ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಿಜ್‌ ಟ್ರಸ್‌ ಸಂಪುಟದಲ್ಲಿ ರಿಷಿ ಸುನಕ್‌ ಬೆಂಬಲಿಗರಿಗೆ ಸ್ಥಾನವಿಲ್ಲ

ಭಾರತೀಯ ಮೂಲದ ಇಬ್ಬರಿಗೆ ಸಚಿವ ಸ್ಥಾನ
Last Updated 7 ಸೆಪ್ಟೆಂಬರ್ 2022, 10:50 IST
ಅಕ್ಷರ ಗಾತ್ರ

ಲಂಡನ್‌: ಬ್ರಿಟನ್‌ನ ನೂತನ ಪ್ರಧಾನಿ ಲಿಜ್‌ ಟ್ರಸ್‌ ಅವರು ತಮ್ಮ ಸಚಿವ ಸಂಪುಟಕ್ಕೆ ಸಚಿವರನ್ನು ನೇಮಕ ಮಾಡುವ ಪ್ರಕ್ರಿಯೆ ಆರಂಭಿಸಿದ್ದು, ನಿರೀಕ್ಷೆಯಂತೆಯೇ ಭಾರತೀಯ ಮೂಲದ ಸುವೆಲ್ಲಾ ಬ್ರೇವರ್‌ಮನ್‌ ಅವರನ್ನು ಗೃಹ ಸಚಿವರನ್ನಾಗಿ ನಿಯೋಜಿಸಿದ್ದಾರೆ. ಇನ್ನೊಬ್ಬ ಭಾರತೀಯ ಮೂಲದ ಸಂಸದ ಅಲೋಕ್ ಶರ್ಮಾ ಅವರನ್ನು ಪರಿಸರ ಕಾರ್ಯಕ್ರಮಗಳ ಹೊಣೆಗಾರಿಕೆಯಾದ ಸಿಒಪಿ26 ವಿಭಾಗದ ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದಾರೆ.

ಕನ್ಸರ್ವೇಟಿವ್ ಪಕ್ಷದ ನಾಯಕ ಸ್ಥಾನಕ್ಕಾಗಿ ನಡೆದ ಸ್ಪರ್ಧೆಯಲ್ಲಿ ತಮಗೆ ತೀವ್ರ ಪ್ರತಿಸ್ಪರ್ಧೆ ಒಡ್ಡಿದ್ದ ರಿಷಿ ಸುನಕ್‌ ಅವರನ್ನು ಬೆಂಬಲಿಸಿದ್ದ ಯಾರೊಬ್ಬರಿಗೂ ಸಂಪುಟದಲ್ಲಿ ಸ್ಥಾನ ನೀಡಿಲ್ಲ. ಹೀಗೆ ಸಚಿವ ಸ್ಥಾನದಿಂದ ವಂಚಿತರಾದ ಹಿರಿಯ ಸಂಸದರ ಪೈಕಿ ಮಾಜಿ ಕಾನೂನು ಸಚಿವ ಡೊಮಿನಿಕ್‌ ರಾಬ್, ಸಾರಿಗೆ ಸಚಿವ ಗ್ರಾಂಟ್ ಶಾಪ್ಸ್‌, ಆರೋಗ್ಯ ಸಚಿವ ಸ್ಟೀವ್ ಬರ್ಕ್ಲೇ ಸೇರಿದ್ದಾರೆ.

ಲಿಜ್‌ ಅವರು ಈ ಬೆಳವಣಿಗೆ ಹೊರತಾಗಿ ತಮ್ಮ ಸಂಪುಟದಲ್ಲಿ ಕೆಲವೊಂದು ಪ್ರಾದೇಶಿಕ ಮತ್ತು ಜನಾಂಗೀಯ ವೈವಿಧ್ಯತೆಯನ್ನು ಮೆರೆದಿದ್ದಾರೆ. ಶ್ರೀಲಂಕಾ ಮೂಲದ ರಾನಿಲ್ ಜಯವರ್ಧನೆ ಅವರನ್ನು ಪರಿಸರ, ಆಹಾರ ಮತ್ತು ಗ್ರಾಮೀಣ ವ್ಯವಹಾರಗಳ ಸಚಿವರನ್ನಾಗಿ ನೇಮಿಸಿದ್ದಾರೆ. ಬೆನ್‌ ವಾಲೇಸ್‌ ಅವರನ್ನು ರಕ್ಷಣಾ ಸಚಿವರನ್ನಾಗಿ ಮಾಡುವ ಮೂಲಕ ಭಾರಿ ದೊಡ್ಡ ಬದಲಾವಣೆ ತಂದಿದ್ದಾರೆ.

ಘಾನಾ ಮೂಲದ ಕ್ವಾಸಿ ಕ್ವಾರ್ಟೆಂಗ್‌ ಅವರನ್ನು ಬ್ರಿಟನ್‌ನ ಪ್ರಥಮ ಕಪ್ಪು ವರ್ಣೀಯ ಹಣಕಾಸು ಸಚಿವರನ್ನಾಗಿ ನೇಮಿಸಲಾಗಿದ್ದರೆ, ಸಿಯಾರಾ ಲಿಯೋನ್‌ ಮೂಲದ ಜೇಮ್ಸ್ ಕ್ಲೆವರ್ಲೆ ಅವರನ್ನು ವಿದೇಶಾಂಗ ಸಚಿವರನ್ನಾಗಿ ಮಾಡಲಾಗಿದೆ. ಲಿಜ್‌ ಅವರಿಗೆ ಅತ್ಯಂತ ನಿಕಟರಾಗಿದ್ದ ತೆರೇಸ್‌ ಕೊಫೇ ಅವರನ್ನು ಉಪಪ್ರಧಾನಿ, ಆರೋಗ್ಯ ಸಚಿವರನ್ನಾಗಿ ಹಾಗೂ ವೆಂಡಿ ಮಾರ್ಟನ್ ಅವರನ್ನು ಸಂಸದೀಯ ಸಚಿವೆ ಮತ್ತು ಪ್ರಥಮ ಮಹಿಳಾ ಮುಖ್ಯ ಸಚೇತಕರಾಗಿ ನೇಮಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT