ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಫ್ಗಾನಿಸ್ತಾನ: 2 ತಿಂಗಳಲ್ಲಿ ಮತ್ತೆ ಬಾಲಕಿಯರು ಶಾಲೆಗೆ?

Last Updated 16 ಜನವರಿ 2022, 11:00 IST
ಅಕ್ಷರ ಗಾತ್ರ

ಕಾಬೂಲ್‌: ಅಫ್ಗಾನಿಸ್ತಾನದಲ್ಲಿ ಮಾರ್ಚ್‌ 21ರಂದು ಹೊಸ ವರ್ಷ ಆಚರಿಸಲಾಗುತ್ತಿದ್ದು, ಬಳಿಕ ದೇಶದಲ್ಲಿ ಮಹಿಳಾ ಶಿಕ್ಷಣಕ್ಕೆ ಒಂದಿಷ್ಟು ಉತ್ತೇಜನ ಸಿಗುವ ಸುಳಿವು ಲಭಿಸಿದೆ.

ತಾಲಿಬಾನ್‌ನ ಸಂಸ್ಕೃತಿ ಮತ್ತು ಮಾಹಿತಿ ಇಲಾಖೆಯ ಉಪಸಚಿವ ಜಬಿಯುಲ್ಲಾ ಮುಜಾಹಿದ್‌ ಅವರು ಎಪಿ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಈ ವಿಷಯ ತಿಳಿಸಿದ್ದು, ಎರಡು ತಿಂಗಳ ಬಳಿಕ ದೇಶದಾದ್ಯಂತ ಬಾಲಕಿಯರಿಗಾಗಿ ಶಾಲೆಗಳು ತೆರೆಯುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.

ಕಳೆದ ವರ್ಷ ಆಗಸ್ಟ್‌ ಮಧ್ಯಭಾಗದಲ್ಲಿ ಅಫ್ಗಾನಿಸ್ತಾನವನ್ನು ತಾಲಿಬಾನ್‌ ವಶಕ್ಕೆ ಪಡೆದುಕೊಂಡ ಬಳಿಕ ದೇಶದ ಹೆಚ್ಚಿನ ಕಡೆಗಳಲ್ಲಿ 7ನೇ ತರಗತಿ ನಂತರ ಬಾಲಕಿಯರಿಗೆ ಶಿಕ್ಷಣ ಬಂದ್‌ ಆಗಿದೆ.‌ 20 ವರ್ಷಗಳ ಹಿಂದೆ ಸಹ ತಾಲಿಬಾನ್‌ ಆಡಳಿತದಲ್ಲಿ ಇಂತಹದೇ ಬೆಳವಣಿಗೆ ಕಂಡಿದ್ದ ಜಗತ್ತು ಈಗಿನ ಬೆಳವಣಿಗೆಯ ಬಗ್ಗೆ ಅಚ್ಚರಿ ಪಟ್ಟಿರಲಿಲ್ಲ. ಶಿಕ್ಷಣ, ಉದ್ಯೋಗ ಮತ್ತು ಸಾರ್ವಜನಿಕ ಜೀವನದಲ್ಲಿ ಮಹಿಳೆಯರಿಗೆ ಸ್ಥಾನವಿಲ್ಲ ಎಂಬುದು ತಾಲಿಬಾನ್‌ನ ಪ್ರಬಲ ನಿಲುವಾಗಿದೆ.‌

‘ಸದ್ಯ ಬಾಲಕಿಯರಿಗೆ ಸಹ ಶಿಕ್ಷಣ ನೀಡುವುದು ಒಂದು ಸಾಮರ್ಥ್ಯದ ಪ್ರಶ್ನೆಯಾಗುತ್ತದೆ. ಬಾಲಕಿಯರಿಗೆ ಪ್ರತ್ಯೇಕ ತರಗತಿ ಕೊಠಡಿಗಳನ್ನು, ಹಾಸ್ಡೆಲ್‌ಗಳನ್ನು ವ್ಯವಸ್ಥೆ ಮಾಡಬೇಕು. ಜನದಟ್ಟಣೆಯ ಪ್ರದೇಶಗಳಲ್ಲಿ ಪ್ರತ್ಯೇಕ ಶಾಲಾ ಕಟ್ಟಡಗಳನ್ನೇ ಒದಗಿಸಬೇಕು. ನಾವು ಹೆಣ್ಮಕ್ಕಳ ಶಿಕ್ಷಣ ವಿರೋಧಿಗಳಲ್ಲ, ಬಾಲಕಿಯರು ಶಾಲೆಗೆ ತೆರಳುವ ನಿಟ್ಟಿನಲ್ಲಿ ಇಂತಹ ವ್ಯವಸ್ಥೆಗಳನ್ನು ಮಾಡುವ ಹಂತದಲ್ಲಿದ್ದೇನೆ’ ಎಂದು ಮುಜಾಹಿದ್ ಹೇಳಿದರು.

ಸದ್ಯ ಹೇಗಿದೆ ಸ್ಥಿತಿ: ಅಫ್ಗಾನಿಸ್ತಾನದಲ್ಲಿ ಒಟ್ಟು 34 ಪ್ರಾಂತ್ಯಗಳಿದ್ದು, 10 ಪ್ರಾಂತ್ಯಗಳನ್ನು ಹೊರತುಪಡಿಸಿ ಉಳಿದೆಡೆ ಬಾಲಕಿಯರು 7ನೇ ತರಗತಿಯಿಂದ ಮುಂದಕ್ಕೆ ಶಾಲೆಗೆ ಹೋಗಬಾರದು ಎಂಬ ನಿಮಯ ಇದೆ. ರಾಜಧಾನಿ ಕಾಬೂಲ್‌ನಲ್ಲಿ ತಾಲಿಬಾನ್‌ ಆಡಳಿತ ಮತ್ತೆ ಆರಂಭವಾದ ಮೇಲೂ ಖಾಸಗಿ ವಿಶ್ವವಿದ್ಯಾಲಯಗಳಲ್ಲಿ ಹಾಗೂ ಪ್ರೌಢಶಾಲೆಗಳಲ್ಲಿ ಮಹಿಳಾ ಶಿಕ್ಷಣ ಮುಂದುವರಿದಿದೆ. ಆದರೆ ಇಲ್ಲೂ ಸಹ ಬಾಲಕಿಯರು ಬಾಲಕರ ಜತೆಯಲ್ಲಿ ಸಹ ಶಿಕ್ಷಣ ಪಡೆಯುವುದಕ್ಕೆ ನಿರ್ಬಂಧ ವಿಧಿಸಲಾಗಿದ್ದು, ಕೊಠಡಿಗಳಲ್ಲಿ ಪ್ರತ್ಯೇಕವಾಗಿರಿಸಿಯೇ ಬೋಧನೆ ನಡೆಸಲಾಗುತ್ತಿದೆ.

ತೆರಿಗೆ ಸಂಗ್ರಹ ಏರಿಕೆ: ‘ದೇಶದಲ್ಲಿ ಈಗ ಕಾರ್ಯನಿರ್ವಹಿಸುತ್ತಿರುವ ಸರ್ಕಾರಿ ನೌಕರರ ‍ಪೈಕಿ ಶೇ 80ರಷ್ಟು ಮಂದಿ ಈ ಹಿಂದಿನ ಸರ್ಕಾರಗಳ ಅವಧಿಯಲ್ಲಿ ನೇಮಕಗೊಂಡವರೇ ಆಗಿದ್ದಾರೆ. ದೇಶದ ಗಡಿ ಭಾಗದಲ್ಲಿ ಉತ್ತಮ ರೀತಿಯಿಂದ ತೆರಿಗೆ ಸಂಗ್ರಹ ನಡೆಯುತ್ತಿದ್ದು, ಈ ಹಿಂದಿನ ಸರ್ಕಾರದ ಅವಧಿಯಲ್ಲಿ ಆಗಿದ್ದಕ್ಕಿಂತ ಅಧಿಕ ತೆರಿಗೆ ಸಂಗ್ರಹ ಆಗಿದೆ. ‌ದೇಶದಿಂದ ಹೊರಗಡೆ ಹೋದ ಪ್ರಜೆಗಳು ಮತ್ತೆ ದೇಶಕ್ಕೆ ಮರಳಬೇಕು’ ಎಂದು ಮುಜಾಹಿದ್‌ ಕೋರಿದರು.

‘ಅಫ್ಗನ್ ನಾಗರಿಕರಿಗೆ ಹಿಂಸೆ ಕೊಡುವುದು ತಾಲಿಬಾನ್‌ನ ನೀತಿಯಲ್ಲ. ಹಿಂಸೆ ನೀಡುತ್ತಿರುವವರನ್ನು ಬಂಧಿಸಲಾಗುತ್ತಿದೆ. ನಮಗೆ ಯಾರೊಂದಿಗೂ ವಿವಾದವಿಲ್ಲ’ ಎಂದು ಅವರು ಹೇಳಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT