ಅಫ್ಗಾನಿಸ್ತಾನ: ಸಾರ್ವಜನಿಕವಾಗಿ 27 ಜನರಿಗೆ ಛಡಿಯೇಟು

ಚರಿಕಾರ್, ಅಫ್ಗಾನಿಸ್ತಾನ: ವಿವಿಧ ಅಪರಾಧಗಳಿಗೆ ಸಂಬಂಧಿಸಿದಂತೆ ಮಹಿಳೆಯರೂ ಸೇರಿದಂತೆ 27 ಜನರಿಗೆ ತಾಲಿಬಾನ್ ಸಾರ್ವಜನಿಕವಾಗಿ ಗುರುವಾರ ಛಡಿಯೇಟು ನೀಡಿದೆ. ಸುಮಾರು ಒಂದು ಮೀಟರ್ ಉದ್ದ ಮತ್ತು ನಾಲ್ಕು ಬೆರಳುಗಳ ಅಗಲದ ಬೆತ್ತದಿಂದ 20 ರಿಂದ 39 ಹೊಡೆತಗಳನ್ನು ನೀಡಲಾಯಿತು ಎನ್ನಲಾಗಿದೆ.
ಪರ್ವಾನ್ ಪ್ರಾಂತ್ಯದ ರಾಜಧಾನಿ ಚರಿಕಾರ್‌ನ ಸ್ಟೇಡಿಯಂನಲ್ಲಿ ಈ ಘಟನೆ ನಡೆದಿದ್ದು, ಸಾವಿರಾರು ಸಾರ್ವಜನಿಕರು ಇದಕ್ಕೆ ಸಾಕ್ಷಿಯಾಗಿದ್ದರು. ಛಡಿಯೇಟಿಗೆ ಒಳಗಾದವರಲ್ಲಿ 9 ಜನ ಮಹಿಳೆಯರಿದ್ದು, ವಂಚನೆ, ನಕಲಿ, ಖೋಟಾ, ಡ್ರಗ್ಸ್ ಮಾರಾಟ ಮತ್ತು ಖರೀದಿ, ದುರಾಚಾರ, ಮನೆಯಿಂದ ತಪ್ಪಿಸಿಕೊಳ್ಳುವುದು, ಹೆದ್ದಾರಿ ದರೋಡೆ ಮತ್ತು ಅಕ್ರಮ ಸಂಬಂಧ ಪ್ರಕರಣಗಳಿಗೆ ಸಂಬಂಧಿಸಿದಂತೆ ಶಿಕ್ಷೆ ವಿಧಿಸಲಾಗಿದ್ದು, ಪ್ರತಿಯೊಬ್ಬ ಆರೋಪಿಯು ಯಾವುದೇ ಒತ್ತಡ ಇಲ್ಲದೇ ಕೋರ್ಟ್‌ನಲ್ಲಿ ತಪ್ಪೊಪ್ಪಿಕೊಂಡಿದ್ದಾರೆ ಎನ್ನಲಾಗಿದೆ.
ಎಲ್ಲ ನ್ಯಾಯಾಧೀಶರು ಕಡ್ಡಾಯವಾಗಿ ಸಂಪೂರ್ಣವಾಗಿ ಇಸ್ಲಾಮಿಕ್ ಕಾನೂನನ್ನು ಪಾಲಿಸಬೇಕು ಎಂದು ತಾಲಿಬಾನ್ ಮುಖ್ಯಸ್ಥ ಹಿಬಾತುಲ್ಲಾ ಅಖುದ್ವಾಂದಾ ಕಳೆದ ತಿಂಗಳು ಆದೇಶಿಸಿದ್ದ ಹಿನ್ನೆಲೆಯಲ್ಲಿ ಸಾರ್ವಜನಿಕವಾಗಿ ಶಿಕ್ಷೆ ನೀಡಲಾಗುತ್ತಿದೆ.
ಬುಧವಾರವಷ್ಟೇ ಅಪರಾಧಿಯೊಬ್ಬನನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸಲಾಗಿತ್ತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.