ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಹಾಯ ಮಾಡಿ...’ ವಿಶ್ವದ ರಾಷ್ಟ್ರಗಳಿಗೆ ತಾಲಿಬಾನ್‌ ಆಡಳಿತದ ಮನವಿ

Last Updated 8 ಜನವರಿ 2022, 4:25 IST
ಅಕ್ಷರ ಗಾತ್ರ

ಕಾಬೂಲ್‌: ಯುದ್ಧ ಪೀಡಿತ ಅಫ್ಗಾನಿಸ್ತಾನದಲ್ಲಿ ಎದುರಾಗಿರುವ ಮಾನವೀಯ ಬಿಕ್ಕಟ್ಟಿನ ಪರಿಹಾರಕ್ಕೆ ವಿಶ್ವದ ರಾಷ್ಟ್ರಗಳು ತಮ್ಮ ರಾಜಕೀಯ ಸಮಸ್ಯೆಯನ್ನೂ ಮೀರಿ ಸಹಾಯ ಹಸ್ತ ಚಾಚಬೇಕು ಎಂದು ತಾಲಿಬಾನ್‌ ನಾಯಕರೊಬ್ಬರು ಮನವಿ ಮಾಡಿಕೊಂಡಿದ್ದಾರೆ.

ಅಫ್ಗಾನಿಸ್ತಾನದ ಪ್ರಸ್ತುತ ಪರಿಸ್ಥಿತಿಯು ಗಂಭೀರವಾಗಿದೆ ಎಂದು ತಾಲಿಬಾನ್‌ನ ಉಪ ಪ್ರಧಾನ ಮಂತ್ರಿ ಮುಲ್ಲಾ ಅಬ್ದುಲ್ ಘನಿ ಬರಾದಾರ್ ಹೇಳಿದ್ದಾರೆ. ಆ ವಿಡಿಯೊವನ್ನು ಸರ್ಕಾರಿ ಸ್ವಾಮ್ಯದ ಮಾಧ್ಯಮ ಸಂಸ್ಥೆ ‘ಆರ್‌ಟಿಎ’ ಪ್ರಸಾರ ಮಾಡಿದೆ.

‘ಅಪ್ಗಾನಿಸ್ತಾನ ಒಂದು ಕಡೆ ನಿರ್ಬಂಧಗಳನ್ನು ಎದುರಿಸುತ್ತಿದೆ. ಮತ್ತೊಂದೆಡೆ, ಕಳೆದ 20 ವರ್ಷಗಳ ಆಡಳಿತ ದೇಶದಲ್ಲಿ ನಾಗರಿಕರಿಗೆ ಉದ್ಯೋಗಾವಕಾಶಗಳನ್ನು ಕಲ್ಪಿಸಲು ಯಾವುದೇ ಮೂಲಸೌಕರ್ಯ ಸೃಷ್ಟಿ ಮಾಡಿಲ್ಲ’ ಎಂದು ಅವರು ವಿಡಿಯೊದಲ್ಲಿ ಹೇಳಿದ್ದಾರೆ.

‘ದೇಶದ ನಾಗರಿಕರಿಗೆ ಹಣ, ವಸತಿ ಮತ್ತು ಆಹಾರದ ತೀವ್ರ ಅಗತ್ಯವಿದೆ. ಪ್ರಸ್ತುತ ಪರಿಸ್ಥಿತಿಯಲ್ಲಿ, ಅಫ್ಗನ್ನರಿಗೆ ವಿಶ್ವ ರಾಷ್ಟ್ರಗಳಿಂದ ಮಾನವೀಯ ಸಹಾಯದ ತುರ್ತು ಎದುರಾಗಿದೆ,’ ಮುಲ್ಲಾ ಬರದಾರ್ ಹೇಳಿಕೊಂಡಿದ್ದಾರೆ.

ಆದಾಗ್ಯೂ, ತುರ್ತು ಪರಿಸ್ಥಿತಿಯನ್ನು ನಿಭಾಯಿಸಲು ತಾಲಿಬಾನ್ ಸರ್ಕಾರ ಸಂಪೂರ್ಣ ಸನ್ನದ್ಧವಾಗಿದೆ ಎಂದು ಅವರು ತಿಳಿಸಿದ್ದಾರೆ. ನಾಗರಿಕರಿಗೆ ಸಹಾಯ ಮಾಡಲು ಸಚಿವಾಲಯಗಳು ಮತ್ತು ಸರ್ಕಾರಿ ಇಲಾಖೆಗಳಿಗೆ ಸೂಚನೆ ನೀಡಲಾಗಿದೆ ಎಂದೂ ಅವರು ಹೇಳಿದರು.

ವಾರದ ಹಿಂದೆ, ನೈಸರ್ಗಿಕ ವಿಕೋಪದ ಕಾರಣಕ್ಕಾಗಿ ಅಫ್ಗಾನಿಸ್ತಾನವು ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಣೆ ಮಾಡಿತ್ತು. ಅಲ್ಲಿ ವಿಪರೀತ ಹಿಮ ಮತ್ತು ಮಳೆ ಸುರಿಯುತ್ತಿದ್ದು, ದೇಶದ ಪ್ರಮುಖ ರಸ್ತೆಗಳು ಬಂದ್‌ ಆಗಿವೆ. ಜನ ಜೀವನ ಅಸ್ತವ್ಯಸ್ತಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT