೆ ಎಂದು ಸೇನೆಯು ತಿಳಿಸಿದೆ

* ‘ಖಾಸಗಿ ಭೇಟಿ’ ಎಂಬ ನೆಲೆಯಲ್ಲಿ ಗೊಟಬಯ ಅವರಿಗೆ ಸಿಂಗಪುರ ಪ್ರವೇಶಕ್ಕೆ ಅವಕಾಶ ಕೊಡಲಾಗಿದೆ. ಅವರು ಆಶ್ರಯ ಕೋರಿಲ್ಲ, ಅವರಿಗೆ ಸಿಂಗಪುರ ಆಶ್ರಯ ಕೊಟ್ಟಿಲ್ಲ. ಸಿಂಗಪುರವು ಈ ರೀತಿಯ ಆಶ್ರಯ ಕೊಡುವುದೂ ಇಲ್ಲ ಎಂದು ಅಲ್ಲಿನ ವಿದೇಶಾಂಗ ಸಚಿವಾಲಯವ ವಕ್ತಾರ ಹೇಳಿದ್ದಾರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT