ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜರ್ಮನಿಯಲ್ಲಿ ಚೀನಾದ ಎರಡು ಪೊಲೀಸ್‌ ಠಾಣೆಗಳು: ಆತಂಕ, ವಿವಾದ, ಟೀಕೆ

Last Updated 9 ಡಿಸೆಂಬರ್ 2022, 16:19 IST
ಅಕ್ಷರ ಗಾತ್ರ

ಬರ್ಲಿನ್‌: ಜರ್ಮನಿಯಲ್ಲಿ ಚೀನಾ ಕನಿಷ್ಠ ಎರಡು ಪೊಲೀಸ್ ಠಾಣೆಗಳನ್ನು ಸ್ಥಾಪಿಸಿದೆ ಎಂದು ಜರ್ಮನಿಯ ಅಧಿಕಾರಿಗಳು ಖಚಿತಪಡಿಸಿದ್ದಾರೆ. ತನ್ನ ಟೀಕಾಕರರು, ಭಿನ್ನಮತೀಯರಿಗೆ ಕಿರುಕುಳ ನೀಡಲು ಚೀನಾ ಇವುಗಳನ್ನು ಬಳಸಿಕೊಳ್ಳುತ್ತಿದೆ ಎಂದಿರುವ ವಿಶ್ಲೇಷಕರು, ಠಾಣೆಗಳ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.

ಜರ್ಮನಿಯಲ್ಲಿನ ಈ ಠಾಣೆಗಳಿಗೆ ಸ್ಥಿರ ಕಚೇರಿಗಳಿಲ್ಲ. ಚೀನಾ ಮೂಲದ, ಖಾಸಗಿ ವ್ಯಕ್ತಿಗಳು ಇವುಗಳ ಮೇಲ್ವಿಚಾರಣೆ ನಡೆಸುತ್ತಿದ್ದಾರೆ ಎಂದು ಜರ್ಮನಿಯ ಆಂತರಿಕ ಸಚಿವಾಲಯ ಹೇಳಿದೆ.

‘ಚೀನೀ ಅಧಿಕಾರಿಗಳಿಗೆ (ಜರ್ಮನಿ ನೆಲದಲ್ಲಿ) ಯಾವುದೇ ಕಾರ್ಯನಿರ್ವಾಹಕ ಅಧಿಕಾರಗಳಿಲ್ಲ’ ಎಂದು ಗುರುವಾರ ಸಂಸದರ ಪ್ರಶ್ನೆಯೊಂದಕ್ಕೆ ಸಚಿವಾಲಯ ಉತ್ತರವನ್ನೂ ನೀಡಿದೆ.

‘ಈ ವಿಷಯದ ಬಗ್ಗೆ ಜರ್ಮನಿ ಸರ್ಕಾರವು ಚೀನಾದ ರಾಯಭಾರ ಕಚೇರಿಯೊಂದಿಗೆ ಸಂಪರ್ಕದಲ್ಲಿದೆ‘ ಎಂದು ಸಚಿವಾಲಯ ತಿಳಿಸಿದೆ.

‘ಚೀನಾ ವಿಶ್ವದಾದ್ಯಂತ 54 ಪೊಲೀಸ್ ಠಾಣೆಗಳನ್ನು ಸ್ಥಾಪಿಸಿದೆ. ಚೀನಾದ ಕಮ್ಯುನಿಸ್ಟ್ ಪಕ್ಷದ ಟೀಕಾಕಾರರ ವಿರುದ್ಧ ಇವುಗಳನ್ನು ಬಳಸಲಾಗುತ್ತಿದೆ’ ಎಂದು ಸ್ಪ್ಯಾನಿಷ್ ಮೂಲದ ಸರ್ಕಾರೇತರ ಸಂಸ್ಥೆ ‘ಸೇಫ್‌ಗಾರ್ಡ್ ಡಿಫೆಂಡರ್ಸ್’ ಈ ವರ್ಷದ ಆರಂಭದಲ್ಲಿ ಹೇಳಿತ್ತು.

‘ಇದೊಂದು ಹಗರಣ. ಪ್ರಶ್ನೆ ಮಾಡಿದಾಗ ಸರ್ಕಾರವೇ ವಿವರಗಳನ್ನು ಬಹಿರಂಗಪಡಿಸಿದೆ. ಠಾಣೆಗಳು ಅಸ್ತಿತ್ವದಲ್ಲಿ ಇರುವ ಬಗ್ಗೆ ಅರಿವಿರುವ ಸರ್ಕಾರ ಅದನ್ನು ಒಪ್ಪಿಕೊಂಡು, ಏನೂ ಆಗೇ ಇಲ್ಲ ಎಂಬಂತೆ ಸುಮ್ಮನಿದೆ’ ಎಂದು ಸಂಸದ ಜೋನಾ ಕೋಟರ್ ಜರ್ಮನಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೋಟರ್‌ ಅವರು ಸರ್ಕಾರಕ್ಕೆ ಕೇಳಿದ ಪ್ರಶ್ನೆಯಿಂದಲೇ ಚೀನಾದ ಠಾಣೆಗಳ ಮಾಹಿತಿ ಬಹಿರಂಗವಾಗಿದೆ.

‘ಅವರು ಕಾನೂನಿನ ಪ್ರಕಾರ ಕಾರ್ಯನಿರ್ವಹಿಸಲು ಬಯಸಿದ್ದರೆ, ಕೂಡಲೇ ಚೀನಾದ ರಚನೆಗಳನ್ನು ಧ್ವಂಸ ಮಾಡಬೇಕು’ ಎಂದು ಕೋಟರ್ ಆಗ್ರಹಿಸಿದ್ದಾರೆ.

ಇದರೊಂದಿಗೆ, ಜಗತ್ತಿನಾದ್ಯಂತ ಇರುವ ಚೀನಾದ ಪೊಲೀಸ್‌ ಠಾಣೆಗಳ ಬಗ್ಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಆತಂಕ ಹೆಚ್ಚಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT